ADVERTISEMENT

ಒಂದೇ ಒಂದು ಪ್ಲಾಸ್ಟಿಕ್ ಕಂಡರೂ ಎನ್‌ಜಿಟಿಗೆ ವರದಿ

ಮೇಯರ್ ಗಂಗಾಂಬಿಕೆ ಎದುರೇ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 19:51 IST
Last Updated 21 ಜುಲೈ 2019, 19:51 IST
ಸುಭಾಷ್ ಬಿ. ಅಡಿ, ಮೇಯರ್ ಗಂಗಾಂಬಿಕೆ, ಪಾಲಿಕೆ ಸದಸ್ಯ ಮಹಮ್ಮದ್ ರಿಜ್ವಾನ್ ನವಾಬ್‌ ಚರ್ಚಿಸಿದರು. ಕರ್ನಾಟಕ ಮಾಲಿನ್ಯ ನಿಯಂತ್ರಣಾ ಮಂಡಳಿ ಸದಸ್ಯ ಕಾರ್ಯದರ್ಶಿ ಮನೋಜ್‌ಕುಮಾರ್ ಇದ್ದರು – ಪ್ರಜಾವಾಣಿ ಚಿತ್ರ
ಸುಭಾಷ್ ಬಿ. ಅಡಿ, ಮೇಯರ್ ಗಂಗಾಂಬಿಕೆ, ಪಾಲಿಕೆ ಸದಸ್ಯ ಮಹಮ್ಮದ್ ರಿಜ್ವಾನ್ ನವಾಬ್‌ ಚರ್ಚಿಸಿದರು. ಕರ್ನಾಟಕ ಮಾಲಿನ್ಯ ನಿಯಂತ್ರಣಾ ಮಂಡಳಿ ಸದಸ್ಯ ಕಾರ್ಯದರ್ಶಿ ಮನೋಜ್‌ಕುಮಾರ್ ಇದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಗರದಲ್ಲಿ ಸೆಪ್ಟೆಂಬರ್ 1ರ ನಂತರ ಒಂದೇ ಒಂದು ಪ್ಲಾಸ್ಟಿಕ್ ಕೈಚೀಲ ಕಂಡರೂ ಬಿಬಿಎಂಪಿ ವಿರುದ್ಧ ರಾಷ್ಟ್ರೀಯ ಹಸಿರು‍ನ್ಯಾಯಮಂಡಳಿಗೆ (ಎನ್‌ಜಿಟಿ) ಕಠಿಣ ವರದಿ ನೀಡುತ್ತೇನೆ’ ಎಂದುಎನ್‌ಜಿಟಿ ರಾಜ್ಯ ಮಟ್ಟದ ಸಮಿತಿಯ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಖಡಕ್ ಎಚ್ಚರಿಕೆ ನೀಡಿದರು.

ಎನ್‌ಜಿಟಿ ಮತ್ತು ಬಿಬಿಎಂಪಿ ದಕ್ಷಿಣ ವಲಯದಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‌ಘನತಾಜ್ಯ ನಿರ್ವಹಣೆಯ ಪಾಲುದಾರರ ಸಭೆಯಲ್ಲಿ ಅವರು ಮಾತನಾಡಿದರು.

‘ಹಿಂದುಳಿದ ಪ್ರದೇಶಗಳು ಎಂದು ಕರೆಯುವ ಬೀದರ್ ಮತ್ತು ಕಲಬುರ್ಗಿಯಲ್ಲಿ ಪ್ಲಾಸ್ಟಿಕ್ ಮುಕ್ತವಾಗಲು ಹೊರಟಿರುವಾಗ ಶಿಕ್ಷಿತರೇ ಹೆಚ್ಚಿರುವ ಬೆಂಗಳೂರಿನಲ್ಲಿ ಏಕೆ ಸಾಧ್ಯವಿಲ್ಲ’ ಎಂದು ಪ್ರಶ್ನಿಸಿದರು.

ADVERTISEMENT

‘ಬೆಂಗಳೂರು ಪ್ಲಾಸ್ಟಿಕ್ ಮುಕ್ತ ಆಗಲೇಬೇಕು. ಇಲ್ಲದಿದ್ದರೆ ನಾನಂತೂ ಸುಮ್ಮನಿರುವುದಿಲ್ಲ.ಕಳೆದ ಕೆಲ ದಿನಗಳಿಂದ ಪರಿಸ್ಥಿತಿ ಬದಲಾದಂತೆ ಕಾಣುತ್ತಿದೆ. ನಿಷೇಧಿತ ಪ್ಲಾಸ್ಟಿಕ್ ಕವರ್‌ಗಳ ಬದಲು ಪೇವರ್ ಕವರ್‌ಗಳು ಕಾಣಿಸುತ್ತಿವೆ. ಮತ್ತಷ್ಟು ಪರಿಣಾಮಕಾರಿ ಅನುಷ್ಠಾನ ಆಗಲೇಬೇಕು’ ಎಂದು ಅವರು ತಿಳಿಸಿದರು.

‘ಕಸ ವಿಲೇವಾರಿ ವಿಷಯದಲ್ಲೂಕಠಿಣ ಕ್ರಮಗಳನ್ನು ಬಿಬಿಎಂಪಿ ಕೈಗೊಳ್ಳಬೇಕು.ಕಸ ವಿಂಗಡಣೆ ಮಾಡದವರಿಗೆ ಬಿಬಿಎಂಪಿ ದಂಡ ಹಾಕಬೇಕು. ಅದಕ್ಕಾಗಿ ಬೈಲಾ ರೂಪಿಸಿಕೊಳ್ಳಬೇಕು.ಜನರು ಕೂಡ ಸಹಕರಿಸಬೇಕು. ಹಸಿ ಕಸವನ್ನು ಆದಷ್ಟು ಮನೆಯಲ್ಲೇ ಸಾವಯವ ಗೊಬ್ಬರ ಮಾಡಬೇಕು. ಆಗದಿದ್ದರೆ ಕಸ ಸಂಗ್ರಹಿಸಲು ಬರುವ
ವರಿಗೆ ಹಸಿ, ಒಣ ಮತ್ತು ಹಾನಿಕಾರಕ ಕಸ ಎಂದು ಮೂರು ಭಾಗವಾಗಿ ವಿಂಗಡಿಸಿ ನೀಡಬೇಕು. ಆಯಾ ವಾರ್ಡ್‌ನಲ್ಲಿ ಉತ್ಪತ್ತಿಯಾಗುವ ಹಸಿ ಕಸ ಅಲ್ಲಿಯೇ ಸಾವಯವ ಗೊಬ್ಬರ ಆಗುವಂತೆ ನೋಡಿಕೊಳ್ಳಬೇಕು’ ಎಂದರು.

‘ಪ್ಲಾಸ್ಟಿಕ್ ನಿಷೇಧ ಮತ್ತು ತ್ಯಾಜ್ಯ ವಿಲೇವಾರಿಯಲ್ಲಿಬೆಂಗಳೂರು ದಕ್ಷಿಣ ವಲಯ ಮಾದರಿಯಾಗಬೇಕು. ಇದಕ್ಕೆ ಸಾರ್ವಜನಿಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಬಿಬಿಎಂಪಿ ಜತೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

‘ಆಗಸ್ಟ್‌ನಿಂದ ಐದು ಪಟ್ಟು ದಂಡ’

‘ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಬಿಬಿಎಂಪಿ ಕಠಿಣ ಕ್ರಮ ಕೈಗೊಂಡಿದೆ. ಪ್ಲಾಸ್ಟಿಕ್ ಕೈ ಚೀಲ ಮಾರಾಟ ಮಾಡುವವರಿಗೆ ಮತ್ತು ಖರೀದಿ ಮಾಡುವರಿಗೆ ಈಗಾಗಲೇ ದಂಡ ವಿಧಿಸಲಾಗುತ್ತಿದೆ. ಆಗಸ್ಟ್ 1ರಿಂದ ದಂಡದ ಪ್ರಮಾಣ ಐದು ಪಟ್ಟು ಹೆಚ್ಚಾಗಲಿದೆ’ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.

‘ಪ್ಲಾಸ್ಟಿಕ್ ಬಳಕೆಯನ್ನು 2017ರಲ್ಲೇ ನಿಷೇಧಿಸಲಾಗಿದೆ. ಆದರೂ ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಈಗ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಧಿಕಾರಿಗಳು ದಾಳಿ ನಡೆಸಿದಾಗ ಪ್ಲಾಸ್ಟಿಕ್ ಕೈ ಚೀಲಗಳು ಸಿಕ್ಕಿದರೆ ಉದ್ದಿಮೆ ಪರವಾನಗಿ ರದ್ದುಗೊಳಿಸಲಿದ್ದಾರೆ’ ಎಂದು ಹೇಳಿದರು.

‘ಬೀದಿ ಬದಿ ವ್ಯಾಪಾರಿಗಳ ಬಳಿ ಪ್ಲಾಸ್ಟಿಕ್ ಸಿಕ್ಕರೆ ಅವರ ಅಂಗಡಿಯಲ್ಲಿರುವ ಎಲ್ಲಾ ಸರಕುಗಳನ್ನು ಜಪ್ತಿ ಮಾಡಲಾಗುತ್ತದೆ. ಪೇಪರ್ ಅಥವಾ ಬಟ್ಟೆ ಕೈ ಚೀಲಗಳನ್ನು ಮನೆಯಿಂದ ತಾರದೇ ಇದ್ದವರಿಗೆ ವ್ಯಾಪಾರಿಗಳು ವಸ್ತುಗಳನ್ನು ಮಾರಾಟ ಮಾಡಬಾರದು’ ಎಂದು ತಿಳಿಸಿದರು.

‘ಕಸ ವಿಂಗಡಣೆ ಮಾಡದವರಿಗೂ ಸೆ. 1ರಿಂದ ದಂಡ ಹಾಕುವುದು ನಿಶ್ಚಿತ. ಎಲ್ಲಾ ವಾರ್ಡ್‌ಗಳಲ್ಲಿ ಮಾರ್ಷಲ್‌ಗಳ ನೇಮಕವಾಗುವ ಕಾರಣ ಎಲ್ಲೆಂದರಲ್ಲಿ ಕಸ ಬಿಸಾಡಲು ಅವಕಾಶ ಇಲ್ಲ. ಹೀಗಾಗಿ, ಬಿಬಿಎಂಪಿ ಜತೆ ನಾಗರಿಕರು ಸಹಕರಿಸಬೇಕು. ನಿಯಮ ಪಾಲಿಸಬೇಕು’ ಎಂದು ಮನವಿ ಮಾಡಿದರು.

ಕಸ ವಿಲೇವಾರಿ: ದಕ್ಷಿಣದಲ್ಲಿ ಹೇಗೆ?

ಜನಸಂಖ್ಯೆ; 22.10ಲಕ್ಷ

ಮನೆಗಳ ಸಂಖ್ಯೆ; 4.91 ಲಕ್ಷ

ವಾರ್ಡ್‌ಗಳ ಸಂಖ್ಯೆ; 44

ವಿಧಾನಸಭಾ ಕ್ಷೇತ್ರಗಳು; ‌6

ಉದ್ಯಾನಗಳು; 266

ಪ್ರತಿನಿತ್ಯ ಉತ್ಪತ್ತಿಯಾಗುವ ಹಸಿಕಸ; 1,087 ಟನ್

ಪ್ರತಿನಿತ್ಯ ಉತ್ಪತ್ತಿಯಾಗುವ ಒಣಕಸ; 33 ಟನ್

ಕಸ ಸಂಗ್ರಹಕ್ಕೆ ಬಳಸುತ್ತಿರುವ ಕಾಂಪ್ಯಾಕ್ಟರ್; 134

ಕಸ ಸಂಗ್ರಹಕ್ಕೆ ಬಳಸುತ್ತಿರುವ ಆಟೋ ಟಿಪ್ಪರ್; 855

ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು; 4,033

ಪ್ರತಿನಿತ್ಯ ಸಂಸ್ಕರಣೆಯಾಗುತ್ತಿರುವ ಒಣ ಎಲೆ; 1.50 ಟನ್

ಬಯೋಮೀಥನೈಸೇಷನ್ ಘಟಕಗಳು; 4 (ತಲಾ 5 ಟನ್ ಸಾಮರ್ಥ್ಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.