ADVERTISEMENT

15 ಕೋಟಿಗೆ ತಿಮಿಂಗಿಲ ವಾಂತಿ ಮಾರಲು ಯತ್ನ

ಕೇರಳದ ಐವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 20:08 IST
Last Updated 1 ಏಪ್ರಿಲ್ 2023, 20:08 IST
   

ಬೆಂಗಳೂರು: ಕೇರಳದ ಮೀನುಗಾರರಿಂದ ತಿಮಿಂಗಿಲದ ವಾಂತಿ ಖರೀದಿಸಿ ತಂದು ನಗರದಲ್ಲಿ ಮಾರಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕೇರಳದ ಸಾಜೀರ್ (36), ಸಲೀಂ (30), ಚಾರ್ಲ್ಸ್ (34), ವಿಜು (41) ಹಾಗೂ ನೌಷಾದ್ (46) ಬಂಧಿತರು. ಅಕ್ರಮ ಹಣ ಸಂಪಾದಿಸಲು ತಂಡ ಕಟ್ಟಿಕೊಂಡಿದ್ದ ಆರೋಪಿಗಳು, ₹ 15 ಕೋಟಿ ಮೊತ್ತಕ್ಕೆ ತಿಮಿಂಗಿಲದ ವಾಂತಿ ಮಾರಲು ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸುಗಂಧ ದ್ರವ್ಯ ತಯಾರಿಸಲು ತಿಮಿಂಗಿಲದ ವಾಂತಿ ಬೇಕಾಗಿದೆ. ಎಷ್ಟು ಕೋಟಿ ಹಣವಾದರೂ ನೀಡುತ್ತೇನೆ’ ಎಂಬುದಾಗಿ ವ್ಯಕ್ತಿ
ಯೊಬ್ಬರು ಹೇಳಿದ್ದರು. ವಾಂತಿಗಾಗಿ ಆರೋಪಿಗಳು ಹುಡುಕಾಟ ಆರಂಭಿಸಿದ್ದರು. ಸಮುದ್ರದ ದಡದಲ್ಲಿ ಸಿಕ್ಕಿದ್ದ ತಿಮಿಂಗಿಲದ ವಾಂತಿಯನ್ನು ಕೆಲ ಮೀನುಗಾರರು ಸಂಗ್ರಹಿಸಿಟ್ಟುಕೊಂಡಿದ್ದರು. ಅವರನ್ನು ಸಂಪರ್ಕಿಸಿದ್ದ ಆರೋಪಿಗಳು, ಹಣ ನೀಡಿ ವಾಂತಿ ಖರೀದಿಸಿದ್ದರು.‘

ADVERTISEMENT

‘ಆರೋಪಿಗಳು ವಾಂತಿ ಸಮೇತ ಮಾರ್ಚ್ 30ರಂದು ಬೆಂಗಳೂರಿಗೆ ಬಂದಿದ್ದರು. ₹ 15 ಕೋಟಿ ಮೌಲ್ಯಕ್ಕೆ ವಾಂತಿ ಮಾರಲು ಯತ್ನಿಸುತ್ತಿದ್ದರೆಂಬುದು ಗೊತ್ತಾಗಿದೆ. ಆದರೆ, ಅಷ್ಟು ಮೊತ್ತಕ್ಕೆ ವಾಂತಿ ಖರೀದಿಸುತ್ತಿದ್ದ ವ್ಯಕ್ತಿಯ ಹೆಸರು ಏನು ಹಾಗೂ ವಾಂತಿಯನ್ನು ಆತ ಯಾವುದಕ್ಕೆ ಬಳಸುತ್ತಿದ್ದ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ’ ಎಂದು ಪೊಲೀಸರು ತಿಳಿಸಿದರು.

‘ಸುಗಂಧ ದ್ರವ್ಯ ತಯಾರಿಕೆಯಲ್ಲಿ ತಿಮಿಂಗಿಲದ ವಾಂತಿ ಬಳಸಲಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಬೆಲೆಯೂ ಇದೆ. ಜಪ್ತಿ ಮಾಡಿರುವ ವಾಂತಿಯ ಬೆಲೆ ₹ 15 ಕೋಟಿ ಇದೆಯಾ ಎಂಬುದನ್ನು ತಿಳಿಯಲು ತನಿಖೆ
ಮುಂದುವರಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.