ಬೆಂಗಳೂರು: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನುಮತಿ ಇಲ್ಲದೆ ಎಲ್‌ಇಡಿ ಜಾಹೀರಾತು ಫಲಕಗಳನ್ನು ಅಳವಡಿಸಿ, ನಿಯಮ ಉಲ್ಲಂಘಿಸಿರುವ ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ.
‘ಮುಖ್ಯ ಆಯುಕ್ತರ ಲಿಖಿತ ಅನುಮತಿ ಇಲ್ಲದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಲ್‌ಇಡಿ ಜಾಹೀರಾತು ಫಲಕಗಳನ್ನು ಅಳವಡಿಸಿರುವುದು ಬಿಬಿಎಂಪಿ ಕಾಯ್ದೆಯ ಸೆಕ್ಷನ್ 158ರ ಸ್ಪಷ್ಟ ಉಲ್ಲಂಘನೆ’ ಎಂದು ಬಿಬಿಎಂಪಿಯ ಕಂದಾಯ ಹಾಗೂ ಜಾಹೀರಾತು ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಮೇ 13ರಂದು ಹೊರಡಿಸಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ.
‘ಈ ರೀತಿಯ ಕಾನೂನು ಉಲ್ಲಂಘನೆಗೆ ಎರಡು ಲಕ್ಷ ರೂಪಾಯಿ ದಂಡದ ಜೊತೆಗೆ ಒಂದು ವರ್ಷ ಜೈಲು ಶಿಕ್ಷೆ ಇದೆ. ಮುಖ್ಯ ಆಯುಕ್ತರ ಲಿಖಿತ ಅನುಮತಿ ಇಲ್ಲದೆ ಜಾಹೀರಾತು ಪ್ರದರ್ಶಿಸಿರುವುದರಿಂದ ಕಾನೂನು, ನಿಯಮ ಉಲ್ಲಂಘನೆಯಾಗಿದೆ. ಏಳು ದಿನಗಳೊಳಗೆ ಎಲ್‌ಇಡಿ ಜಾಹೀರಾತು ಫಲಕಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ, ಬಿಬಿಎಂಪಿ ವತಿಯಿಂದಲೇ ಫಲಕಗಳನ್ನು ತೆರವು ಮಾಡಲಾಗುತ್ತದೆ. ಇದರ ವೆಚ್ಚವನ್ನೂ ಭರಿಸಬೇಕಾಗುತ್ತದೆ. ಅಲ್ಲದೆ, ಕ್ರಿಮಿನಲ್ ಪ್ರಕರಣವನ್ನೂ ದಾಖಲಿಸಲಾಗುತ್ತದೆ’ ಎಂದು ಕೆಎಸ್‌ಸಿಎಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ (ಸಿಇಒ) ಜಾರಿ ಮಾಡಲಾಗಿರುವ ನೋಟಿಸ್‌ನಲ್ಲಿ ಹೇಳಲಾಗಿದೆ.
ಮೇ 13ರಂದು ಈ ನೋಟಿಸ್ ಜಾರಿಯಾಗಿದ್ದರೂ, ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಆಸ್ತಿ ತೆರಿಗೆ ಪಾವತಿಸದ ಬಗ್ಗೆ ಬಿಬಿಎಂಪಿಯ ಪಶ್ಚಿಮ ವಲಯದಿಂದ ಕೆಎಸ್‌ಸಿಎಗೆ ನೋಟಿಸ್ ಜಾರಿ ಮಾಡಲಾಗಿದೆ. ಈ ಬಗ್ಗೆಯೂ ಕೆಎಸ್‌ಸಿಎ ಅಥವಾ ಬಿಬಿಎಂಪಿ ಮುಂದಿನ ಕ್ರಮ ಕೈಗೊಂಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.