ADVERTISEMENT

ಅವಧಿ ಮುಗಿದ ಚೆಕ್ ನೀಡಿ ವಂಚನೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 21:42 IST
Last Updated 22 ನವೆಂಬರ್ 2022, 21:42 IST

ಬೆಂಗಳೂರು: ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳನ್ನು ಖರೀದಿಸಿ ಅವಧಿ ಮುಗಿದ ಚೆಕ್‌ ನೀಡಿ ವ್ಯಾಪಾರಿಗಳನ್ನು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

‘ಪದಮ್ ಸಿಂಗ್ ಹಾಗೂ ವಿಮಲ್ ಬಂಧಿತರು. ಇವರಿಂದ ₹ 30 ಲಕ್ಷ ಮೌಲ್ಯದ ಬಟ್ಟೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸಿದ್ದಿ ವಿನಾಯಕ್ ಟ್ರೇಡರ್ಸ್ ಮಾಲೀಕರೆಂದು ಹೇಳಿಕೊಂಡಿದ್ದ ಆರೋಪಿಗಳು, ಐಕಾನ್ ಫ್ಯಾಷನ್ ಗಾರ್ಮೆಂಟ್ಸ್ ಕಾರ್ಖಾನೆಗೆ 2021ರ ಮಾರ್ಚ್ 6ರಂದು ಭೇಟಿ ನೀಡಿದ್ದರು. ಸಿದ್ಧ ಬಟ್ಟೆಗಳನ್ನು ಖರೀದಿಸಿ, ಚೆಕ್‌ ನೀಡಿ ಹೋಗಿದ್ದರು. ಹಣ ಪಡೆಯುವುದಕ್ಕಾಗಿ ಬ್ಯಾಂಕ್‌ಗೆ ಚೆಕ್‌ ಹಾಕಿದಾಗ, ಸಹಿ ಹೊಂದಾಣಿಕೆ ಆಗಿರಲಿಲ್ಲ. ಜೊತೆಗೆ, ಅವಧಿಯೂ ಮುಗಿದಿದ್ದ ಸಂಗತಿ ಬ್ಯಾಂಕ್ ಸಿಬ್ಬಂದಿಯಿಂದ ಗೊತ್ತಾಗಿತ್ತು.’

ADVERTISEMENT

‘ಗಾರ್ಮೆಂಟ್ಸ್‌ ಕಾರ್ಖಾನೆ ಮಾಲೀಕ ದೂರು ನೀಡಿದ್ದರು. ತನಿಖೆ ಕೈಗೊಂಡಾಗ ಆರೋಪಿಗಳು, ಮತ್ತಷ್ಟು ಮಂದಿಗೆ ವಂಚನೆ ಮಾಡಿರುವ ಮಾಹಿತಿ ಲಭ್ಯವಾಗಿತ್ತು. ಕೆಲ ಪುರಾವೆಗಳನ್ನು ಆಧರಿಸಿ ಇತ್ತೀಚೆಗೆ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಗಾರ್ಮೆಂಟ್ಸ್ ಕಾರ್ಖಾನೆಗಳಿಗೆ ಗ್ರಾಹಕರ ಸೋಗಿನಲ್ಲಿ ಹೋಗುತ್ತಿದ್ದ ಆರೋಪಿಗಳು, ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳನ್ನು ಖರೀದಿಸಿ ಅವಧಿ ಮುಗಿದ ಚೆಕ್ ನೀಡಿ ನಾಪತ್ತೆಯಾಗುತ್ತಿದ್ದರು. ದೆಹಲಿ ಹಾಗೂ ಮಹಾರಾಷ್ಟ್ರದಲ್ಲೂ ಆರೋಪಿಗಳು ಕೃತ್ಯ ಎಸಗಿದ್ದರು. ಹಲಸೂರು ಗೇಟ್, ವಿಲ್ಸನ್‌ ಗಾರ್ಡನ್ ಠಾಣೆ ವ್ಯಾಪ್ತಿಯಲ್ಲೂ ಇವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.