ADVERTISEMENT

ಪ್ರಾಣಿಗಳ ಅಕ್ರಮ ಸಾಗಣೆ ತಡೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 20:15 IST
Last Updated 8 ಆಗಸ್ಟ್ 2019, 20:15 IST

ಬೆಂಗಳೂರು: ‘ಇದೇ 12ರಂದು ನಡೆಯಲಿರುವ ಬಕ್ರೀದ್‌ ಹಬ್ಬದ ಪ್ರಯುಕ್ತ ಪ್ರಾಣಿಗಳ ಅಕ್ರಮ ಸಾಗಣೆ, ವ್ಯಾಪಾರ ಮತ್ತು ಹತ್ಯೆಯ ತಡೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಈ ಕುರಿತಂತೆ ನಗರದ ಬೊಮ್ಮನಹಳ್ಳಿ ನಿವಾಸಿ ವಲ್ಲಂಕೊಂಡು ನಾಗಲಾಲಸಾ ಅವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್‌ ಅರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಲಾಗಿದ್ದು ವಿಚಾರಣೆ ಮುಂದೂಡಲಾಗಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ಬಿ.ಬಾಲಕೃಷ್ಣ ಅವರು, ಈ ಸಂಬಂಧ ನಗರ ಪೊಲೀಸ್ ಆಯುಕ್ತರು ಜುಲೈ 30ರಂದು ಹೊರಡಿಸಿರುವ ಸುತ್ತೋಲೆಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ADVERTISEMENT

ಸುತ್ತೋಲೆಯಲ್ಲಿ ಏನಿದೆ?:

l ರಾತ್ರಿ ಗಸ್ತಿನಲ್ಲಿರುವ ಅಧಿಕಾರಿಗಳು, ಡಿಸಿಪಿ ಹಾಗೂ ಎಸಿಪಿಗಳು ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು.

l ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಸದಸ್ಯರ ಶಾಂತಿ ಸಮಿತಿ ಸಭೆ ನಡೆಸಬೇಕು.

l ಪ್ರಾರ್ಥನೆ ನಡೆಯುವ ಸ್ಥಳಗಳು, ಮಸೀದಿಗಳು, ಈದ್ಗಾ ಮೈದಾನ, ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಶಸ್ತ್ರಸಜ್ಜಿತ ಸಿಬ್ಬಂದಿ ನಿಯೋಜಿಸಬೇಕು.

l ಜುಲೈ 21ರಿಂದ ಈವರೆಗೆ ದೇವನಹಳ್ಳಿ, ಯಲಹಂಕ ನ್ಯೂ ಟೌನ್, ಜಾಲಹಳ್ಳಿ ಮತ್ತು ಬಗಲುಗುಂಟೆ ವ್ಯಾಪ್ತಿಯಲ್ಲಿ 60ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.