ADVERTISEMENT

ರಾಜಕಾಲುವೆ ಒತ್ತುವರಿ ಎಲ್ಲೆಡೆ ತೆರವು: ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್

ಎಂಟೂ ವಲಯಗಳಲ್ಲೂ ಕಾರ್ಯಾಚರಣೆ: ಬಿಬಿಎಂಪಿ ಆಯುಕ್ತ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 22:14 IST
Last Updated 1 ನವೆಂಬರ್ 2022, 22:14 IST
ಬಿಬಿಎಂಪಿ ನೌಕರರ ಕನ್ನಡ ಸಂಘದ ವತಿಯಿಂದ ಆಹಾರದ ಕಿಟ್ ವಿತರಿಸಲಾಯಿತು. ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌, ಸಂಘದ ಪದಾಧಿಕಾರಿಗಳು ಇದ್ದರು
ಬಿಬಿಎಂಪಿ ನೌಕರರ ಕನ್ನಡ ಸಂಘದ ವತಿಯಿಂದ ಆಹಾರದ ಕಿಟ್ ವಿತರಿಸಲಾಯಿತು. ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌, ಸಂಘದ ಪದಾಧಿಕಾರಿಗಳು ಇದ್ದರು   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಎಂಟೂ ವಲಯದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಶೀಘ್ರವೇ ಆರಂಭಿಸಲಾಗುತ್ತದೆಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

ರಾಜ್ಯೋತ್ಸವ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಂಗಳ ವಾರ ಮಾತನಾಡಿದ ಅವರು, ‘ಈವರೆಗೆ ಮಹದೇವಪುರ ವಲಯದಲ್ಲಿ ಮಾತ್ರ ರಾಜಕಾಲುವೆ ಒತ್ತುವರಿ ಕಾರ್ಯಾಚರಣೆ ಮಾಡಲಾಗುತ್ತಿತ್ತು. ಇನ್ನು ಮುಂದೆ ಎಲ್ಲೆಲ್ಲಿ ಒತ್ತುವರಿಯಾಗಿದೆಯೋ ಅಲ್ಲೆಲ್ಲ ತೆರವು ಕಾರ್ಯಾಚರಣೆ ಮಾಡಲು ಸೂಚಿಸಲಾಗಿದೆ. ಕಂದಾಯ ಇಲಾಖೆಯಿಂದ ನೋಟಿಸ್‌ ಹಾಗೂ ತೆರವು ಆದೇಶವನ್ನು ನಿರೀಕ್ಷಿಸಲಾಗಿದೆ’ ಎಂದು ತಿಳಿಸಿದರು.

ರಾಜಕಾಲುವೆ ಒತ್ತುವರಿ ಬಗ್ಗೆ ಒಂದಷ್ಟು ಮಾಹಿತಿ ಇದೆ. ಇದಲ್ಲದೆ, ಸಂಪೂರ್ಣವಾಗಿ ಎಲ್ಲೆಲ್ಲಿ ಒತ್ತುವರಿಯಾಗಿದೆಯೋ ಅದೆಲ್ಲವನ್ನೂ ಗುರುತು ಮಾಡಿ, ತೆರವು ಆದೇಶ ನೀಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಸಂಬಂಧಿ ಸಿದ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಗಿದೆ. ಅವರು ಆದೇಶ ನೀಡಿದ ತಕ್ಷಣವೇ ತೆರವು ಆರಂಭಿಸಲಾಗುತ್ತದೆ ಎಂದರು.

ADVERTISEMENT

ನ್ಯಾಯಾಲಯದ ಕೆಲವು ಪ್ರಕರಣಗಳಿಂದ ಮಹದೇವಪುರ ವಲಯದಲ್ಲಿ ತೆರವು ಕಾರ್ಯಾಚರಣೆ ನಿಧಾನಗತಿಯಲ್ಲಿದೆ. ನ್ಯಾಯಾಲಯದಲ್ಲಿ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಒತ್ತುವರಿಯನ್ನೂ ತೆರವು ಮಾಡ ಲಾಗುತ್ತದೆ ಎಂದರು.

ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಆರಂಭವಾಗಿದೆ. ಎಂಜಿನಿಯರ್‌ಗಳಿಗೆ ಗುರಿ ನೀಡಲಾಗಿದ್ದು, ಅವರು ಕಾರ್ಯನಿರ್ವಹಿಸದಿದ್ದರೆ ನೋಟಿಸ್‌ ನೀಡಲಾಗುತ್ತದೆ. ಅಗತ್ಯಬಿದ್ದರೆ ಅಮಾನತು ಮಾಡಲಾಗುತ್ತದೆ ಎಂದು ತುಷಾರ್‌ ಗಿರಿನಾಥ್‌ ಹೇಳಿದರು.

‌ರಾಜ್ಯೋತ್ಸವ:ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ರಾಜ್ಯೋತ್ಸವದ ಅಂಗವಾಗಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ತುಷಾರ್ ಗಿರಿನಾಥ್ ಧ್ವಜಾರೋಹಣ ನೆರವೇರಿಸಿದರು.

ಕಿಟ್ ವಿತರಣೆ: ಪ್ರಧಾನ ಮಂತ್ರಿಯವರ ಕ್ಷಯ ಮುಕ್ತ ಭಾರತ ಅಭಿಯಾನದ ಅಂಗವಾಗಿ ಬಿಬಿಎಂಪಿ ನೌಕರರ ಕನ್ನಡ ಸಂಘದ ವತಿಯಿಂದ 200 ಮಂದಿ ಕ್ಷಯ ರೋಗಿಗಳಿಗೆ ಆಹಾರದ ಕಿಟ್ ವಿತರಿಸಲಾಯಿತು.

ಸಹಾಯಧನ: ಬಿಬಿಎಂಪಿಯಲ್ಲಿ ಲಿಂಕ್ ವರ್ಕರ್ ಆಗಿದ್ದ ಪಾರ್ವತಿ ಅವರು ಹೃದಯಾಘಾತದಿಂದ ಮೃತ ಪಟ್ಟಿದ್ದರಿಂದ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘದ ವತಿಯಿಂದ ಮೃತರ ಕುಟುಂಬಕ್ಕೆ ₹1 ಲಕ್ಷ ಸಹಾಯ ಧನ ನೀಡಲಾಯಿತು.

ವಿಶೇಷ ಆಯುಕ್ತರಾದ ಡಾ. ಹರೀಶ್ ಕುಮಾರ್, ಪಿ.ಎನ್.ರವೀಂದ್ರ, ಎಸ್.ರಂಗಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.