ADVERTISEMENT

ಮೇಯರ್‌ ಇನ್‌ ಕೌನ್ಸಿಲ್‌– ಕಾಂಗ್ರೆಸ್‌ಗೆ ಕಾಳಜಿ ಇಲ್ಲ: ಅರವಿಂದ ಲಿಂಬಾವಳಿ

ಅರವಿಂದ ಲಿಂಬಾವಳಿ ಟೀಕೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 19:44 IST
Last Updated 2 ಏಪ್ರಿಲ್ 2019, 19:44 IST

ಬೆಂಗಳೂರು: ‘ಬಿಬಿಎಂಪಿಯಲ್ಲಿ ಮೇಯನ್‌ ಇನ್‌ ಕೌನ್ಸಿಲ್‌ ಕಾಯ್ದೆ ಜಾರಿಗೆ ಬಿಜೆಪಿ ಬೆಂಬಲ ನೀಡಿತ್ತು. ಆದರೆ, ಕಾಂಗ್ರೆಸ್‌ ಇನ್ನೂ ಕಾಯ್ದೆ ಜಾರಿಗೊಳಿಸಿಲ್ಲ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಆರೋಪಿಸಿದರು.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರಗಳ ಅಭಿವೃದ್ಧಿ ದೃಷ್ಟಿಯಿಂದ ಮೇಯರ್‌ ಇನ್‌ ಕೌನ್ಸಿಲ್‌ ವ್ಯವಸ್ಥೆ ಜಾರಿಗೊಳಿಸುವುದಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಕಟಿಸಿದ್ದಾರೆ. ಮೇಯರ್‌ ಇನ್‌ ಕೌನ್ಸಿಲ್‌ ಬಗ್ಗೆ ಬಿ.ಎಸ್‌.ಪಾಟೀಲ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು. ವರದಿ ಸಲ್ಲಿಕೆಯಾಗಿ ಆರು ವರ್ಷಗಳು ಕಳೆದ ಬಳಿಕವೂ ಅದನ್ನು ಜಾರಿಗೊಳಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ಚುನಾವಣೆ ಹೊತ್ತಲ್ಲಿ ರಾಹುಲ್‌ ಅವರಿಗೆ ನಗರಗಳ ಮೇಲೆ ಪ್ರೀತಿ ಹೆಚ್ಚಾಗಿದೆ’ ಎಂದು ವ್ಯಂಗ್ಯವಾಡಿದರು.

‘ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹಣವನ್ನು ರಾಜ್ಯ ಸರ್ಕಾರ ಅನ್ಯ ಉದ್ದೇಶಗಳಿಗೆ ಬಳಸಿಕೊಂಡಿದೆ. ಈ ಬಗ್ಗೆ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಉತ್ತರ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

‘ಬೆಂಗಳೂರು ಉಪನಗರ ರೈಲು ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ 23 ಷರತ್ತುಗಳನ್ನು ವಿಧಿಸಿತ್ತು. ಕೆಲವು ಹಾಸ್ಯಾಸ್ಪದ ಷರತ್ತುಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಅದಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಒಪ್ಪಿದ್ದರು. ಆದರೆ, ಈವರೆಗೂ ಪ್ರಕ್ರಿಯೆ ಆರಂಭಿಸಿಲ್ಲ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ಕೊಡಬೇಕು’ ಎಂದು ಅವರು ಆಗ್ರಹಿಸಿದರು.

‘ನನಗೆ ಯಾರ ಪ್ರಚಾರವೂ ಬೇಕಿಲ್ಲ’ ಎಂಬ ಬೆಂಗಳೂರು ದಕ್ಷಿಣದ ಅಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅರವಿಂದ ಲಿಂಬಾವಳಿ, ‘ತೇಜಸ್ವಿ ಸೂರ್ಯ ಈ ರೀತಿಯ ಹೇಳಿಕೆ ನೀಡಲು ಸಾಧ್ಯವಿಲ್ಲ. ಒಂದು ವೇಳೆ ಅತಿ ಉತ್ಸಾಹದಲ್ಲಿ ಈ ರೀತಿ ಮಾತನಾಡಿದ್ದರೆ ಅವರನ್ನು ಕರೆದು ಬುದ್ಧಿ ಹೇಳುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.