ಬಿಬಿಎಂಪಿ
ಬೆಂಗಳೂರು: ಬಿಬಿಎಂಪಿ ಪೂರ್ವ ವಲಯ ವ್ಯಾಪ್ತಿಯಲ್ಲಿ ಮುರಿದು ಬಿದ್ದಿರುವ ವಿದ್ಯುತ್ ಕಂಬಗಳು ಮತ್ತು ಹಾನಿಗೊಂಡ ಸೂಚನಾ ಫಲಕಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಪೂರ್ವ ವಲಯದ ಆಯುಕ್ತೆ ಸ್ನೇಹಲ್ ಆರ್. ಸೂಚನೆ ನೀಡಿದರು.
ಶುಕ್ರವಾರ ವಿವಿಧ ಕಡೆಗಳಲ್ಲಿ ಸ್ಥಳ ಪರಿಶೀಲನೆ ನಡೆಸುತ್ತಿರುವಾಗ ಸಿ.ವಿ. ರಾಮನ್ ರಸ್ತೆಯಿಂದ ಮೇಖ್ರಿ ವೃತ್ತದ ದಿಕ್ಕಿನಲ್ಲಿ ಬಲಭಾಗದಲ್ಲಿರುವ ಮುರಿದು ಬಿದ್ದ ವಿದ್ಯುತ್ ಕಂಬಗಳು ಹಾಗೂ ಹಾನಿಗೊಂಡ ಸೂಚನಾ ಫಲಕಗಳನ್ನು ನೋಡಿದ ಬಳಿಕ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮೇಖ್ರಿ ವೃತ್ತ, ಎಚ್‌ಕ್ಯೂಟಿಸಿ ಹಾಗೂ ಅರಮನೆ ರಸ್ತೆ ಪ್ರದೇಶಗಳಲ್ಲಿ ಸ್ವಚ್ಛತೆಯ ಕೊರತೆ, ನಿರ್ವಹಣಾ ಸಮಸ್ಯೆಗಳನ್ನು ಸರಿಪಡಿಸಲು ಹೇಳಿದರು.
ಎಚ್‌ಕ್ಯೂಟಿಸಿ ಗೇಟಿನ ಸಮೀಪದ ಪ್ರದೇಶದಲ್ಲಿ ಹೊಸದಾಗಿ ಅಳವಡಿಸಲಾದ ಚರಂಡಿ ಚಪ್ಪಡಿಕಲ್ಲಿನ ಸುತ್ತಲಿನ ಸಣ್ಣ ಕಲ್ಲುಗಳು ಹಾಗೂ ಜಲ್ಲಿ ತೆರವು ಮಾಡಬೇಕು. ಪಾದಚಾರಿ ರಸ್ತೆಯನ್ನು ಜನಬಳಕೆಗೆ ಒದಗಿಸಬೇಕು. ಅನುಪಯುಕ್ತ ತಂತಿಗಳು, ತ್ಯಾಜ್ಯ, ಕಸ ಮತ್ತು ಮುರಿದ ಸಾಮಗ್ರಿಗಳನ್ನು ತೆರವು ಮಾಡಬೇಕು ಎಂದರು.
ಪಾದಚಾರಿ ಮಾರ್ಗದ ಮೇಲೆ ಸುಮಿತ್ ಅಪಾರ್ಟ್‌ಮೆಂಟ್‌ನಿಂದ ಕೊಳಚೆ ನೀರು ಹರಿಯುತ್ತಿರುವುದನ್ನು ಗಮನಿಸಿದ ವಲಯ ಆಯುಕ್ತರು, ಅಪಾರ್ಟ್‌ಮೆಂಟ್ ವ್ಯವಸ್ಥಾಪಕರಿಗೆ ನೋಟಿಸ್ ನೀಡಿ, ಸೂಕ್ತ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.