ADVERTISEMENT

ಸಾಕುಮಗುವಿನ ತಲೆ ಗೋಡೆಗೆ ಗುದ್ದಿಸಿದಳು!

ಗಲಾಟೆ ಮಾಡಿದ್ದಕ್ಕೇ ಕೊಲ್ಲಲು ಮುಂದಾದಳು * ಯುವತಿಯ ಬಂಧಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 23 ಮೇ 2019, 20:09 IST
Last Updated 23 ಮೇ 2019, 20:09 IST
   

ಬೆಂಗಳೂರು: ಮನೆಯಲ್ಲಿ ಗಲಾಟೆ ಮಾಡುತ್ತ ತಮ್ಮ ನೆಮ್ಮದಿ ಹಾಳು ಮಾಡುತ್ತಿದ್ದಾನೆಂದು 4 ವರ್ಷದ ಸಾಕುಮಗನ ಬಾಯಿಗೆ ಬಟ್ಟೆ ತುರುಕಿ, ಮೈ ತುಂಬ ಕಚ್ಚಿ, ಗೋಡೆಗೆ ತಲೆ ಗುದ್ದಿಸಿ ಕೊಲ್ಲಲೆತ್ನಿಸಿದ್ದ ಮಮತಾ (20) ಎಂಬುವರನ್ನು ಜಗಜೀವನ್‌ರಾಮನಗರ ಪೊಲೀಸರು ಬಂಧಿಸಿದ್ದಾರೆ.

ಹಲ್ಲೆಯಿಂದ ಪ್ರಜ್ಞೆ ತಪ್ಪಿದ್ದ ಬಾಲಕನನ್ನು ಬಟ್ಟೆಯಲ್ಲಿ ಸುತ್ತಿದ್ದ ಮಮತಾ, ಮೂರನೇ ಮಹಡಿಯ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದರು. ಆರೋಪಿಯ ಅಣ್ಣ ಮಂಜುನಾಥ್ ಅವರು ಆತನನ್ನು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕ ವಿಶಾಲ್‌ನ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ (ಐಸಿಯು) ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ.

ಎಲ್ಲಿಂದಲೊ ತಂದಿದ್ದ ಮಗು: ‘ಕೂಲಿ ಕೆಲಸ ಮಾಡುವ ನಾನು, ತಾಯಿ ರಾಧಾ ಹಾಗೂ ತಂಗಿ ಮಮತಾ ಜತೆ ಜನತಾ ಕಾಲೊನಿಯಲ್ಲಿ ನೆಲೆಸಿದ್ದೇನೆ. ಮೊದಲು ವಾಣಿ ವಿಲಾಸ ಆಸ್ಪತ್ರೆಯಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದ ತಾಯಿ, ನಾಲ್ಕು ವರ್ಷಗಳ ಹಿಂದೆ ಎಲ್ಲಿಂದಲೋ ಒಂದು ಹಸುಗೂಸನ್ನು ಮನೆಗೆ ತಂದಿದ್ದರು. ಅದು ಹುಟ್ಟಿ ಮೂರು ದಿನಗಳಾಗಿತ್ತಷ್ಟೇ’ ಎಂದು ಮಂಜುನಾಥ್ ದೂರಿನಲ್ಲಿ ವಿವರಿಸಿದ್ದಾರೆ.

ADVERTISEMENT

‘ಆ ಮಗುವಿಗೆ ವಿಶಾಲ್ ಎಂದು ನಾಮಕರಣ ಮಾಡಿ ತುಂಬ ಪ್ರೀತಿಯಿಂದ ಸಾಕುತ್ತಿದ್ದೆವು. ವರ್ಷದಿಂದ ತಾಯಿ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದು, ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೆವು. ಈ ನಡುವೆ ಅವರು ಏಕಾಏಕಿ ಮನೆ ಬಿಟ್ಟು ಹೋಗಿದ್ದರಿಂದ ಮಮತಾಳೇ ವಿಶಾಲ್‌ನನ್ನು ನೋಡಿಕೊಳ್ಳುತ್ತಿದ್ದಳು.’

‘ಎಂದಿನಂತೆ ಮಂಗಳವಾರ ಬೆಳಿಗ್ಗೆ ನಾನು ಕೆಲಸಕ್ಕೆ ಹೋಗಿದ್ದೆ. ಮಧ್ಯಾಹ್ನ ಕರೆ ಮಾಡಿದ ನೆರೆಮನೆಯ ಚೈತ್ರಾ, ‘ಈಗಷ್ಟೇ ನಿಮ್ಮ ಮನೆಗೆ ಹೋಗಿದ್ದೆ. ಮಮತಾ ವಿಶಾಲ್‌ನ ದೇಹವನ್ನೆಲ್ಲ ಕಚ್ಚಿ ಹಾಕಿದ್ದಳು. ಪೊರಕೆಯ ಕಡ್ಡಿಗಳಿಂದಲೂ ಚುಚ್ಚಿದ್ದಳು. ತಲೆಯನ್ನು ಗೋಡೆಗೆ ಗುದ್ದಿಸಿದ್ದಳು. ನಾವು ಎಷ್ಟೇ ಹೇಳಿದರೂ ಕೇಳದೆ, ಆತನಿಗೆ ಮನಸೋಇಚ್ಛೆ ಹೊಡೆಯುತ್ತಿದ್ದಳು. ನೀವೇ ಬೇಗ ಬಂದು ವಿಶಾಲ್‌ನನ್ನು ಉಳಿಸಿಕೊಳ್ಳಿ’ ಎಂದರು. ಗಾಬರಿಯಿಂದ ತಕ್ಷಣ ಮನೆಗೆ ಬಂದೆ. ಆದರೆ, ವಿಶಾಲ್ ಕಾಣಿಸಲೇ ಇಲ್ಲ.’

‘‌ಎಷ್ಟೇ ಗದರಿದರೂ ಮಮತಾ ಕೂಡ ಆತನ ಬಗ್ಗೆ ಬಾಯ್ಬಿಡಲಿಲ್ಲ. ಇಡೀ ಕಟ್ಟಡವನ್ನು ಹುಡುಕಾಡಿದಾಗ ಮೂರನೇ ಮಹಡಿಯ ಕೋಣೆಯೊಂದರಲ್ಲಿ ಆ‌ತ ಅಸ್ವಸ್ಥನಾಗಿದ್ದ ಬಿದ್ದಿದ್ದ. ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದೆ. ವಿಶಾಲ್‌ಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಹೀಗಾಗಿ, ಆತನನ್ನು ಕೊಲ್ಲಲು ಯತ್ನಿಸಿದ ತಂಗಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಮಂಜುನಾಥ್ ದೂರಿನಲ್ಲಿ ಮನವಿ ಮಾಡಿದ್ದಾರೆ.

‘ನೆಮ್ಮದಿಗಾಗಿ ಕೊಲ್ಲಲು ಯತ್ನಿಸಿದ್ದೆ’

‘ವಿಶಾಲ್‌ ಮನೆಯಲ್ಲಿ ತುಂಬ ಗಲಾಟೆ ಮಾಡುತ್ತಿದ್ದ. ಅದರಿಂದ ನನ್ನ ನೆಮ್ಮದಿಗೆ ಭಂಗವಾಗುತ್ತಿತ್ತು. ಆತನನ್ನು ಸಾಯಿಸುವ ಉದ್ದೇಶದಿಂದಲೇ ಹಲ್ಲೆ ನಡೆಸಿದ್ದೆ’ ಎಂದು ಮಮತಾ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಕೊಲೆ ಯತ್ನ (ಐಪಿಸಿ 307) ಹಾಗೂ ಬಾಲನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಲಾಗಿದೆ ಎಂದು ಜಗಜೀವನ್‌ರಾಮನಗರ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.