ಬಂಧನ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ನಗರದಲ್ಲಿ ನೆಲಸಿರುವ ಅಕ್ರಮ ವಲಸಿಗರ ವಿರುದ್ಧ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದು, ಬಾಂಗ್ಲಾದೇಶದ ಪ್ರಜೆಯನ್ನು ಕಾಡುಗೋಡಿ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ರಂಜಾನ್ ಶೇಖ್ ಅಲಿಯಾಸ್ ಮೊಹ್ಮದ್ ರಂಜಾನ್ (38) ಬಂಧಿತ ಆರೋಪಿ.
‘ಠಾಣಾ ವ್ಯಾಪ್ತಿಯಲ್ಲಿ ಕಳೆದ ಎಂಟು ವರ್ಷಗಳಿಂದ ನೆಲಸಿದ್ದ. ನಗರದಲ್ಲಿ ಗುಜರಿ ವ್ಯಾಪಾರ ನಡೆಸುತ್ತಿದ್ದ. ವಿದೇಶಿ ಪ್ರಜೆಗಳ ಪ್ರಾದೇಶಿಕ ನೋಂದಣಿ ಕೇಂದ್ರ ಹಾಗೂ ರಾಜ್ಯ ಆಂತರಿಕ ಭದ್ರತಾ ದಳದ ಅಧಿಕಾರಿಗಳ ಮಾಹಿತಿ ಆಧರಿಸಿ, ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.
‘ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಬಾಂಗ್ಲಾದಲ್ಲಿದ್ದಾಗ ಆರೋಪಿ ಮದುವೆ ಆಗಿದ್ದ. ಪತ್ನಿಯನ್ನು ತೊರೆದು ಭಾರತಕ್ಕೆ ಬಂದಿದ್ದ. ಬಳಿಕ, ಭಾರತದಲ್ಲಿ ಮತ್ತೊಬ್ಬ ಯುವತಿ ಜತೆಗೆ ಮದುವೆಯಾಗಿ ಬೆಂಗಳೂರಿನಲ್ಲಿ ನೆಲಸಿದ್ದ. 2023ರಲ್ಲಿ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ರಂಜಾನ್‌ನನ್ನು ವಶಕ್ಕೆ ಪಡೆದು ನೆಲಮಂಗಲ ಸಮೀಪದ ಸೊಂಡೇಕೊಪ್ಪದ ವಲಸಿಗರ ಬಂಧನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಬಾಂಗ್ಲಾಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆ ಆರಂಭಿಸಲಾಗಿತ್ತು. ಆರೋಗ್ಯದ ಸಮಸ್ಯೆ ಹೇಳಿಕೊಂಡು ಆಸ್ಪತ್ರೆಗೆ ದಾಖಲಾಗುವ ನೆಪವೊಡ್ಡಿ ಬಿಡುಗಡೆ ಆಗಿದ್ದ. ನಂತರ, ತಲೆಮರೆಸಿಕೊಂಡು ಓಡಾಟ ನಡೆಸುತ್ತಿದ್ದ’ ಎಂದು ಪೊಲೀಸರು ಹೇಳಿದರು.
‘ಪಶ್ಚಿಮ ಬಂಗಾಳ ನಿವಾಸಿ ಎಂಬುದಾಗಿ ಹೇಳಿಕೊಂಡಿದ್ದ. ನಕಲಿ ವಿಳಾಸ ನೀಡಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ಚಾಲನಾ ಪರವಾನಗಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಮಾಡಿಸಿಕೊಂಡಿದ್ದ. ದಾಖಲೆಗಳನ್ನು ಎಲ್ಲಿಂದ ಮಾಡಿಸಿಕೊಂಡಿದ್ದ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
ಮೂವರು ವಶಕ್ಕೆ: ‘ಕಳೆದ ವಾರ ಕಾಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ನೆಲಸಿದ್ದ ಬಾಂಗ್ಲಾದೇಶದ ಮೂವರನ್ನು ವಶಕ್ಕೆ ವಲಸಿಗರ ಕೇಂದ್ರಕ್ಕೆ ಕಳುಹಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.