ADVERTISEMENT

ಆಸ್ಪತ್ರೆ ಮೇಲ್ದರ್ಜೆಗೆ; ತಜ್ಞರ ಸಮಿತಿ ರಚನೆ: ಬಿ. ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 21:30 IST
Last Updated 21 ಸೆಪ್ಟೆಂಬರ್ 2020, 21:30 IST

ಬೆಂಗಳೂರು: ‘ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಅನುಕೂಲವಾಗುವಂತೆ ತಜ್ಞರ ಸಮಿತಿ ರಚಿಸಲಾಗುವುದು’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು.

ಸಾರ್ವಜನಿಕ ಆರೋಗ್ಯ ಸೇವೆಯ ಗುಣಮಟ್ಟಕ್ಕೆ ಸಂಬಂಧಿಸಿ ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ನ ಪಿ.ಆರ್. ರಮೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಆರೋಗ್ಯ ಇಲಾಖೆಯ ಯಾವುದೇ ಆಸ್ಪತ್ರೆ ಎನ್‌ಎಬಿಎಚ್ ಸಂಸ್ಥೆಯಿಂದ ಮಾನ್ಯತೆ ಪಡೆದಿಲ್ಲ. ಇಲಾಖೆಯ ಅಡಿ ಯಲ್ಲಿ 11,757 ಸರ್ಕಾರಿ ಆಸ್ಪತ್ರೆಗಳಿವೆ. ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ರಾಷ್ಟ್ರೀಯ ಗುಣಮಟ್ಟ ಖಾತರಿ ಮಾನದಂಡ ಅಥವಾ ಮಾದರಿ (ಎನ್‌ಕ್ಯೂಎಎಸ್) ನೀಡಿದೆ. ಅದರಂತೆ ರಾಜ್ಯದ ಆಸ್ಪತ್ರೆಗಳನ್ನು ಹಂತ ಹಂತವಾಗಿ ಎನ್‌ಕ್ಯೂಎಎಸ್ ಅಡಿಯಲ್ಲಿ ಅಳವಡಿಸಿಕೊಳ್ಳಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

‘ಎನ್‌ಕ್ಯೂಎಎಸ್ಅಡಿಯಲ್ಲಿ 18 ಜಿಲ್ಲಾಸ್ಪತ್ರೆಗಳು, 34 ಸಮುದಾಯ ಆರೋಗ್ಯ ಕೇಂದ್ರಗಳು, 76 ಪ್ರಾಥಮಿಕ ಕೇಂದ್ರ ಮತ್ತು 29 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮಾನ್ಯತೆ ಪಡೆದಿದೆ. ಎನ್‌ಕ್ಯೂಎಎಸ್ ಮಾನದಂಡಗಳನ್ನು ಅಳವಡಿಸಿಕೊಳ್ಳಲು ಪೂರಕವಾಗುವಂತೆ ತಜ್ಞರ ಸಮಿತಿ ರಚಿಸಲಾಗುವುದು’ ಎಂದರು.

ADVERTISEMENT

ಅದಕ್ಕೆ ಪ್ರತಿಕ್ರಿಯಿಸಿದ ಪಿ.ಆರ್. ರಮೇಶ್, ‘ಕೇರಳ ಮತ್ತು ತಮಿಳು ನಾಡಿನಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಎನ್‌ಕ್ಯೂಎಎಸ್ ಮಾನದಂಡಗಳನ್ನು ಅಳವಡಿಸಿಕೊಂಡು ಕೇಂದ್ರದಿಂದ ಕೋಟ್ಯಂತರ ರೂಪಾಯಿ ಅನುದಾನ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲೂ ಅದೇ ಮಾದರಿ ಅಳವಡಿಸಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.