ADVERTISEMENT

ಶಾಲೆಯಿಂದ ಮನೆಗೆ ಹೋಗುವಾಗ ದಾರಿ ತಪ್ಪಿದ್ದ ಬಾಲಕನನ್ನು ರಕ್ಷಿಸಿದ ಆಟೊ ಚಾಲಕ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 19:49 IST
Last Updated 26 ಅಕ್ಟೋಬರ್ 2021, 19:49 IST
   

ಬೆಂಗಳೂರು: ಶಾಲೆಯಿಂದ ಮನೆಗೆ ಹೋಗುವ ವೇಳೆ ದಾರಿ ತಪ್ಪಿರಸ್ತೆಯಲ್ಲಿ ಅಲೆದಾಡುತ್ತಿದ್ದ ಆರು ವರ್ಷದ ಬಾಲಕ ರೋಹನ್‌, ಆಟೊ ಚಾಲಕ ಗೋವಿಂದರಾಜ್‌ ನೆರವಿನಿಂದ ಸುರಕ್ಷಿತವಾಗಿ ಮನೆಗೆ ಸೇರಿದ್ದಾನೆ.

‘ಚಾಮರಾಜಪೇಟೆಯ ವಾರ್ಡ್‌ ಸಂಖ್ಯೆ 46ರಲ್ಲಿರುವ ಶ್ರೀರಾಮ ಶಿಶು ವಿಹಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ರೋಹನ್‌, ಶಾಲೆ ಪುನರಾರಂಭವಾದ ಮೊದಲ ದಿನ ತರಗತಿಗೆ ಹಾಜರಾಗಿದ್ದ. ಶೌಚಾಲಯಕ್ಕೆ ಹೋಗುವುದಾಗಿ ಹೇಳಿ ಮಧ್ಯಾಹ್ನ 12.30ರ ಸುಮಾರಿಗೆ ಶಾಲೆಯಿಂದ ಹೊರಹೋಗಿದ್ದ ಆತ ಬಳಿಕ ವಾಪಸ್ಸಾಗಿರಲಿಲ್ಲ. ಈ ವಿಷಯವನ್ನು ಶಿಕ್ಷಕರು ಪೋಷಕರಿಗೆ ತಿಳಿಸಿದ್ದರು. ಪೋಷಕರು ಠಾಣೆಗೆ ಬಂದು ದೂರು ನೀಡಿದ್ದರು. ಬಾಲಕ ಕಾಣೆಯಾಗಿರುವ ಮಾಹಿತಿಯನ್ನು ಕೂಡಲೇ ಎಲ್ಲ ಠಾಣೆಗಳಿಗೆ ರವಾನಿಸಲಾಗಿತ್ತು. ವಿ.ವಿ.ಪುರ ಠಾಣೆಯಲ್ಲಿ ಬಾಲಕ ಇರುವುದು ಗೊತ್ತಾಗಿತ್ತು’ ಎಂದು ಚಾಮರಾಜಪೇಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.

‘ಬಾಲಕ ರಸ್ತೆಯಲ್ಲಿ ಅಡ್ಡಾಡುತ್ತಿದ್ದುದನ್ನು ಗಮನಿಸಿದ ಆಟೊ ಚಾಲಕ ಗೋವಿಂದರಾಜ್‌, ಕರೆದು ವಿಚಾರಿಸಿದ್ದಾರೆ. ಆತನಿಗೆ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ. ತಾನು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗದಿದ್ದರಿಂದ ಆತನನ್ನು ಆಟೊದಲ್ಲೇ ಕೂರಿಸಿಕೊಂಡು ವಿ.ವಿ.ಪುರ ಠಾಣೆಗೆ ಹೋಗಿದ್ದಾರೆ’ ಎಂದರು.

ADVERTISEMENT

‘ರೋಹನ್‌ ತಂದೆಯ ಹೆಸರು ಅಜಿತ್‌. ಬಿಹಾರದವರಾದ ಅವರು ಚಾಮರಾಜಪೇಟೆಯ 5ನೇ ಮುಖ್ಯರಸ್ತೆಯಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ಅವರಿಗೆ ಮಗುವನ್ನು ಒಪ್ಪಿಸಿದ್ದೇವೆ. ಶಿಕ್ಷಕರಿಗೂ ಎಚ್ಚರಿಕೆ ನೀಡಿದ್ದೇವೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.