ಬೆಂಗಳೂರು: ಜನರಿಗೆ ಆರೋಗ್ಯ ಭರವಸೆ ಒದಗಿಸುವ ‘ಆಯುಷ್ಮಾನ್ ಭಾರತ್’ ಯೋಜನೆಯ ಅನುದಾನಕ್ಕೆ ಸಂಬಂಧಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಸಂಘರ್ಷ ಏರ್ಪಟ್ಟಿದೆ. ಕೇಂದ್ರದಿಂದ ಹೆಚ್ಚಿನ ನೆರವು ಸಿಗದ ಕಾರಣ ಸದ್ಯ ರಾಜ್ಯ ಸರ್ಕಾರವೇ ಯೋಜನೆಯ ಶೇಕಡ 75ರಷ್ಟು ವೆಚ್ಚ ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಅನುಷ್ಠಾನಗೊಂಡಿರುವ ಕೇಂದ್ರ ಸರ್ಕಾರದ ಈ ಯೋಜನೆಯಡಿ, ಐದು ವರ್ಷಗಳಲ್ಲಿ ₹7,239 ಕೋಟಿ ಬಳಕೆ ಮಾಡಲಾಗಿದೆ. ಕೇಂದ್ರದಿಂದ ₹2,056.60 ಕೋಟಿ ಅನುದಾನ ಬಿಡುಗಡೆಯಾಗಿದ್ದರೆ, ಉಳಿದ ₹5,183.19 ಕೋಟಿ ಹಣವನ್ನು ರಾಜ್ಯ ಸರ್ಕಾರವೇ ಭರಿಸಿದೆ. ಯೋಜನೆಯ ನಿಯಮದ ಪ್ರಕಾರ, ಕೇಂದ್ರ ಸರ್ಕಾರ ಶೇ 60ರಷ್ಟು ಹಾಗೂ ರಾಜ್ಯ ಸರ್ಕಾರ ಶೇ 40ರಷ್ಟು ಅನುದಾನ ಒದಗಿಸಬೇಕು. ಕೇಂದ್ರದಿಂದ ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ, ಯೋಜನೆಯ ಪರಿಣಾಮಕಾರಿ ಜಾರಿಗೆ 60ರಷ್ಟು ಅನುದಾನ ಒದಗಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮನವಿ ಮಾಡಿದೆ.
ಆಯುಷ್ಮಾನ್ ಮಿಷನ್ ಅಡಿ 2018ರಲ್ಲಿ ಪ್ರಾರಂಭವಾಗಿರುವ ಈ ಯೋಜನೆಯನ್ನು, ರಾಜ್ಯದಲ್ಲಿ ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಹೆಸರಿನಲ್ಲಿ ಅನುಷ್ಠಾನ ಮಾಡಲಾಗಿದೆ. ಯೋಜನೆಯಡಿ ಬಿಪಿಎಲ್ ಕುಟುಂಬದವರಿಗೆ ವರ್ಷಕ್ಕೆ ₹5 ಲಕ್ಷದವರೆಗೆ ಆರೋಗ್ಯ ವಿಮೆಗೆ ಅವಕಾಶವಿದೆ. ರಾಜ್ಯದಲ್ಲಿ 62.09 ಲಕ್ಷ ಕುಟುಂಬಗಳು ‘ಆಯುಷ್ಮಾನ್ ಭಾರತ್’ ಯೋಜನೆ ವ್ಯಾಪ್ತಿಗೆ ಬರಲಿವೆ. ಉಳಿದ ಕುಟುಂಬಗಳನ್ನು ‘ಆರೋಗ್ಯ ಕರ್ನಾಟಕ’ ಯೋಜನೆಯಡಿ ಸೇರ್ಪಡೆ ಮಾಡಲಾಗಿದೆ. ಎಪಿಎಲ್ ಕುಟುಂಬದ ಸದಸ್ಯರಿಗೆ ಗರಿಷ್ಠ ₹1.50 ಲಕ್ಷ ಚಿಕಿತ್ಸಾ ವೆಚ್ಚ ನಿಗದಿ ಮಾಡಿದ್ದು, ಶೇ 30ರಷ್ಟು ಹಣವನ್ನು ಪಾವತಿಸಲಾಗುತ್ತದೆ.
ಪರಿಷ್ಕರಣೆಯಾಗದ ಪ್ಯಾಕೇಜ್: ಯೋಜನೆಯಡಿ ಚಿಕಿತ್ಸಾ ಪ್ಯಾಕೇಜ್‌ಗಳ ದರ ಕಡಿಮೆ ಎಂಬ ಕಾರಣಕ್ಕೆ ಕೆಲವು ಖಾಸಗಿ ಆಸ್ಪತ್ರೆಗಳು ನೋಂದಣಿಗೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಖಾಸಗಿ ಆಸ್ಪತ್ರೆಗಳ ಸಂಘಟನೆಯು ದರ ಪರಿಷ್ಕರಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತಲೇ ಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ದರ ಪರಿಷ್ಕರಿಸಿದರೆ ಯೋಜನೆಯಡಿ ಶೇ 90ರಷ್ಟು ಅನುದಾನವನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗುತ್ತದೆ. ಆದ್ದರಿಂದ ದರ ಪರಿಷ್ಕರಣೆ ಪ್ರಸ್ತಾವ ಸಾಕಾರಗೊಂಡಿಲ್ಲ. ಈ ಅನುದಾನದ ಸಂಘರ್ಷದಿಂದಲೇ 70 ವರ್ಷ ಮೇಲ್ಪಟ್ಟವರಿಗೆ ಆರೋಗ್ಯ ವಿಮೆ ಒದಗಿಸುವ, ‘ಆಯುಷ್ಮಾನ್ ವಯೋ ವಂದನಾ’ ಯೋಜನೆಯೂ ರಾಜ್ಯದಲ್ಲಿ ಜಾರಿಯಾಗಿಲ್ಲ.
‘ಯೋಜನೆಯಡಿ ಚಿಕಿತ್ಸಾ ಪ್ಯಾಕೇಜ್ ದರ ಪರಿಷ್ಕರಣೆ ಮಾಡುವ ಪ್ರಸ್ತಾವ ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ. ದರ ಪರಿಷ್ಕರಿಸಿದರೆ ಹೆಚ್ಚಿನ ಅನುದಾನವನ್ನು ರಾಜ್ಯವೇ ಭರಿಸಬೇಕಾಗುತ್ತದೆ. ಆರ್ಥಿಕ ಇಲಾಖೆ ಅನುಮೋದನೆ ನೀಡಿದಲ್ಲಿ ಪರಿಷ್ಕರಣೆಯಾಗಲಿದೆ’ ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
Highlights - ಅಂಕಿ–ಅಂಶಗಳು 2,965 ಯೋಜನೆಯಡಿ ನೋಂದಾಯಿತ ಸರ್ಕಾರಿ ಆಸ್ಪತ್ರೆಗಳು 588 ಯೋಜನೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳು 1,650 ಯೋಜನೆಯಡಿ ಬರುವ ಚಿಕಿತ್ಸಾ ಪ್ಯಾಕೇಜ್‌ಗಳು
ಯೋಜನೆಯಡಿ ರಾಜ್ಯ ಸರ್ಕಾರವೇ ಶೇ 75 ರಷ್ಟು ಅನುದಾನ ಒದಗಿಸುತ್ತಿದೆ. ಕೇಂದ್ರದ ಪಾಲು ಶೇ 25ರಷ್ಟು ಮಾತ್ರ. ಚಿಕಿತ್ಸಾ ಪ್ಯಾಕೇಜ್ ದರ ಪರಿಷ್ಕರಿಸಿದರೆ ಕೇಂದ್ರದ ಪಾಲು ಇನ್ನಷ್ಟು ಕಡಿಮೆ ಆಗಲಿದೆದಿನೇಶ್ ಗುಂಡೂರಾವ್ ಆರೋಗ್ಯ ಸಚಿವ
ಕೋಟಿ ದಾಟಿದ ಪ್ರಕರಣ
ರಾಜ್ಯದಲ್ಲಿ ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆಯಡಿ ಚಿಕಿತ್ಸೆ ಪಡೆದುಕೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. 2020ರಲ್ಲಿ ಯೋಜನೆಯಡಿ ಚಿಕಿತ್ಸೆ ಪಡೆದವರ ವಾರ್ಷಿಕ ಸಂಖ್ಯೆ ಎಂಟು ಲಕ್ಷದ ಆಸುಪಾಸಿನಲ್ಲಿದ್ದರೆ ಆ ಸಂಖ್ಯೆ 2024ರಲ್ಲಿ 35 ಲಕ್ಷ ದಾಟಿದೆ. ಐದು ವರ್ಷಗಳಲ್ಲಿ 1.09 ಕೋಟಿ ಪ್ರಕರಣಗಳಲ್ಲಿ ಚಿಕಿತ್ಸೆ ಒದಗಿಸಲಾಗಿದೆ. ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಿಗೂ ಚಿಕಿತ್ಸೆಗೆ ಅನುಸಾರ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಹಣ ಬಿಡುಗಡೆ ಮಾಡುತ್ತಿದೆ.
ಈ ಹಣವನ್ನು ಆಸ್ಪತ್ರೆಗಳ ಅಭಿವೃದ್ಧಿ ಹಾಗೂ ವೈದ್ಯರು ವೈದ್ಯಕೀಯ ಸಿಬ್ಬಂದಿಗೆ ಪ್ರೋತ್ಸಾಹ ಧನ ಒದಗಿಸಲು ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಯೋಜನೆಯಡಿ ವಿವಿಧ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗೆ ಆದ್ಯತೆ ನೀಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.