ADVERTISEMENT

ವೃದ್ಧೆಯ ಗಮನ ಬೇರೆಡೆಗೆ ಸೆಳೆದು ಮಾಂಗಲ್ಯ ಕದ್ದು ಅಡಿಕೆ ಕೊಟ್ಟರು!

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 20:05 IST
Last Updated 5 ಮಾರ್ಚ್ 2019, 20:05 IST
   

ಬೆಂಗಳೂರು: ಪರ್ಸ್ ಕದ್ದಿಲ್ಲವೆಂದು ಮಾಂಗಲ್ಯ ಮುಟ್ಟಿ ಪ್ರಮಾಣ ಮಾಡುವಂತೆ ವೃದ್ಧೆಗೆ ಪೀಡಿಸಿದ ಮಹಿಳೆ, ನಂತರ ಅವರ ಗಮನ ಬೇರೆಡೆ ಸೆಳೆದು ಚಿನ್ನದ ಮಾಂಗಲ್ಯ ಸರ ದೋಚಿಕೊಂಡು ಹೋಗಿದ್ದಾಳೆ.

ಕೋಡಿಚಿಕ್ಕನಹಳ್ಳಿಯ ಶನಿಮಹಾತ್ಮ ದೇವಸ್ಥಾನದ ಬಳಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ವಂಚನೆಗೆ ಒಳಗಾದ ಹನುಮಂತಮ್ಮ ಅವರು ಬೊಮ್ಮನಹಳ್ಳಿ ಠಾಣೆಗೆ ದೂರು ಕೊಟ್ಟಿದ್ದು, ಪೊಲೀಸರು ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯ ಆಧರಿಸಿ ವಂಚಕಿಯರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಸರ ಕದ್ದು ಅಡಿಕೆ ಇಟ್ಟಳು: ‘ಮಧ್ಯಾಹ್ನ 1 ಗಂಟೆ ಸುಮಾರಿಗೆ ದೇವಸ್ಥಾನದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದೆ. ಈ ವೇಳೆ ಅಪರಿಚಿತ ಮಹಿಳೆ ಪರ್ಸ್ ತೋರಿಸಿ, ‘ರಸ್ತೆಯಲ್ಲಿ ಪರ್ಸ್‌ ಸಿಕ್ಕಿತು. ಇದು ನಿಮ್ಮದಾ’ ಎಂದಳು. ನನ್ನದಲ್ಲ ಎಂದಾಗ, ‘ಇದರಲ್ಲಿ ₹ 3 ಸಾವಿರ ಇದೆ. ಇಬ್ಬರೂ ಹಂಚಿಕೊಳ್ಳೋಣ ಬನ್ನಿ’ ಎಂದು ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋದಳು’ ಎಂದು ಹನುಮಂತಮ್ಮ ದೂರಿನಲ್ಲಿ ವಿವರಿಸಿದ್ದಾರೆ.

ADVERTISEMENT

‘ಸ್ವಲ್ಪ ಸಮಯದಲ್ಲೇ ನಮ್ಮ ಬಳಿ ಬಂದ ಇನ್ನೊಬ್ಬ ವ್ಯಕ್ತಿ, ‘ನನ್ನ ಪರ್ಸ್ ನಿಮ್ಮ ಬಳಿ ಇದೆ ಎಂದು ಗೊತ್ತಾಯಿತು. ಅದನ್ನು ಕೊಡದಿದ್ದರೆ ಪೊಲೀಸರಿಗೆ ದೂರು ಕೊಡುತ್ತೇನೆ’ ಎಂದು ಬೆದರಿಸಿದ. ಈ ವೇಳೆ ಆಕೆ, ‘ನಮ್ಮ ಬಳಿ ಯಾವುದೇ ಪರ್ಸ್ ಇಲ್ಲ. ಬೇಕಿದ್ದರೆ ಮಾಂಗಲ್ಯ ಮುಟ್ಟಿ ಆಣೆ ಮಾಡುತ್ತೇವೆ’ ಎನ್ನುತ್ತ ತನ್ನ ಮಾಂಗಲ್ಯ ಸರ ತೆಗೆದು ವೇಲ್‌ಗೆ ಕಟ್ಟಿಕೊಂಡಳು. ನಂತರ ಆ ಗಂಟನ್ನು ಗಟ್ಟಿಯಾಗಿ ಹಿಡಿದುಕೊಂಡು ಪ್ರಮಾಣ ಮಾಡಿದಳು.’

‘ಆ ನಂತರ ನನಗೂ ಪ್ರಮಾಣ ಮಾಡುವಂತೆ ಹೇಳಿದಳು. ನಾನು ಮಾಂಗಲ್ಯದ ಸರ ತೆಗೆದಾಗ ಆಕೆಯೇ ಅದನ್ನು ಸೆರಗಿಗೆ ಕಟ್ಟಿದಳು. ನಾನೂ ಆಕೆಯಂತೆಯೇ ಪ್ರಮಾಣ ಮಾಡಿ ಅಲ್ಲಿಂದ ಹೊರಟುಬಿಟ್ಟೆ. ಮನೆಗೆ ಹೋಗಿ ಗಂಟು ಬಿಚ್ಚಿದಾಗ ಅದರಲ್ಲಿ ಅಡಿಕೆ ಚೂರುಗಳಿದ್ದವು. ಈ ರೀತಿ ನನಗೆ ವಂಚಿಸಿರುವ ಮಹಿಳೆ ಹಾಗೂ ಆಕೆಯ ಸಹಚರನನ್ನು ಬಂಧಿಸಿ ಸರ ವಾಪಸ್ ಕೊಡಿಸಿ’ ಎಂದು ಹನುಮಂತಮ್ಮ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.