ADVERTISEMENT

ಬಿಬಿಎಂಪಿಯಲ್ಲಿ ಇಂದಿನಿಂದ ಅಧಿಕಾರಿಗಳ ದರ್ಬಾರ್‌

ಸುಗಮ ಆಡಳಿತಕ್ಕೆ ಹಲವಾರು ಸವಾಲುಗಳು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 20:05 IST
Last Updated 10 ಸೆಪ್ಟೆಂಬರ್ 2020, 20:05 IST
   

ಬೆಂಗಳೂರು: ಬಿಬಿಎಂಪಿಯ ಚುನಾಯಿತ ಕೌನ್ಸಿಲ್‌ನ ಐದು ವರ್ಷಗಳ ಆಡಳಿತದ ಅವಧಿ ಗುರುವಾರ ಕೊನೆಗೊಂಡಿದೆ. ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ಹಿರಿಯ ಐಎಎಸ್‌ ಅಧಿಕಾರಿ ಗೌರವ್‌ ಗುಪ್ತ ಅವರು ಮೇಯರ್‌, ಉಪಮೇಯರ್‌ ಹಾಗೂ ಸ್ಥಾಯಿಸಮಿತಿಗಳ ಜವಾಬ್ದಾರಿಗಳನ್ನು ನಿಭಾಯಿಸಲಿದ್ದಾರೆ.

ಬಿಬಿಎಂಪಿಯ ಹಿಂದಿನ ಕೌನ್ಸಿಲ್‌ ಅವಧಿ ಮುಗಿಯುವುದಕ್ಕೆ ಮುನ್ನ ( ಸೆ.10) ಚುನಾವಣೆ ನಡೆದು ಹೊಸ ಸದಸ್ಯರ ಆಯ್ಕೆ ಪೂರ್ಣಗೊಳ್ಳಬೇಕಿತ್ತು. ಚುನಾವಣೆ ನಡೆಯದ ಕಾರಣ ಪಾಲಿಕೆಯ ಆಡಳಿತ ಯಂತ್ರ ನಿರ್ವಹಿಸುವ ಹೊಣೆ ಶುಕ್ರವಾರದಿಂದ ಅಧಿಕಾರಿಗಳ ಹೆಗಲೇರಿದೆ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳು, ಮಳೆ ಆರ್ಭಟ, ಸಂಪನ್ಮೂಲ ಕೊರತೆ, ಪ್ರಗತಿ ಕಾಣದ ಕಾಮಗಾರಿಗಳು, ಕಸ ವಿಲೇವಾರಿ ಸಮಸ್ಯೆ, ಹೆಚ್ಚುತ್ತಿರುವ ಭ್ರಷ್ಟಾಚಾರ... ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಿ ರಾಜಧಾನಿಯ ನಿವಾಸಿಗಳ ಮನಗೆಲ್ಲುವ ಸವಾಲು ಅಧಿಕಾರಿಗಳ ಮೇಲಿದೆ.

ADVERTISEMENT

ಅಧಿಕಾರಿಗಳ ಮುಂದಿರುವ ಕೆಲವು ಸವಾಲುಗಳು ಇಂತಿವೆ...

* ಕೋವಿಡ್‌ ನಿಯಂತ್ರಣ: ಬಿಬಿಎಂಪಿಯಲ್ಲಿ ಚುನಾಯಿತ ಕೌನ್ಸಿಲ್‌ನ ಆಡಳಿತವಿದ್ದಾಗಲೇ ಕೋವಿಡ್‌ ನಿಯಂತ್ರಣ ಕಾರ್ಯಕ್ಕೆ ಸಂಬಂಧಿಸಿ ಅನೇಕ ಆಕ್ಷೇಪಗಳು ವ್ಯಕ್ತವಾಗಿದ್ದವು. ಕೋವಿಡ್‌ ಆರೈಕೆ ಕೇಂದ್ರಗಳ ಪರಿಕರವನ್ನು ಬಾಡಿಗೆಗೆ ಪಡೆಯುವ ವಿಚಾರದಲ್ಲಿ, ಕಂಟೈನ್‌ಮೆಂಟ್‌ ಪ್ರದೇಶಗಳ ನಿರ್ವಹಣೆ ವಿಚಾರದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಕೋವಿಡ್‌ ಪರೀಕ್ಷಾ ವರದಿಗಳು ನಿಗದಿತ ಅವಧಿಯೊಳಗೆ ಕೈಸೇರುತ್ತಿಲ್ಲ ಎಂಬ ದೂರು ಈಗಲೂ ಇದೆ.

ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಶುಲ್ಕ ಪಡೆಯುತ್ತಿರುವ ಬಗ್ಗೆ ಹಾಗೂ ಬಿಬಿಎಂಪಿ ಶಿಫಾರಸುಮಾಡಿದ ರೋಗಿಗಳಿಂದಲೂ ಹಣ ಪಡೆಯುತ್ತಿರುವ ದೂರುಗಳು ಈಗಲೂ ಇವೆ. ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರಿಗೆ ವೈದ್ಯಕೀಯ ನೆರವು ಸಮರ್ಪಕವಾಗಿ ಸಿಗುತ್ತಿಲ್ಲ ಎಂಬ ಆರೋಪಗಳೂ ಇವೆ. ಇವನ್ನೆಲ್ಲ ಮೆಟ್ಟಿ ನಿಂತು ಪಾರದರ್ಶಕ ಸೇವೆ ಒದಗಿಸುವ ನಿಟ್ಟನಲ್ಲಿ ಬಿಬಿಎಂಪಿ ಹೆಜ್ಜೆ ಇಡಬೇಕಾಗಿದೆ.

* ಮಳೆ ಸನ್ನದ್ಧತೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ತಿಂಗಳಲ್ಲಿ ಮಳೆ ಆರ್ಭಟ ಯಾವತ್ತೂ ಜಾಸ್ತಿ. ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಸೃಷ್ಟಿಯಾಗಿರುವ ಅವಾಂತರಗಳು ಬಿಬಿಎಂಪಿ ಈ ಪರಿಸ್ಥಿತಿ ಎದುರಿಸಲು ಎಷ್ಟರಮಟ್ಟಿಗೆ ಸನ್ನದ್ಧವಾಗಿವೆ ಎಂಬುದಕ್ಕೆ ಕನ್ನಡಿ ಹಿಡಿದಿವೆ. ಮಳೆಯಾದಾಗ ಸಮರೋಪಾದಿಯಲ್ಲಿ ಸಂತ್ರಸ್ತರಿಗೆ ನೆರವಾಗಲು ದಕ್ಷ ವ್ಯವಸ್ಥೆಯನ್ನು ಹೊಂದಬೇಕಿದೆ.

ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಇದನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ ಮಳೆ ಬಂದಾಗ ಪ್ರವಾಹ ಉಂಟಾಗುವುದನ್ನು ತಪ್ಪಿಸಬೇಕಿದೆ

* ಕಾಮಗಾರಿಗಳಿಗೆ ವೇಗ: ವೈಟ್‌ಟಾಪಿಂಗ್‌, ಟೆಂಡರ್‌ಶ್ಯೂರ್‌ ರಸ್ತೆಗಳು, ಮೇಲ್ಸೇತುವೆಗಳು, ಕೆರೆಗಳ ಅಭಿವೃದ್ಧಿ, ರಾಜಕಾಲುವೆ ದುರಸ್ತಿ, ಪಾದಚಾರಿ ಮಾರ್ಗದ ಕಾಮಗಾರಿ, ವೃತ್ತಗಳ ಸುಂದರೀಕರಣ, ಉದ್ಯಾನಗಳ ಅಭಿವೃದ್ಧಿ,ಸ್ಮಾರ್ಟ್‌ಸಿಟಿ ಯೋಜನೆಯ ಕೆಲಸಗಳು... ಹೀಗೆ ನೂರಾರು ಕಾಮಗಾರಿಗಳು ಲಾಕ್‌ಡೌನ್‌ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದವು. ಅವು ಈಗಲೂ ಕುಂಟುತ್ತಾ ಸಾಗುತ್ತಿದ್ದು, ಇದರಿಂದ ನಾಗರಿಕರು ಸಮಸ್ಯೆ ಎದುರಿಸುವಂತಾಗಿದೆ. ಬಹುತೇಕ ವಲಸೆ ಕಾರ್ಮಿಕರು ಊರು ಸೇರಿರುವುದರಿಂದ ಕಾರ್ಮಿಕರ ಕೊರತೆಯೂ ಇದೆ. ಅವು ಮತ್ತೆ ಚುರುಕುಗೊಳ್ಳುವಂತೆ ನೋಡಿಕೊಳ್ಳಬೇಕಿದೆ.

* ಅಕ್ರಮಗಳಿಗೆ ಕಡಿವಾಣ: ಟೆಂಡರ್‌ ಷರತ್ತುಗಳನ್ನು ಉಲ್ಲಂಘಿಸಿ ಕಾಮಗಾರಿಗಳನ್ನು ಅನರ್ಹ ಗುತ್ತಿಗೆದಾರರಿಗೆ ವಹಿಸಿದ ಅನೇಕ ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬಂದಿವೆ. ಈ ಹಿಂದೆ ಆಗಿರುವ ತಪ್ಪುಗಳನ್ನು ಸರಿಪಡಿಸಿ, ಮತ್ತೆ ಆ ತಪ್ಪುಗಳು ಮರುಕಳಿಸದಂತೆ ನಿಗಾ ವಹಿಸಬೇಕಿದೆ.

* ಕಸ ವಿಲೇವಾರಿ: ನಗರದ ಕಸ ವಿಲೇವಾರಿ ಬಿಬಿಎಂಪಿ ಮುಂದಿರುವ ದೊಡ್ಡ ಸವಾಲು. ಮನೆ ಮನೆಯಿಂದ ಕಸ ಸಂಗ್ರಹಿಸುವ ಟೆಂಡರ್‌ ಪ್ರಕ್ರಿಯೆ ಮೂರು ವರ್ಷಗಳಿಂದ ತೆವಳುತ್ತಾ ಸಾಗಿದೆ. ಇನ್ನೂ ಇದು ಸರಿದಾರಿಗೆ ಬಂದಿಲ್ಲ. ಮಿಶ್ರ ಕಸವನ್ನು ಭೂಭರ್ತಿ ಕೇಂದ್ರಕ್ಕೆ ಸುರಿಯುವಂತಿಲ್ಲ ಎಂದು ಹಸಿರು ನ್ಯಾಯಮಂಡಳಿ ಕಟ್ಟಪ್ಪಣೆ ಮಾಡಿದೆ. ಆದರೆ, ಈಗಲೂ ಬಹುಪಾಲು ಕಸ ಭೂಭರ್ತಿ ಕೇಂದ್ರವನ್ನೇ ಸೇರುತ್ತಿದೆ. ಕಸ ವಿಲೇವಾರಿಗೆ ಸುಸ್ಥಿರ ವ್ಯವಸ್ಥೆಯನ್ನು ರೂಪಿಸುವ ಹೊಣೆ ಆಡಳಿತದ ಮೇಲಿದೆ.

* ಭ್ರಷ್ಟಾಚಾರಕ್ಕೆ ಕಡಿವಾಣ: ಬಿಬಿಎಂಪಿ ಕಚೇರಿಗಳಲ್ಲಿ ಲಂಚ ಕೊಡದೆ ಕೆಲಸ ನಡೆಯುವುದಿಲ್ಲ ಎಂಬುದು ಸಾಮಾನ್ಯವಾಗಿ ಕೇಳಿಬರುವ ದೂರು. ಆಸ್ತಿಗಳ ಖಾತಾಗಳು ಮತ್ತು ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಸೇವೆಗಳಿಗೆ ತಳಮಟ್ಟದಲ್ಲೂ ಲಕ್ಷಗಟ್ಟಲೆ ಲಂಚ ಪಡೆಯಲಾಗುತ್ತದೆ ಎಂಬ ಆರೋಪಗಳಿವೆ. ದುಡ್ಡಿಗಾಗಿ ನಕಲಿ ಖಾತೆಗಳನ್ನು ಮಾಡಿಕೊಟ್ಟ ಉದಾಹರಣೆಗಳಿವೆ. ಇಂತಹ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕಬೇಕಿದೆ

* ಸಂಪನ್ಮೂಲ ಸಂಗ್ರಹದ ಸವಾಲು: ಕೋವಿಡ್‌ ಬಳಿಕ ಆಸ್ತಿ ತೆರಿಗೆ ಹಾಗೂ ಇತರ ಮೂಲಗಳಿಂದ ಬರುವ ತೆರಿಗೆ ವರಮಾನ ಗಣನೀಯವಾಗಿ ಕುಸಿತ ಕಂಡಿದೆ. ಇನ್ನೊಂದೆಡೆ, ಬಿಬಿಎಂಪಿ ಅಧಿಕಾರಿಗಳು ತೆರಿಗೆದಾರರೊಂದಿಗೆ ಶಾಮೀಲಾಗಿ ಪಾಲಿಕೆಗೆ ವರಮಾನ ನಷ್ಟವನ್ನುಂಟುಮಾಡಿದ ಉದಾಹರಣೆಗಳೂ ಇವೆ. ತೆರಿಗೆ ಸೋರಿಕೆ ತಡೆ ಹಾಗೂ ವರಮಾನ ಹೆಚ್ಚಳ ಕ್ರಮಗಳ ಮೂಲಕ ಪಾಲಿಕೆಯನ್ನು ಸರಿದಾರಿಗೆ ತರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.