ADVERTISEMENT

ಬಿಬಿಎಂಪಿ: ನಿಯಮಬಾಹಿರ ವರ್ಗಾವಣೆ ರದ್ದು

​ಪ್ರಜಾವಾಣಿ ವಾರ್ತೆ
Published 22 ಮೇ 2021, 13:30 IST
Last Updated 22 ಮೇ 2021, 13:30 IST

ಬೆಂಗಳೂರು: ಬಿಬಿಎಂಪಿಯ ವೃಂದ ಮತ್ತು ನೇಮಕಾತಿ ನಿಯಮ 2020ರಲ್ಲಿ ಅವಕಾಶ ಇಲ್ಲದಿದ್ದರೂ ರಸ್ತೆ ಮೂಲ ಸೌಕರ್ಯ ವಿಭಾಗದ ಪ್ರಭಾರ ಅಧೀಕ್ಷಕ ಎಂಜಿನಿಯರ್‌ ಎಸ್‌.ವಿ.ರಾಜೇಶ್‌ ಅವರಿಗೆ ಮುಖ್ಯ ಎಂಜಿನಿಯರ್‌ (ಪಶ್ಚಿಮ) ಹುದ್ದೆಗೆ ವರ್ಗ ಮಾಡಿದ್ದ ಆದೇಶವನ್ನು ಬಿಬಿಎಂಪಿ ರದ್ದು ಪಡಿಸಿದೆ.

ಮುಖ್ಯ ಎಂಜಿನಿಯರ್‌ (ಜಾಗೃತ ಮತ್ತು ಪಿಪಿಇಡಿ) ಎ.ಬಿ.ದೊಡ್ಡಯ್ಯ ಅವರು ಮುಂದಿನ ಆದೇಶದವರೆಗೆ ಪಶ್ಚಿಮ ವಲಯದ ಮುಖ್ಯ ಎಂಜಿನಿಯರ್‌ ಹುದ್ದೆಯಲ್ಲಿ ಪ್ರಭಾರ ನೆಲೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಬಿಬಿಎಂಪಿ ಶುಕ್ರವಾರ ಆದೇಶ ಮಾಡಿದೆ.

ಬಿಬಿಎಂಪಿಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಮೀರಿ ಬಡ್ತಿ ಮತ್ತು ವರ್ಗಾವಣೆ ಮಾಡಿದ ಬಗ್ಗೆ ‘ಪ್ರಜಾವಾಣಿ’ ಗುರುವಾರದ (ಮೇ 20) ಸಂಚಿಕೆಯಲ್ಲಿ ‘ಮುಖ್ಯ ಎಂಜಿನಿಯರ್‌ ವರ್ಗಾವಣೆ ಪಾಲಿಕೆಗೆ ಅಧಿಕಾರ ಇದೆಯೇ?’ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ADVERTISEMENT

ಹೊಸ ವೃಂದ ಮತ್ತು ನೇಮಕಾತಿ ನಿಯಮದ ಪ್ರಕಾರ ಎ ಗುಂಪಿನ ಅಧಿಕಾರಿಗಳ ಹಾಗೂ ₹ 74 ಸಾವಿರಕ್ಕಿಂತ ಹೆಚ್ಚು ಮೂಲವೇತನ ಹೊಂದಿರುವ ಅಧಿಕಾರಿಗಳ ನೇಮಕಾತಿ ಹಾಗೂ ವರ್ಗಾವಣೆಯ ಅಧಿಕಾರವನ್ನು ಸರ್ಕಾರ ಬಿಬಿಎಂಪಿಯಿಂದ ಹಿಂಪಡೆದು ತನ್ನ ತೆಕ್ಕೆಯಲ್ಲೇ ಇಟ್ಟುಕೊಂಡಿದೆ. ಬಿ ಮತ್ತು ಸಿ ಗುಂಪಿನ ಅಧಿಕಾರಿಗಳನ್ನು ಹಾಗೂ ಡಿ ಗುಂಪಿನ ಸಿಬ್ಬಂದಿಯನ್ನು ಮಾತ್ರ ಆಯುಕ್ತರು ಅಥವಾ ಅವರು ಸೂಚಿಸಿದ ಅಧಿಕಾರಿ ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.