ADVERTISEMENT

ಸ್ಮಾರ್ಟ್‌ಸಿಟಿ: ಕಾಮಗಾರಿಯಲ್ಲಿ ಕಿಕ್‌ಬ್ಯಾಕ್‌?

ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಅನುಮಾನ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 2:07 IST
Last Updated 19 ನವೆಂಬರ್ 2019, 2:07 IST
ಅಬ್ದುಲ್‌ ವಾಜಿದ್‌
ಅಬ್ದುಲ್‌ ವಾಜಿದ್‌   

ಬೆಂಗಳೂರು: ‘ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳುತ್ತಿರುವ ಕೆಲವು ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಸರ್ಕಾರ ಪ್ರತಿ ಕಿಲೋಮೀಟರ್‌ಗೆ ₹ 14.5 ಕೋಟಿ ವೆಚ್ಚ ಮಾಡುತ್ತಿದೆ. ಈ ಕಾಮಗಾರಿ ಗುತ್ತಿಗೆಯಲ್ಲಿ ಸರ್ಕಾರ ಕಿಕ್‌ಬ್ಯಾಕ್‌ ಪಡೆದಂತಿದೆ’ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಶಂಕೆ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಕಾಂಗ್ರೆಸ್‌ ಸರ್ಕಾರ ಹಾಗೂ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪ್ರತಿ ಕಿ.ಮೀ.ಗೆ ₹ 10 ಕೋಟಿ ವೆಚ್ಚದಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ ನಡೆಸಲಾಗಿತ್ತು. ಅದರಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿಯವರು ಆರೋಪ ಮಾಡಿದ್ದರು. ಆ ಆರೋಪದಲ್ಲಿ ಹುರುಳಿಲ್ಲ ಎಂಬುದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇಮಿಸಿದ್ದ ಕ್ಯಾ.ಆರ್‌.ಆರ್‌.ದೊಡ್ಡಿಹಾಳ್‌ ನೇತೃತ್ವದ ಸಮಿತಿಯ ತನಿಖೆಯಿಂದ ಸಾಬೀತಾಗಿದೆ. ಡಾಂಬರೀಕರಣಕ್ಕೆ ವೈಟ್‌ಟಾಪಿಂಗ್‌ಗಿಂತ ಕಡಿಮೆ ವೆಚ್ಚ ಸಾಕು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಬಿಜೆಪಿ ಸರ್ಕಾರ ಡಾಂಬರೀಕರಣಕ್ಕೆ ಪ್ರತಿ ಕಿ.ಮೀ.ಗೆ ₹ 4.5 ಕೋಟಿ ಹೆಚ್ಚು ವೆಚ್ಚಮಾಡುತ್ತಿದೆ. ಈ ಹಣ ಎಲ್ಲಿಗೆ ಹೋಗುತ್ತಿದೆ’ ಎಂದು ಅವರು ಪ್ರಶ್ನಿಸಿದರು.

‘ಹೊರವರ್ತುಲ ರಸ್ತೆಯಲ್ಲಿ ಬಸ್‌ಗಳಿಗೆ ಆದ್ಯತಾ ಪಥಗಳನ್ನು ಅಭಿವೃದ್ಧಿಪಡಿಸುವುದು ಒಳ್ಳೆಯ ವಿಚಾರ. ಆದರೆ, ಅದಕ್ಕೆ ₹ 24 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈಗ ಇರುವ ರಸ್ತೆಗಳಿಗೇ ಇಷ್ಟೊಂದು ದುಬಾರಿ ಮೊತ್ತವನ್ನು ವೆಚ್ಚ ಮಾಡುವುದು ಅನುಮಾನ ಮೂಡಿಸುತ್ತಿದೆ’ ಎಂದು ಹೇಳಿದರು.

ADVERTISEMENT

‘ಆದ್ಯತಾ ಪಥಗಳ ಅಭಿವೃದ್ಧಿ ಕಾಮಗಾರಿಗೆ ಟೆಂಡರ್‌ ಕರೆದಿಲ್ಲ. ಕಾಮಗಾರಿಯನ್ನು ಕೆಆರ್‌ಐಡಿಎಲ್‌ ಸಂಸ್ಥೆಗೆ ವಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅದಕ್ಕೂ ಕೆಟಿಪಿಪಿ ಕಾಯ್ದೆಯ ಸೆಕ್ಷನ್‌ 4 ಜಿ ಅಡಿ ವಿನಾಯಿತಿ ಪಡೆದಿಲ್ಲ. ಈ ಹಿಂದೆ ಸಿಗ್ನಲ್‌ರಹಿತ ಕಾರಿಡಾರ್‌ ಕಾಮಗಾರಿಯನ್ನು ಅನುಷ್ಠಾನ ಮಾಡಿರುವ ಗುತ್ತಿಗೆದಾರರಿಗೆ ವಹಿಸಲಾಗಿದೆ ಎಂದು ಬಿಬಿಎಂಪಿ ಹೇಳಿದ್ದಾರೆ. ಈ ಕಾಮಗಾರಿಯ ಮೂವರು ಗುತ್ತಿಗೆದಾರರಲ್ಲಿ ಕೆಲವರು ಈಗಾಗಲೇ ಕೆಲಸ ಮುಗಿಸಿ ತಿಂಗಳುಗಳೇ ಕಳೆದಿವೆ.ಆದ್ಯತಾ ಪಥಗಳ ಕಾಮಗಾರಿಯೇ ಅನುಮಾನದ ಗೂಡಾಗಿದೆ’ ಎಂದು ಅವರು ಟೀಕಿಸಿದರು.

‘ಆದ್ಯತಾ ಪಥಗಳಲ್ಲಿ ಬೇರೆ ವಾಹನಗಳು ನಿಯಮ ಉಲ್ಲಂಘನೆ ಮಾಡದಂತೆ ತಡೆಯಲು 400 ಮಾರ್ಷಲ್‌ಗಳನ್ನು ನೇಮಿಸಿಕೊಳ್ಳುವುದಾಗಿ ಬಿಬಿಎಂಪಿ ಹೇಳಿದೆ. ಇವರಿಗೆ ಸಂಬಳ ನೀಡುವವರು ಯಾರು. ಸಂಚಾರ ನಿರ್ವಹಣೆಗೆಂದೇ ಪೊಲೀಸ್‌ ಇಲಾಖೆಯಲ್ಲಿ ಪ್ರತ್ಯೇಕ ವಿಭಾಗ ಇರುವಾಗ ಬಿಬಿಎಂಪಿಯಿಂದ ಮಾರ್ಷಲ್‌ಗಳನ್ನು ನೇಮಿಸಿಕೊಳ್ಳುವ ಔಚಿತ್ಯವಾದರೂ ಏನು’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.