ADVERTISEMENT

ಬೆಂಗಳೂರು, ಬೆಂಗಳೂರು ಗ್ರಾ. ಜಿಲ್ಲೆ ಕಲ್ಯಾಣಿಗಳಿಗೆ ಮರುಜೀವ: ಅಂತರ್ಜಲ ವೃದ್ಧಿ!

ಬತ್ತಿಹೋಗಿದ್ದ ಕೊಳವೆ ಬಾವಿಗಳಲ್ಲಿ ಮತ್ತೆ ಚಿಮ್ಮಿದ ನೀರು l ರೈತರಲ್ಲಿ ಸಂತಸ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 20:58 IST
Last Updated 23 ನವೆಂಬರ್ 2025, 20:58 IST
<div class="paragraphs"><p>ಪುನರುಜ್ಜೀವನ ಬಳಿಕ ಹಿಂಡಿಗನಾಳ ಕಲ್ಯಾಣಿಯಲ್ಲಿ ನೀರು ಸಂಗ್ರಹವಾಗಿದೆ</p></div>

ಪುನರುಜ್ಜೀವನ ಬಳಿಕ ಹಿಂಡಿಗನಾಳ ಕಲ್ಯಾಣಿಯಲ್ಲಿ ನೀರು ಸಂಗ್ರಹವಾಗಿದೆ

   

ಬೆಂಗಳೂರು: ನೂರಾರು ವರ್ಷಗಳ ಹಿಂದೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ನಿರ್ಮಿಸಿರುವ ಕಲ್ಯಾಣಿಗಳನ್ನು ಪುನರುಜ್ಜೀವನ ಗೊಳಿಸುವ ಕಾರ್ಯ ನಡೆಯುತ್ತಿದ್ದು ಇದರಿಂದಾಗಿ ಅಂತರ್ಜಲಮಟ್ಟ ಹೆಚ್ಚಾಗಿದೆ. ನಿಂತು ಹೋಗಿದ್ದ ಕೊಳವೆ ಬಾವಿಗಳಲ್ಲಿ ಮತ್ತೆ ನೀರು ಬರಲು ಶುರುವಾಗಿದ್ದರಿಂದ ರೈತರಲ್ಲಿ ಸಂತಸ ಮೂಡಿದೆ.

ಗ್ರಾಮಾಂತರ ಜಿಲ್ಲೆಯ ಹಿಂಡಿಗನಾಳ, ತಗ್ಲಿಹೊಸಹಳ್ಳಿ, ಚೊಕ್ಕಸಂದ್ರ, ಅತ್ತಿವಟ್ಟ, ದೇವನಗುಂದಿ ಗ್ರಾಮಗಳ ಕಲ್ಯಾಣಿಗಳನ್ನು ಸರ್ಕಾರೇತರ ಸಂಸ್ಥೆಗಳಾದ ಆಶ್ರಯ ಹಸ್ತ ಟ್ರಸ್ಟ್ ಮತ್ತು ಮೈರಾಡಾ (ಮೈಸೂರು ಪುನರ್ವಸತಿ ಮತ್ತು ಅಭಿವೃದ್ಧಿ ಸಂಸ್ಥೆ) ಸಹಯೋಗದಲ್ಲಿ ಪುನರುಜ್ಜೀವನಗೊಳಿಸಿದ್ದು ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ADVERTISEMENT

ದೇವಸ್ಥಾನಗಳ ಸಮೀಪ ಹಾಗೂ ಗ್ರಾಮಗಳಲ್ಲಿರುವ ಸುಮಾರು 100 ವರ್ಷಗಳಷ್ಟು ಹಳೆಯ ಕಲ್ಯಾಣಿಗಳು ಹೂಳು, ಕಸದಿಂದ ಮುಚ್ಚಿಹೋಗಿದ್ದು, ಗಿಡಗಳು ಬೆಳೆದಿವೆ. ಅವುಗಳನ್ನು ಗುರುತಿಸಿ ಪುನರುಜ್ಜೀವನಗೊಳಿಸ ಲಾಗುತ್ತಿದೆ. ಚೊಕ್ಕಸಂದ್ರದಲ್ಲಿ ಕಲ್ಯಾಣಿಗೆ ಮರುಜೀವ ನೀಡಿದ ಬಳಿಕ ಬತ್ತಿ ಹೋಗಿದ್ದ ಕೊಳವೆಬಾವಿಗಳಲ್ಲಿ ನೀರು ಬರುತ್ತಿದೆ. ಹೊಸದಾಗಿ ಕೊಳವೆ ಬಾವಿ ಕೊರೆದರೆ 400 ಅಡಿಗೆ ನೀರು ಸಿಗುತ್ತಿದೆ.

‘ಮೊದಲ ಹಂತದಲ್ಲಿ ಐದು ಕಲ್ಯಾಣಿ ಗಳನ್ನು ಪುನರುಜ್ಜೀವನಗೊಳಿಸಿದ್ದು, ಈಗಾಗಲೇ 80 ಲಕ್ಷ ಲೀಟರ್‌ ನೀರು ಸಂಗ್ರಹವಾಗಿದೆ. ಇದರಿಂದ ಲಕ್ಷಾಂತರ ಜನರಿಗೆ ಉಪಯೋಗವಾಗಲಿದೆ. ಇನ್ನೂ 11 ಕಲ್ಯಾಣಿಗಳನ್ನು ಇದೇ ರೀತಿ ಮಾಡುತ್ತೇವೆ. ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 100 ಕಲ್ಯಾಣಿಗಳನ್ನು ಪುನರುಜ್ಜೀವಗೊಳಿಸುವ ಗುರಿ ಇದೆ’ ಎಂದು ಮೈರಾಡಾ ಸಂಸ್ಥೆಯ ಹಿರಿಯ ವ್ಯವಸ್ಥಾಪಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಲ್ಯಾಣಿಗಳು ಅಥವಾ ಮೆಟ್ಟಿಲು ಬಾವಿಗಳು ಎಂದು ಕರೆಯುವ ಇವು, ಒಂದು ಕಾಲದಲ್ಲಿ ಗ್ರಾಮೀಣ ಜೀವನದ ಬೆನ್ನೆಲುಬಾಗಿದ್ದವು. ಆದರೆ, ನಗರೀಕರಣ, ಅತಿಕ್ರಮಣ, ಅರಿವಿನ ಕೊರತೆಯಿಂದಾಗಿ ಕಲ್ಯಾಣಿಗಳು ಕಣ್ಮರೆಯಾಗುತ್ತಿವೆ. ಅವುಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳ ಬಹುದು ಎಂಬುದು ಅವರ ಅಭಿಪ್ರಾಯ.

‘ಸ್ಥಳೀಯ ಜನರು ಮತ್ತು ಸಮುದಾಯದ ಬೆಂಬಲ ದಿಂದ ಸಾಂಪ್ರದಾಯಿಕ ನೀರಿನ ಪದ್ಧತಿಗಳನ್ನು ಪುನರುಜ್ಜೀವನಗೊಳಿಸಬೇಕು. ಜನರ ಸಹಕಾರದಿಂದ ಈ ಯೋಜನೆಯನ್ನು ಇನ್ನಷ್ಟು ವಿಸ್ತರಿಸಲು ಸಾಧ್ಯವಿದೆ. ಕೇವಲ ಸರ್ಕಾರದಿಂದಲೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ’ ಎನ್ನುತ್ತಾರೆ ಆಶ್ರಯ ಹಸ್ತ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕೆ. ದಿನೇಶ್. 

ಕಲ್ಯಾಣಿಗಳ ಒತ್ತುವರಿಯನ್ನು ತೆರವುಗೊಳಿಸಿ, ಮುಳ್ಳುತಂತಿ ಬೇಲಿ ಹಾಕಲಾಗಿದೆ. ಕಲ್ಯಾಣಿಯಲ್ಲಿ ನೀರು ತುಂಬಿರುವುದರಿಂದ ಜನ– ಜಾನುವಾರುಗಳಿಗೆ ನೀರು ಲಭ್ಯವಾಗುತ್ತಿದೆ. ಅಂತರ್ಜಲ ವೃದ್ಧಿಯಾಗಿ ಇರುವುದರಿಂದ ಬೆಳೆಗಳಿಗೆ ನೀರು ಉಣಿಸಲು ರೈತರಿಗೂ ಅನುಕೂಲವಾಗಿದೆ ಎಂದರು.

‘ಕಲ್ಯಾಣಿಗಳು ಮತ್ತೆ ಜೀವ ಪಡೆದಿರು ವುದರಿಂದ ಗ್ರಾಮಸ್ಥರು, ರೈತರು ಸಂತಸಗೊಂಡಿದ್ದಾರೆ. ಸರ್ಕಾರೇತರ ಸಂಸ್ಥೆಗಳು ಮತ್ತು ಸ್ಥಳೀಯ ಜನರ ಸಹಕಾರದಿಂದ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಇರುವ ಕಲ್ಯಾಣಿಗಳನ್ನು ಪುನರುಜ್ಜೀವನಗೊಳಿಸುತ್ತೇವೆ’ ಎಂದು ವಿವರಿಸಿದರು.

‘ಜಿಲ್ಲಾಡಳಿತದೊಂದಿಗೆ ಒಪ್ಪಂದ ಮಾಡಿಕೊಂಡು ಪುನರುಜ್ಜೀವನ ಕಾರ್ಯ ಕೈಗೊಂಡಿದ್ದು, ಕೆಲಸ ಪೂರ್ಣಗೊಂಡ ನಂತರ ನಿರ್ವಹಣೆ ಜವಾಬ್ದಾರಿಯನ್ನು ಸ್ಥಳೀಯ ಕಲ್ಯಾಣಿ ನಿರ್ವಹಣೆ ಸಮಿತಿ ಗಳಿಗೆ ವಹಿಸಲಾಗುತ್ತದೆ. ಗ್ರಾಮ ಪಂಚಾಯಿತಿಗಳಿಂದಲೂ ಉತ್ತಮ ಸಹಕಾರ ಸಿಗುತ್ತಿದೆ. ಇದೇ ತಿಂಗಳ 17ರಂದು ಹಿಂಡಿಗನಾಳ ಕಲ್ಯಾಣಿಯಲ್ಲಿ ದೀಪೋತ್ಸವ ಕಾರ್ಯಕ್ರಮ ನಡೆಯಿತು’ ಎಂದು ಅವರು ಹೇಳಿದರು.

––––––––

ಕಲ್ಯಾಣಿ ಪುನರುಜ್ಜೀವನ ಆದ ಬಳಿಕ ಕೊಳವೆಬಾವಿಯಲ್ಲಿ ನೀರು ಬರುತ್ತಿದೆ. ಇದರಿಂದ ಬೆಳೆ ಬೆಳೆಯಲು ತುಂಬಾ ಅನುಕೂಲವಾಗಿದೆ.

–ಮುನೇಗೌಡ, ಚೊಕ್ಕಸಂದ್ರ ಗ್ರಾಮದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.