ಬಂಧನ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಮನೆಗಳ್ಳತನ, ದ್ವಿಚಕ್ರ ವಾಹನ ಹಾಗೂ ಮೊಬೈಲ್‌ಗಳನ್ನು ಕಳವು ಮಾಡುತ್ತಿದ್ದ ಆಟೊ ಚಾಲಕ ಸೇರಿ ಇಬ್ಬರು ಆರೋಪಿಗಳನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿ, ₹20 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆ.ಆರ್.ಪುರ ನಿವಾಸಿ, ಆಟೊ ಚಾಲಕ ಇಮ್ರಾನ್ ಖಾನ್ ಮತ್ತು ಜಯನಗರದ ದಯಾನಂದ ನಗರ ಕೊಳೆಗೇರಿ ನಿವಾಸಿ ಸೈಯದ್ ಇಮ್ತಿಯಾಜ್ ಅಲಿಯಾಸ್ ಚಾಕು ಬಂಧಿತ ಆರೋಪಿಗಳು.
ಮನೆಯ ಬೀಗ ಮುರಿದು ಒಳನುಗ್ಗಿ ಆಭರಣ ಕಳ್ಳತನವಾಗಿದ್ದ ಬಗ್ಗೆ ಮನೆಯ ಮಾಲೀಕರಾದ ಮಂಜುಳಾ ಅವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಹಳೆ ಆರೋಪಿ ಸೈಯದ್ ಇಮ್ತಿಯಾಜ್‌ನನ್ನು ಬಂಧಿಸಿ ವಿಚಾರಣೆ ನಡೆಸಿದರು. ಬಳಿಕ ಆತ ನೀಡಿದ ಮಾಹಿತಿ ಆಧರಿಸಿ ಇಮ್ರಾನ್ ಖಾನ್‌ನನ್ನು ಬಂಧಿಸಿ, ಚಿನ್ನದ ಉಂಗುರವನ್ನು ವಶಪಡಿಸಿಕೊಂಡಿದ್ದಾರೆ.
ಸೈಯದ್‌ನಿಂದ ಒಟ್ಟು 173 ಗ್ರಾಂ. ತೂಕದ ಚಿನ್ನದ ಆಭರಣ, 570 ಗ್ರಾಂ. ತೂಕದ ಬೆಳ್ಳಿ, ಐದು ಮೊಬೈಲ್ ಹಾಗೂ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಬಂಧನದಿಂದ ಸಿದ್ದಾಪುರ ಪೊಲೀಸ್ ಠಾಣೆಯ ಐದು ಪ್ರಕರಣ, ಆಡುಗೋಡಿಯ ಎರಡು, ಕಬ್ಬನ್ ಪಾರ್ಕ್, ಹಲಸೂರು ಗೇಟ್ ಠಾಣೆಯ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.