ADVERTISEMENT

ಬೆಂಗಳೂರು ಪ್ರವಾಹ ಪ್ರದೇಶಗಳಲ್ಲಿ ಸಮಸ್ಯೆ ಬಗೆಹರಿಸಲು BBMP ಮುಖ್ಯ ಆಯುಕ್ತ ಆದೇಶ

​ಪ್ರಜಾವಾಣಿ ವಾರ್ತೆ
Published 26 ಮೇ 2025, 14:52 IST
Last Updated 26 ಮೇ 2025, 14:52 IST
ಮಹೇಶ್ವರ ರಾವ್‌
ಮಹೇಶ್ವರ ರಾವ್‌   

ಬೆಂಗಳೂರು: ರಾಜಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಿ, ಸುತ್ತಮುತ್ತಲಿನ ಪ್ರದೇಶಗಳು ಜಲಾವೃತವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮಳೆಗಾಲದ ಸಂದರ್ಭದಲ್ಲಿ ವಲಯವಾರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿ ಅವರು ಮಾತನಾಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಗುರುತಿಸಿರುವಂತಹ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಮಸ್ಯೆ ಬಗೆಹರಿಸಬೇಕು. ಮಳೆಗಾಲದ ವೇಳೆ ಪ್ರತಿ ವಲಯದ ಎಲ್ಲ ಅಧಿಕಾರಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದರು.

ADVERTISEMENT

ರಾಜಕಾಲುವೆ ವಿಭಾಗದಿಂದ ನಿರಂತರವಾಗಿ ಹೂಳು ತೆಗದು ಸ್ವಚ್ಛತೆ ಕಾಪಾಡುವ ಕೆಲಸ ಮಾಡಬೇಕು. ಆರ್‌ಸಿಸಿ ತಡೆಗೋಡೆ ನಿರ್ಮಾಣ ಮಾಡದ ರಾಜಕಾಲುವೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ತುಂಬಿಕೊಳ್ಳದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ನಗರದಲ್ಲಿ 210 ಪ್ರವಾಹ ಪೀಡಿತ ಪ್ರದೇಶಗಳ ಪೈಕಿ ಈಗಾಗಲೇ 166 ಕಡೆ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ವಲಯ ಆಯುಕ್ತರು ಅವುಗಳಿಗೆ ದೃಢೀಕರಣ ನೀಡಬೇಕು. ಬಾಕಿಯಿರುವ 44 ಸ್ಥಳಗಳಲ್ಲಿ ಕೂಡಲೇ ತಾತ್ಕಾಲಿಕ ಕ್ರಮ ಕೈಗೊಳ್ಳುವುದರ ಜೊತೆಗೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

183 ಕೆರೆಗಳಲ್ಲಿ 13 ಕೆರೆಗಳಿಗೆ ತೂಬು (ಸ್ಲೂಯಿಸ್ ಗೇಟ್) ಅಳವಡಿಸಲಾಗಿದೆ. ತೂಬು ಅಳವಡಿಸಿರುವ ಕೆರೆಗಳಲ್ಲಿ ನೀರು ತುಂಬಿದ್ದರೆ ನೀರಿನ ಮಟ್ಟವನ್ನು ಕಡಿಮೆ ಮಾಡಿ ಮಳೆ ನೀರು ತುಂಬಲು ಅನುವಾಗುವಂತೆ ಮಾಡಬೇಕು. ಉಳಿದ ಎಲ್ಲ ಕೆರೆಗಳಿಗೂ ಹಂತ-ಹಂತವಾಗಿ ತೂಬುಗಳನ್ನು ಅಳವಡಿಸಲು ಹಾಗೂ ತೆರವು ಮಾಡಲು ಯೋಜನೆ ರೂಪಿಸಬೇಕು ಎಂದು ಕೆರೆಗಳ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.

ಮಳೆಗಾಲದ ವೇಳೆ ಧರೆಗುರುಳಿದ ಮರ, ಕೊಂಬೆಗಳನ್ನು ಕೂಡಲೇ ತೆರವು ಮಾಡಲು ತಂಡಗಳು ಸದಾ ಸನ್ನದ್ಧವಾಗಿರಬೇಕು. ಒಣಗಿದ, ಅಪಾಯದ ಸ್ಥಿತಿಯಲ್ಲಿರುವ ಮರ, ರೆಂಬೆ, ಕೊಂಬೆಗಳನ್ನು ಗುರುತಿಸಿ ತೆರವುಗೊಳಿಸಬೇಕು ಎಂದರು.

ರಸ್ತೆ ಬದಿಯಲ್ಲಿ ಆಟೋ ಟಿಪ್ಪರ್‌ಗಳಿಂದ ಕಾಂಪ್ಯಾಕ್ಟರ್‌ಗಳಿಗೆ ತ್ಯಾಜ್ಯ ವರ್ಗಾವಣೆ ಮಾಡುತ್ತಿದ್ದು, ಇದನ್ನು ಸ್ಥಳಾಂತರ ಮಾಡಬೇಕು. ಪಾಲಿಕೆಯ ಜಾಗ ಅಥವಾ ಇನ್ನಿತರೆ ಸ್ಥಳಗಳನ್ನು ಗುರುತಿಸಬೇಕು ಎಂದು ಹೇಳಿದರು.

ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷಾ ಕಾರ್ಯವನ್ನು ಎಂಟೂ ವಲಯಗಳ ವಲಯ ಆಯುಕ್ತರು ಮೇಲ್ವಿಚಾರಣೆ ಮಾಡಬೇಕು ಎಂದರು.

ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಕೆ ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಅವಿನಾಶ್ ಮೆನನ್ ರಾಜೇಂದ್ರನ್, ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರಾದ ಸತೀಶ್, ರಮ್ಯಾ, ದಿಗ್ವಿಜಯ್ ಬೋಡ್ಕೆ, ಕರೀಗೌಡ, ಸ್ನೇಹಲ್, ರಮೇಶ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.