ADVERTISEMENT

ಬಾಣಸವಾಡಿ ಕೆರೆ: 5 ಎಕರೆ ಸ್ವಾಧೀನಕ್ಕೆ ಆದೇಶ

ದಶಕಗಳಿಂದ ಖಾಸಗಿ ವ್ಯಕ್ತಿ ವಶದಲ್ಲಿದ್ದ ಜಾಗ l ಮಾರುಕಟ್ಟೆ ಮೌಲ್ಯ ₹200 ಕೋಟಿ

ಮಂಜುನಾಥ್ ಹೆಬ್ಬಾರ್‌
Published 4 ಮಾರ್ಚ್ 2020, 20:16 IST
Last Updated 4 ಮಾರ್ಚ್ 2020, 20:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಾಣಸವಾಡಿ ಕೆರೆಯ ಅತಿಕ್ರಮಣ ತೆರವಿಗೆ ನಗರ ಜಿಲ್ಲಾಡಳಿತ ಮತ್ತೊಂದು ಹೆಜ್ಜೆ ಇಟ್ಟಿದೆ. ಖಾಸಗಿ ವ್ಯಕ್ತಿಯ ಸ್ವಾಧೀನದಲ್ಲಿರುವ 5 ಎಕರೆ ಜಾಗ ಸರ್ಕಾರಕ್ಕೆ ಸೇರಿದ್ದು ಎಂದು ಕಂದಾಯ ದಾಖಲೆಗಳಲ್ಲಿ ನಮೂದಿಸುವಂತೆ ಬೆಂಗಳೂರು ಉತ್ತರ ವಿಶೇಷ ಜಿಲ್ಲಾಧಿಕಾರಿ ಎಂ.ಕೆ.ಜಗದೀಶ್‌ ಆದೇಶಿಸಿದ್ದಾರೆ.

ಕೆರೆಯಂಗಳದಲ್ಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಎಚ್‌ಆರ್‌ಬಿಆರ್‌ ಬಡಾವಣೆ ನಿರ್ಮಿಸಿದ್ದು, ಈ ಪ್ರದೇಶದಲ್ಲಿ ಚದರ ಅಡಿ ಜಾಗಕ್ಕೆ ₹10 ಸಾವಿರದಷ್ಟು ಮಾರುಕಟ್ಟೆ ದರ ಇದೆ. 5 ಎಕರೆ ಜಾಗದ ಮಾರುಕಟ್ಟೆ ಮೌಲ್ಯವೇ ಸುಮಾರು ₹200 ಕೋಟಿ ಆಗುತ್ತದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.

ಜೋಡಿ ಗ್ರಾಮ: ಬಾಣಸವಾಡಿಯ ಸರ್ವೆ ಸಂಖ್ಯೆ 211ರಲ್ಲಿ 42 ಎಕರೆ 22 ಗುಂಟೆ ಜಾಗ ಇದೆ. ಬಾಣಸವಾಡಿ ಗ್ರಾಮ ಈ ಹಿಂದೆ ಜೋಡಿ ಗ್ರಾಮ ಎಂದು ಗುರುತಿಸಿಕೊಂಡಿತ್ತು. 42 ಎಕರೆ 22 ಗುಂಟೆ ಜಾಗದಲ್ಲಿ ನೆಲೆಸುವ ಹಕ್ಕು ನೀಡುವಂತೆ ಜೋಡಿದಾರ್‌ ಆಗಿದ್ದ ರಾಜಾ ರತ್ನಂ ಮೊದಲಿಯಾರ್ ಎಂಬುವರು 1958ರಲ್ಲಿ ವಿಶೇಷ ಜಿಲ್ಲಾಧಿಕಾರಿ ಅವರಿಗೆ ಅರ್ಜಿ ಹಾಕಿದ್ದರು. ಇದು ಕೆರೆ ಜಾಗ ಆಗಿರುವುದರಿಂದ ಹಕ್ಕು ನೀಡಲು ಸಾಧ್ಯವಿಲ್ಲ ಎಂದು ವಿಶೇಷ ಜಿಲ್ಲಾಧಿಕಾರಿ ಅವರು ಅರ್ಜಿಯನ್ನು ತಿರಸ್ಕರಿಸಿದ್ದರು.

ADVERTISEMENT

ಬಳಿಕ ಈ ಜಾಗ ಕೆರೆ ಸ್ವರೂಪ ಕಳೆದುಕೊಂಡಿತ್ತು. 1986–87ರಲ್ಲಿ ಬಿಡಿಎ ಎಚ್‌ಆರ್‌ಬಿಆರ್‌ ಬಡಾವಣೆ ನಿರ್ಮಿಸಿ 190 ನಿವೇಶನಗಳನ್ನು ಹಂಚಿತ್ತು. ಸುಮಾರು 15 ಎಕರೆ ಜಾಗ ತಮಗೆ ಸೇರಿದ್ದು ಎಂದು ಖಾಸಗಿ ವ್ಯಕ್ತಿಗಳು ಪ್ರತಿಪಾದಿಸಿದ್ದರು. ಇಲ್ಲಿನ ಐದು ಎಕರೆ ಜಾಗದಲ್ಲಿ ಕೃಷಿ ಮಾಡುತ್ತಿದ್ದು, 1954ರ ಮೈಸೂರು ಇನಾಂ ರದ್ದತಿ ಕಾಯ್ದೆ ಪ್ರಕಾರ ಈ ಜಾಗ ತಮಗೆ ಸೇರಿದ್ದು ಎಂದು ಕೆ.ಜಯರಾಮ ರೆಡ್ಡಿ ಎಂಬುವರು ಹಕ್ಕು ಸ್ಥಾಪಿಸಿದ್ದರು. 1960–61ರ ಅವಧಿಯಲ್ಲಿ ವಿಶೇಷ ಜಿಲ್ಲಾಧಿಕಾರಿ ಅವರೇ ಈ ಜಾಗ ಮಂಜೂರು ಮಾಡಿದ್ದಾರೆ ಎಂದು ಪ್ರತಿಪಾದಿಸಿದ್ದರು. 1990ರ ವರೆಗೆ ಕಂದಾಯ ದಾಖಲೆಗಳಲ್ಲಿ ಅವರ ಹೆಸರು ಇತ್ತು.

ಜಯರಾಮ ರೆಡ್ಡಿ ಸ್ವಾಧೀನದಲ್ಲಿದ್ದ ಜಾಗ ಸೇರಿದಂತೆ ಕೆರೆಯಂಗಳದ ಜಾಗವನ್ನು ಪ್ರಾಧಿಕಾರ ಸ್ವಾಧೀನಪಡಿಸಿಕೊಂಡಿತು. ಇದನ್ನು ‍ಪ್ರಶ್ನಿಸಿ ಜಯರಾಮ ರೆಡ್ಡಿ ಹೈಕೋರ್ಟ್‌ ಮೆಟ್ಟಿಲೇರಿದರು. ಈ ಜಾಗ ರೆಡ್ಡಿ ಅವರಿಗೆ ಸೇರಿದ್ದು ಎಂದು ಹೈಕೋರ್ಟ್‌ ಆದೇಶ ಹೊರಡಿಸಿತು. ಈ ಜಾಗಕ್ಕೆ ಜಯರಾಮ ರೆಡ್ಡಿ ಹೆಸರಿನಲ್ಲಿ ಖಾತಾ ಮಾಡಿಕೊಡುವಂತೆ ರಾಜ್ಯ ಸರ್ಕಾರ 2005ರಲ್ಲಿ ನಿರ್ದೇಶನ ನೀಡಿತು. ಜಯರಾಮ ರೆಡ್ಡಿ ಕುಟುಂಬಕ್ಕೆ ಮರು ಮಂಜೂರಾತಿ ಮಾಡುವ ವಿಚಾರವು ವಿಶೇಷ ಜಿಲ್ಲಾಧಿಕಾರಿ ಅವರ ನ್ಯಾಯಾಲಯ ಮುಂದೆ ಬಂತು.

‘ಈ ಜಾಗ ಜಯರಾಮ ರೆಡ್ಡಿ ಅವರಿಗೆ ಮಂಜೂರಾದ ಬಗ್ಗೆ ಯಾವುದೇ ಸರ್ಕಾರಿ ದಾಖಲೆಗಳು ಲಭ್ಯವಿಲ್ಲ’ ಎಂದು ಕೆ.ಆರ್‌.ಪುರ ತಹಶೀಲ್ದಾರ್ ಅವರು 2020ರ ಫೆಬ್ರುವರಿ 10ರಂದು ವರದಿ ಸಲ್ಲಿಸಿದರು. 2018ರಲ್ಲೂ ಅಂತಹುದೇ ವರದಿಯನ್ನು ಅವರು ಸಲ್ಲಿಸಿದ್ದರು. ಸರ್ವೆ ಸಂಖ್ಯೆ 211 ಕೆರೆ ಜಾಗ ಎಂದು ಸರ್ಕಾರಿ ದಾಖಲೆಗಳಲ್ಲಿ ಸ್ಪಷ್ಟವಾಗಿ ನಮೂದಾಗಿದೆ.

‘ರಾಜಾ ರತ್ನಂ ಮೊದಲಿಯಾರ್ ಅವರ ಅರ್ಜಿಯನ್ನು ವಿಶೇಷ ಜಿಲ್ಲಾಧಿಕಾರಿ ಅವರು 1958ರಲ್ಲೇ ತಿರಸ್ಕರಿಸಿದ್ದಾರೆ. ಈ ಜಾಗ ಜಯರಾಮ ರೆಡ್ಡಿ ಅವರಿಗೆ ಮರು ಮಂಜೂರು ಆದ ಯಾವುದೇ ದಾಖಲೆಗಳು ಇಲ್ಲ. 1960ರಲ್ಲಿ ನಡೆಸಿದ ಮರು ಸರ್ವೆ ಹಾಗೂ ಪುನರ್‌ ವ್ಯವಸ್ಥೆಗೆ(ರಿ–ಸೆಟ್ಲ್‌ಮೆಂಟ್‌) ಸಂಬಂಧಿಸಿದ ದಾಖಲೆಗಳಲ್ಲಿ ಈ ಜಾಗ ಸರ್ಕಾರಿ ಕೆರೆ ಎಂದು ನಮೂದಿಸಲಾಗಿದೆ. ಕರ್ನಾಟಕ ಭೂ ಸುಧಾರಣಾ ಕಾಯ್ದೆ 1964ರ ಪ್ರಕಾರ ಯಾವುದೇ ಸರ್ಕಾರಿ ಜಾಗದ ಮರು ಸರ್ವೆ ಹಾಗೂ ರಿ ಸೆಟ್ಲ್‌ಮೆಂಟ್‌ ಮಾಡಲು ಶಾಸಕಾಂಗದ ಒಪ್ಪಿಗೆ ಪಡೆಯಬೇಕು ಎಂದಿದೆ. ಈ ಪ್ರಕರಣದಲ್ಲಿ ಅಂತಹ ಪ್ರಕ್ರಿಯೆ ನಡೆದಿಲ್ಲ’ ಎಂದು ಜಗದೀಶ್‌ ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

‘ಕೆರೆ, ರಸ್ತೆ ಹಾಗೂ ಇತರ ಸರ್ಕಾರಿ ಉದ್ದೇಶಕ್ಕೆ ಮೀಸಲಾದ ಜಾಗವನ್ನು ಮಂಜೂರು ಮಾಡುವ ಅಧಿಕಾರ ವಿಶೇಷ ಜಿಲ್ಲಾಧಿಕಾರಿ ಅವರಿಗೆ ಇಲ್ಲ. ವಿಶೇಷ ಜಿಲ್ಲಾಧಿಕಾರಿ ಅವರು ಜಾಗ ಮಂಜೂರು ಮಾಡಿರುವ ಬಗ್ಗೆಯೇ ಅನುಮಾನಗಳಿವೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಕ್ಕು ಸ್ಥಾಪಿಸಿರುವ ಶಂಕೆ ಇದೆ. ಹೈಕೋರ್ಟ್‌ಗೆ ಪ್ರತಿವಾದಿಗಳು ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಹೀಗಾಗಿ, ಈ ಜಾಗವನ್ನು ಸ್ವಾಧೀನಕ್ಕೆ ಪಡೆಯಲು ತಹಶೀಲ್ದಾರ್‌ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದ್ದಾರೆ.

ವಿವಾದ–ಹೋರಾಟದ ಹಾದಿ
* 1958ರಿಂದಲೂ ಭೂ ಮಂಜೂರಾತಿ ವಿವಾದ
* ಖಾಸಗಿ ವ್ಯಕ್ತಿಗೆ ಖಾತೆ ಮಾಡಿಕೊಡುವಂತೆ ಹೈಕೋರ್ಟ್‌ ಆದೇಶ
* ಭೂ ಮಂಜೂರಾತಿ ಆಗಿರುವ ಬಗ್ಗೆ ದಾಖಲೆಗಳಿಲ್ಲ: ತಹಶೀಲ್ದಾರ್ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.