ADVERTISEMENT

ಅಜಿತ್‌ ರೈ ಜಾಮೀನು ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 19:30 IST
Last Updated 21 ಜುಲೈ 2023, 19:30 IST
ಅಜಿತ್‌ ಕುಮಾರ್‌ ರೈ
ಅಜಿತ್‌ ಕುಮಾರ್‌ ರೈ   

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಅಸ್ತಿ ಹೊಂದಿರುವ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕೆ.ಆರ್‌. ಪುರ ತಾಲ್ಲೂಕಿನ ಹಿಂದಿನ ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ.

ಲೋಕಾಯುಕ್ತ ಪೊಲೀಸರು ಜೂನ್‌ 28ರಂದು ಅಜಿತ್‌ ರೈ ಮನೆ ಮೇಲೆ ದಾಳಿಮಾಡಿ ಶೋಧ ನಡೆಸಿದ್ದರು. ವಿಚಾರಣೆಗೆ ಸಹಕರಿಸದ ಆರೋಪದ ಮೇಲೆ ಜೂನ್‌ 29ರಂದು ಬಂಧಿಸಲಾಗಿತ್ತು. ವಿಚಾರಣೆಗಾಗಿ ಕೆಲವು ದಿನಗಳ ಕಾಲ ತನಿಖಾ ತಂಡದ ವಶಕ್ಕೆ ನೀಡಲಾಗಿತ್ತು. ನಂತರ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಅಜಿತ್‌ ರೈ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಆಕ್ಷೇಪಣೆ ಸಲ್ಲಿಸಿದ್ದ ಲೋಕಾಯುಕ್ತ ಪೊಲೀಸರು, ‘ಆರೋಪಿ ವಿರುದ್ಧ ತನಿಖೆ ಬಾಕಿ ಇದೆ. ಬಹಳಷ್ಟು ದಿನಗಳ ಕಾಲ ತನಿಖೆ ನಡೆಯಬೇಕಿದೆ. ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಯುತ್ತಿದೆ. ಈ ಸಂದರ್ಭದಲ್ಲಿ ಜಾಮೀನು ಮಂಜೂರು ಮಾಡಿದರೆ ತನಿಖೆಗೆ ಹಿನ್ನಡೆ ಆಗುವ ಅಪಾಯವಿದೆ’ ಎಂದು ಜಾಮೀನು ನೀಡುವುದನ್ನು ಬಲವಾಗಿ ವಿರೋಧಿಸಿದ್ದರು.

ADVERTISEMENT

ಅರ್ಜಿದಾರರ ಪರ ವಕೀಲರು ಮತ್ತು ಲೋಕಾಯುಕ್ತ ಪೊಲೀಸರ ಪರ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರ ವಾದಗಳನ್ನು ಆಲಿಸಿದ್ದ ನ್ಯಾಯಾಧೀಶ ಎಸ್‌.ವಿ. ಶ್ರೀಕಾಂತ್‌ ಆದೇಶ ಕಾಯ್ದಿರಿಸಿದ್ದರು. ಶುಕ್ರವಾರ ಆದೇಶ ಪ್ರಕಟಿಸಿದ್ದು, ಜಾಮೀನು ಕೋರಿ ಅಜಿತ್‌ ರೈ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಿರುವುದಾಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.