ADVERTISEMENT

ಬ್ರ್ಯಾಂಡ್‌ ಬೆಂಗಳೂರು– ಮೇಯರ್‌ ಏನ್‌ ಮಾಡ್ಬೇಕು? ಇಲ್ಲಿದೆ ನೋಡಿ ಜನರ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 19:25 IST
Last Updated 6 ಅಕ್ಟೋಬರ್ 2019, 19:25 IST
   

ನಾಡಪ್ರಭು ಕೆಂಪೇಗೌಡರು ಕಟ್ಟಿದಬೆಂಗಳೂರಿನಸೌಂದರ್ಯ ಉಳಿಸಿ ಬೆಳೆಸಲು ನೂತನವಾಗಿ ಆಯ್ಕೆಯಾದ ಸಂಸದರು ಮಾಡಬೇಕಾದುದು ಏನು? ಎನ್ನುವ ಕುರಿತು ಮತದಾರರು ಸಲಹೆಗಳನ್ನು ನೀಡಿದ್ದು, ಅದರಲ್ಲಿಯ ಕೆಲವು ಸಲಹೆಗಳು ಇಲ್ಲಿವೆ.

ಹೊಸ ಯೋಜನೆ ಬೇಡ

ನಗರದಲ್ಲಿ ಹೆಸರಿಗೆ ಮಾತ್ರ ಜಾರಿಗೆ ಬಂದಿರುವ ಯೋಜನೆಗಳು ಮೂಲೆ ಸೇರಿವೆ. ಯಾವುದೇ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಡಿ. ನೂತನ ಕಾಮಗಾರಿಗಳನ್ನು ಬದಿಗಿಟ್ಟು ನಗರದೆಲ್ಲೆಡೆ ಹಸಿರು ಕ್ರಾಂತಿಗೆ ಮುಂದಾಗಿ.

ADVERTISEMENT

–ಶಿವಪ್ಪ, ವಿಭೂತಿಪುರ

ಕೊಳೆಗೇರಿ ಅಭಿವೃದ್ಧಿಪಡಿಸಿ

ನಗರದಲ್ಲಿರುವ ಕೊಳೆಗೇರಿಗಳಿಗೆ ಮೂಲಸೌಕರ್ಯ ಕಲ್ಪಿಸಿ. ಅಲ್ಲಿರುವ ಶಿಕ್ಷಣವಂಚಿತ ಮಕ್ಕಳ ಜವಾಬ್ದಾರಿ ಪಾಲಿಕೆಯೇ ಹೊರಬೇಕು. ಕಾರ್ಯಕ್ರಮಗಳಲ್ಲಿ ಭಾಷಣ ಮಾಡುವುದನ್ನು ಬಿಟ್ಟು, ಕ್ಷೇತ್ರ ಸಂಚಾರ ಮಾಡಿ ಸ್ಥಳೀಯರ ಕುಂದುಕೊರತೆಗಳ ಬಗ್ಗೆ ಮಾಹಿತಿ ಕಲೆ ಹಾಕಿ.

–ಸಯ್ಯದ್‌ ಪಾಷಾ, ಮಲ್ಲೇಶ್ವರ

ಅಧಿಕಾರ ಹಂಚಿಕೆ ಮಾಡಿ

ಬಿಬಿಎಂಪಿಯ ಮೇಲ್ವಿಚಾರಣೆ ನೋಡಿಕೊಳ್ಳುವುದು ಒಬ್ಬರಿಂದ ಸಾಧ್ಯವಿಲ್ಲ. ಇರುವ ಸಿಬ್ಬಂದಿಯ ಜವಾಬ್ದಾರಿ ಹೆಚ್ಚಿಸಿ. ಅರ್ಧಕ್ಕೆ ನಿಂತು ಅತಂತ್ರ ಸ್ಥಿತಿಯಲ್ಲಿರುವಕಾಮಗಾರಿಗಳನ್ನು ಪೂರ್ಣಗೊಳಿಸಿ. ಸಾರ್ವಜನಿಕರ ಸಂಚಾರಕ್ಕೆ ಯೋಗ್ಯವಾದ ರಸ್ತೆಗಳನ್ನು ನಿರ್ಮಿಸಿ.

–ಪವನ್, ಬೆಳಗೂರು

ಮಾರುಕಟ್ಟೆಗಳನ್ನು ಸ್ಥಾಪಿಸಿ

ವ್ಯಾಪಾರಿಗಳಿಗೆ ಅಂಗಡಿ ಇಡಲು ಸೂಕ್ತ ಜಾಗ ಇಲ್ಲದ ಕಾರಣ ಪಾದಚಾರಿ ಮಾರ್ಗಗಳಲ್ಲಿ ಅಂಗಡಿ ಇಟ್ಟುಕೊಳ್ಳುತ್ತಾರೆ. ಇದರಿಂದ ಪಾದಚಾರಿಗಳಿಗೂ ನಡೆಯಲು ಜಾಗವೇ ಇಲ್ಲವಾಗಿದೆ. ಪ್ರತಿ ವಾರ್ಡ್‌ನಲ್ಲಿ ಪಾಲಿಕೆಯೇ ಮಾರುಕಟ್ಟೆ ಸ್ಥಾಪಿಸಿ, ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಬೇಕು.

–ನವೀನ್ ಕುಮಾರ್, ವಿಜಯನಗರ

ರಸ್ತೆಗಳು ಗುಂಡಿಮುಕ್ತವಾಗಲಿ

ನಗರದಲ್ಲಿರುವ ರಸ್ತೆಗಳಲ್ಲಿ ವಾಹನ ಸವಾರರಿಗಿಂತ ಗುಂಡಿಗಳೇ ಹೆಚ್ಚು ಕಾಣಸಿಗುತ್ತವೆ. ತಾತ್ಕಾಲಿಕವಾಗಿ ಡಾಂಬರು ತುಂಬಿದರೂ ಕೆಲವೇ ದಿನಗಳಲ್ಲಿ ಮತ್ತೆ ಗುಂಡಿ ತೆರೆದುಕೊಂಡಿರುತ್ತದೆ. ರಸ್ತೆ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು.

–ಪ್ರವೀಣ್, ಉತ್ತರಹಳ್ಳಿ

ವಾರಕ್ಕೊಮ್ಮೆ ಸ್ವಚ್ಛತಾ ಅಭಿಯಾನ

ಪೌರಕಾರ್ಮಿಕರು ಪ್ರತಿದಿನ ನಗರವನ್ನು ಸ್ವಚ್ಛ ಮಾಡುತ್ತಿದ್ದಾರೆ. ವಾರಕ್ಕೊಮ್ಮೆ ಒಂದು ವಾರ್ಡ್‌ನಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಬೇಕು. ವಾರ್ಡ್‌ನ ಪಾಲಿಕೆ ಸಿಬ್ಬಂದಿ ಸೇರಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಬೇಕು.

–ಧನಂಜಯ್‌, ಜೆ.ಪಿ.ನಗರ

ಸ್ಥಳೀಯವಾಗಿ ಕಸ ವಿಲೇವಾರಿ

ಬೆಂಗಳೂರಿಗೆ ಬ್ರ್ಯಾಂಡ್ ಹೆಸರು ಇಡುವ ಮುನ್ನ ಕಸದ ಕೊಳೆಯನ್ನು ತೊಳೆಯಿರಿ. ವೈಜ್ಞಾನಿಕ ಕಸ ವಿಲೇವಾರಿಗೆ ಆದ್ಯತೆ ನೀಡಿ. ಸಾರ್ವಜನಿಕರಿಗೆ ಹೆಚ್ಚು ಕಸ ಹಾಕದಂತೆ ಸೂಚನೆ ನೀಡಬೇಕು. ಸಂಗ್ರಹವಾದ ಕಸವನ್ನು ರಾಸಾಯನಿಕ ಗೊಬ್ಬರಗಳಿಗೆ ಬಳಕೆ ಮಾಡಿ ರೈತರಿಗೆ ಪೂರೈಸುವ ವ್ಯವಸ್ಥೆ ಮಾಡಿ.

–ನಾಗವೇಣಿ, ಆರ್.ಟಿ.ನಗರ

ಖಾಸಗಿ ಗುತ್ತಿಗೆ ಬೇಡ

ಖಾಸಗಿಯವರಿಗೆಕಾಮಗಾರಿಗಳ ಗುತ್ತಿಗೆ ನೀಡಬೇಡಿ. ಆಯಾ ವಾರ್ಡ್‌ನ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಉಸ್ತುವಾರಿ ನೀಡಿ. ರಸ್ತೆ ಕಾಮಗಾರಿಗೆ ಒಂದು ಗುತ್ತಿಗೆ, ಬಿದ್ದ ಗುಂಡಿ ಮುಚ್ಚಲು ಮತ್ತೊಂದು ಗುತ್ತಿಗೆ ಬೇಡ. ಅದರ ಬದಲು ಕಾಮಗಾರಿ ಮಾಡಿದವರಿಗೆ ಗುಂಡಿ ಮುಚ್ಚುವಂತೆ ಸೂಚಿಸಬೇಕು.

–ಶಿಲ್ಪಾ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.