ADVERTISEMENT

ಖಾಕಿ ಕಟ್ಟೆಚ್ಚರ; ಶಾಂತಿ ಕಾಪಾಡಿದ ಜನ

ಮಂದಿರ, ಮಸೀದಿಗಳ ಬಳಿ ಬಿಗಿ ಭದ್ರತೆ * ಎಲ್ಲೆಡೆ ಪೊಲೀಸರ ಕಣ್ಗಾವಲು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 18:23 IST
Last Updated 9 ನವೆಂಬರ್ 2019, 18:23 IST
ಪುರಭವನ ಎದುರು ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು 
ಪುರಭವನ ಎದುರು ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು    

ಬೆಂಗಳೂರು: ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸರು ಶನಿವಾರ ಹದ್ದಿನ ಕಣ್ಣು ಇಟ್ಟಿದ್ದರು.ಪ್ರಮುಖ ರಸ್ತೆ, ವೃತ್ತ, ಮಂದಿರ, ಮಸೀದಿಗಳ ಬಳಿ ಶಸ್ತ್ರಸಜ್ಜಿತ ಪೊಲೀಸರ ಓಡಾಟ ಹಾಗೂ ಗಸ್ತು ವಾಹನಗಳ ಸಂಚಾರವಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸರ್ಪಗಾವಲು ಏರ್ಪಡಿಸಲಾಗಿತ್ತು.

ತೀರ್ಪು ಪ್ರಕಟವಾಗುವ ಮಾಹಿತಿ ತಿಳಿದಿದ್ದ ಪೊಲೀಸರು ಶುಕ್ರವಾರ ರಾತ್ರಿಯಿಂದಲೇ ನಗರದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದರು. ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್‌ 144 ಅಡಿ ನಿಷೇಧಾಜ್ಞೆ ಹೊರಡಿಸಿದ್ದರಿಂದ ಜನರ ಓಡಾಟವೂ ಕಡಿಮೆ ಆಗಿತ್ತು.

ಶಿವಾಜಿನಗರ, ಫ್ರೇಜರ್‌ ಟೌನ್‌, ಡಿ.ಜಿ. ಹಳ್ಳಿ, ಕೆ.ಜಿ.ಹಳ್ಳಿ, ಗೋರಿಪಾಳ್ಯ ಸೇರಿದಂತೆ ಹಲವು ಸೂಕ್ಷ್ಮಪ್ರದೇಶಗಳಲ್ಲಿ ಪೊಲೀಸರು ದಿನವಿಡೀ ಗಸ್ತು ತಿರುಗಿದರು. ಈ ಪ್ರದೇಶಗಳಲ್ಲಿ ಔಷಧಿ ಮಳಿಗೆ, ಹೋಟೆಲ್ ಹಾಗೂ ಹಣ್ಣು, ತಿಂಡಿ–ತಿನಿಸುಗಳ ಮಳಿಗೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಅಂಗಡಿಗಳನ್ನು ವ್ಯಾಪಾರಿಗಳೇ ಸ್ವಯಂಪ್ರೇರಿತರಾಗಿ ಬಂದ್‌ ಮಾಡಿದ್ದರು. ಈ ಭಾಗದಲ್ಲಿ ಓಡಾಡುವ ಜನರ ಸಂಖ್ಯೆಯೂ ಕಡಿಮೆ ಇತ್ತು.

ADVERTISEMENT

ಎರಡನೇ ಶನಿವಾರ ಆಗಿದ್ದರಿಂದ ಸರ್ಕಾರಿ ಕಚೇರಿಗಳಿಗೆ ರಜೆ ಇತ್ತು. ಇನ್ನು ತೀರ್ಪಿನ ಹಿನ್ನೆಲೆಯಲ್ಲಿ ಶಾಲಾ– ಕಾಲೇಜುಗಳಿಗೂ ರಜೆ ನೀಡಲಾಗಿತ್ತು. ಬಹುತೇಕ ಜನರು ಮನೆಯಿಂದ ಹೊರಗೆ ಬರಲಿಲ್ಲ.

ನಿತ್ಯವೂ ಸಂಚಾರ ದಟ್ಟಣೆ ಕಂಡುಬರುತ್ತಿದ್ದ ರೇಸ್‌ ಕೋರ್ಸ್‌ ರಸ್ತೆ, ನೃಪತುಂಗ ರಸ್ತೆ, ಓಕಳಿಪುರ, ನವರಂಗ ವೃತ್ತ, ಕೆ.ಆರ್‌.ವೃತ್ತ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಹನಗಳ ಸಂಚಾರ ವಿರಳವಾಗಿತ್ತು. ರಸ್ತೆಗಳು ಖಾಲಿ ಖಾಲಿ ಆಗಿದ್ದವು.

ಅಯೋಧ್ಯೆ ತೀರ್ಪು ಪ್ರಕಟವಾಗುವ ಮುನ್ನವೇ ಪೊಲೀಸರು, ಎಲ್ಲ ಸಮುದಾಯದವರ ಜೊತೆ ಶಾಂತಿ ಪಾಲನಾ ಸಭೆ ನಡೆಸಿದ್ದರು. ಶಾಂತಿ- ಸೌಹಾರ್ದತೆ ಕಾಪಾಡುವಂತೆ ಕೋರಿದ್ದರು. ಹೀಗಾಗಿ, ತೀರ್ಪು ಪ್ರಕಟವಾದ ಬಳಿಕ ಯಾರೊಬ್ಬರೂ ಎಲ್ಲಿಯೂ ಕಾನೂನು ಉಲ್ಲಂಘನೆಯಂಥ ಕೆಲಸಕ್ಕೆ ಮುಂದಾಗಲಿಲ್ಲ.

ನಿಲ್ದಾಣದಲ್ಲೂ ಹೆಚ್ಚಿನ ಭದ್ರತೆ: ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಹಾಗೂ ರೈಲು ನಿಲ್ದಾಣದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ನಿಲ್ದಾಣಗಳಲ್ಲೂ ಹೆಚ್ಚಿನ ಜನರು ಕಾಣಿಸಲಿಲ್ಲ. ಜನರಿಲ್ಲದ ಕಾರಣಕ್ಕೆ ಹಲವು ಮಾರ್ಗಗಳಲ್ಲಿ ಬಸ್‌ಗಳ ಸಂಚಾರವನ್ನೇ ಸ್ಥಗಿತಗೊಳಿಸಲಾಗಿತ್ತು.

ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಹೊರಜಿಲ್ಲೆ ಹಾಗೂ ರಾಜ್ಯಗಳಿಂದ ಜನ ಮೆಜೆಸ್ಟಿಕ್‌ ಬರುತ್ತಾರೆ. ಆದರೆ, ಶನಿವಾರ ಜನರ ಸಂಖ್ಯೆ ತೀರಾ ಕಡಿಮೆ ಇತ್ತು. ನಿಲ್ದಾಣದಲ್ಲಿರುವ ಆಹಾರ ಮಳಿಗೆಗಳಲ್ಲೂ ವ್ಯಾಪಾರ ಇರಲಿಲ್ಲ.

ಮಂದಿರ, ಮಸೀದಿಗೆ ಹೆಚ್ಚಿನ ಭದ್ರತೆ: ನಗರದಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿರುವ ಮಂದಿರ ಹಾಗೂ ಮಸೀದಿಗಳ ಬಳಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ತಲಾ ಇಬ್ಬರು ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

ಶನಿವಾರ ಆಗಿದ್ದರಿಂದ ಆಂಜನೇಯ ಹಾಗೂ ಶನೈಶ್ವರ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಹೋಗುತ್ತಿದ್ದರು. ಹೆಚ್ಚು ಭಕ್ತರಿದ್ದ ದೇವಸ್ಥಾನ ಬಳಿಯೇ ಹೊಯ್ಸಳ ವಾಹನಗಳನ್ನು ನಿಲ್ಲಿಸಲಾಗಿತ್ತು.

ನಗರದಲ್ಲಿರುವ ಎಲ್ಲ ರಾಮ ಮಂದಿರಗಳಿಗೂ ಭದ್ರತೆ ನೀಡಲಾಗಿತ್ತು. ಜೆ.ಬಿ. ನಗರ ಹಾಗೂ ರಾಜಾಜಿನಗರದಲ್ಲಿರುವ ಮಂದಿರಗಳ ಬಳಿ ಪಿಎಸ್‌ಐ ನೇತೃತ್ವದ ತಂಡವನ್ನೇ ಭದ್ರತೆಗೆ ನಿಯೋಜಿಸಲಾಗಿತ್ತು.

ಚಾಮರಾಜಪೇಟೆ, ಡಿ.ಜೆ.ಹಳ್ಳಿ, ಶಿವಾಜಿನಗರ ಹಾಗೂ ಇತರೆ ಪ್ರದೇಶಗಳಲ್ಲಿರುವ ಮಸೀದಿ ಬಳಿಯೂ ಪೊಲೀಸರು ಗಸ್ತು ತಿರುಗಿದರು.

ಜಾಲತಾಣಗಳ ಮೇಲೆ ಡಿಸಿಪಿ ನಿಗಾ
ತೀರ್ಪಿನ ಬಗ್ಗೆ ಪ್ರಕಟವಾಗುವ ಪೋಸ್ಟ್‌ಗಳನ್ನು ಇಡೀ ದಿನ ಡಿಸಿಪಿ ನೇತೃತ್ವದ ತಂಡ ಗಮನಿಸಿತು. ಫೇಸ್‌ಬುಕ್‌, ಟ್ವಿಟರ್‌ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳ ಮೇಲೂ ತಂಡ ನಿಗಾ ವಹಿಸಿತ್ತು. ಪ್ರಚೋದನಾಕಾರಿಯಾದ ಯಾವುದೇ ಪೋಸ್ಟ್‌ಗಳೂ ಗಮನಕ್ಕೆ ಬರಲಿಲ್ಲ ಎಂದು ತಂಡದ ಸದಸ್ಯರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.