ಸಾವು
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ನಗರದಲ್ಲಿ ನಡೆದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಪುಲಕೇಶಿನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ, ಜೀವನಹಳ್ಳಿ ನಿವಾಸಿ ನವೀನ್ ಕುಮಾರ್ (47) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಸಂಚಾರಿ ಪೊಲೀಸರು ಹೇಳಿದರು.
ಖಾಸಗಿ ಕಂಪನಿ ಉದ್ಯೋಗಿಯಾಗಿರುವ ನವೀನ್ ಕುಮಾರ್, ಐಟಿಸಿ ಸಾಫ್ಟ್‌ವೇರ್ ಕಂಪನಿ ರಸ್ತೆಯಿಂದ ದೊಡ್ಡಬಾಣಸವಾಡಿ ಕಡೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಲಾರಿ ಚಾಲಕ ಏಕಾಏಕಿ ಬಲಕ್ಕೆ ಬಂದು ಡಿಕ್ಕಿ ಹೊಡೆದಿದ್ದಾನೆ. ನವೀನ್ ಕುಮಾರ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟರು.
ಮತ್ತೊಂದು ಪ್ರಕರಣದಲ್ಲಿ ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಕಾರು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದ ಹಿಂಬದಿ ಸವಾರ, ಕೊಡಿಗೇಹಳ್ಳಿ ಬಾಲಾಜಿ ಲೇಔಟ್ ನಿವಾಸಿ ಸಂದೀಪ್ (42) ಮೃತಪಟ್ಟಿದ್ದಾರೆ. ಸವಾರ ಹರಿಶ್ ಕುಮಾರ್ ಗಾಯಗೊಂಡಿದ್ದಾರೆ.
ಭಾನುವಾರ ರಾತ್ರಿ ಸುಮಾರು 9.30ಕ್ಕೆ ಬೆಂಗಳೂರು-ಬಳ್ಳಾರಿ ಹೆದ್ದಾರಿಯ ಜಕ್ಕೂರು ಕ್ರಾಸ್ ಸಮೀಪದ ಉದಯ ಡಾಬಾ ಬಳಿ ಈ ಘಟನೆ ನಡೆದಿದೆ. ಸಂದೀಪ್ ವೃತ್ತಿಯಲ್ಲಿ ಕ್ಯಾಬ್ ಚಾಲಕ. ಹರೀಶ್ ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದಾರೆ. ಭಾನುವಾರ ಸಂಜೆ ನಿವೇಶನ ನೋಡಿಕೊಂಡು ಬರಲು ಇಬ್ಬರು ದ್ವಿಚಕ್ರ ವಾಹನದಲ್ಲಿ ಹೋಗಿದ್ದರು. ರಾತ್ರಿ ಮನೆಗೆ ವಾಪಸ್ ಬರುವಾಗ ಬೆಂಗಳೂರು-ಬಳ್ಳಾರಿ ಹೆದ್ದಾರಿ ಜಕ್ಕೂರು ಕ್ರಾಸ್ ಬಳಿಯ ಕಾರು ಡಿಕ್ಕಿ ಹೊಡೆದಿದೆ.
ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಹಿಂಬದಿ ಸವಾರ ಸಂದೀಪ್‌ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಸೋಮವಾರ ಮುಂಜಾನೆ ಮೃತಪಟ್ಟರು.
‘ಅಪಘಾತದ ಬಳಿಕ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ. ಕಾರು ಪತ್ತೆಗೆ ಘಟನಾ ಸ್ಥಳದ ಸುತ್ತಮುತ್ತಲ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಲಾಗುತ್ತಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.