ADVERTISEMENT

‘ಸ್ಮಾರ್ಟ್‌ ಪಾರ್ಕಿಂಗ್‌’ಗೆ ಮತ್ತೆ ಟೆಂಡರ್‌ ಕರೆದ ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 20:23 IST
Last Updated 8 ಡಿಸೆಂಬರ್ 2022, 20:23 IST
   

ಬೆಂಗಳೂರು: ಬಿಬಿಎಂಪಿಯ ಎಂಟೂ ವಲಯಗಳಲ್ಲಿ ಜಾರಿಗೆ ತರಲು ಯೋಜಿಸಿರುವ ‘ಪಾವತಿ ಪಾರ್ಕಿಂಗ್‌’ ವ್ಯವಸ್ಥೆಗೆ ಎರಡನೇ ಬಾರಿಗೆ ಟೆಂಡರ್‌ ಕರೆಯಲಾಗಿದೆ. ಈ ಬಾರಿ ಗುತ್ತಿಗೆದಾರರಿಗೆ ಕೆಲವೊಂದು ವಿನಾಯಿತಿ ನೀಡಲಾಗಿದೆ.

‘ಸ್ಮಾರ್ಟ್‌ ಪಾರ್ಕಿಂಗ್‌’ ನಗರದಲ್ಲಿ ಒಟ್ಟಾರೆ 723 ರಸ್ತೆಗಳಲ್ಲಿ ಜಾರಿಗೆ ಬರಲಿದ್ದು, ಈ ಹಿಂದೆ ಅಕ್ಟೋಬರ್‌ನಲ್ಲಿ ಕರೆಯಲಾಗಿದ್ದ ಟೆಂಡರ್‌ನಲ್ಲಿ ಯಾರೂ ಭಾಗವಹಿಸಿರಲಿಲ್ಲ. ಇದೀಗ ಎರಡನೇ ಬಾರಿಗೆ ಟೆಂಡರ್‌ ಕರೆಯಲಾಗಿದೆ.

ಗುತ್ತಿಗೆದಾರರ ಒಟ್ಟಾರೆ ಆದಾಯವನ್ನು ಐದು ವರ್ಷದಿಂದ ಏಳು ವರ್ಷಗಳಿಗೆ ಹೆಚ್ಚಿಸಲಾಗಿದ್ದು, ಗುತ್ತಿಗೆ ಅವಧಿಯನ್ನು 10 ವರ್ಷಕ್ಕೆ ನಿಗದಿಪಡಿಸಲಾಗಿದೆ. ಡಿ.16ರಂದು ಟೆಂಡರ್ ಸಲ್ಲಿಸಲು ಅಂತಿಮ ದಿನವಾಗಿದ್ದು, 17ರಂದು ಟೆಕ್ನಿಕಲ್‌ ಬಿಡ್‌ ನಡೆಯಲಿದೆ.

ADVERTISEMENT

ಕೋವಿಡ್‌ನಿಂದ ವರಮಾನದ ಮೊತ್ತವನ್ನು ಬಹುತೇಕ ಗುತ್ತಿಗೆದಾರರು ಹೊಂದಿರಲಿಲ್ಲ. ಹೀಗಾಗಿ ಅದನ್ನು ಏಳು ವರ್ಷಕ್ಕೆ ಏರಿಸಲಾಗಿದೆ. ಇನ್ನು ಕೆಲವು ತಾಂತ್ರಿಕ ಮಟ್ಟವನ್ನು ಸಡಿಲ ಗೊಳಿಸಲಾಗಿದೆ. ರಸ್ತೆಗಳು ಮಾತ್ರ ಹಿಂದಿನಂತೆಯೇ 723 ಇರಲಿದ್ದು ಶುಲ್ಕ ಅದೇ ರೀತಿ ಇರಲಿದೆ ಎಂದುಬಿಬಿಎಂಪಿ ಟ್ರಾಫಿಕ್‌ ಎಂಜಿನಿಯರಿಂಗ್‌ ಕೋಶದ (ಟಿಇಸಿ) ಎಂಜಿನಿಯರ್‌ಗಳು ಮಾಹಿತಿ ನೀಡಿದರು.

ರಸ್ತೆಗಳನ್ನು ಮೂರು ವರ್ಗವಾಗಿ ವಿಂಗಡಿಸಲಾಗಿದ್ದು, ದ್ವಿಚಕ್ರ ವಾಹನಕ್ಕೆ ಪ್ರತಿ ಗಂಟೆಗೆ ₹5ರಿಂದ ₹15 ಹಾಗೂ ಕಾರಿಗೆ ₹10ರಿಂದ ₹30 ಇರಲಿದೆ. ಬಿಬಿಎಂಪಿಗೆ ವಾರ್ಷಿಕವಾಗಿ ₹124 ಕೋಟಿ ವರಮಾನ ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.