ADVERTISEMENT

‘ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿ’

‘ಫಿಕ್ಸ್‌ ಮೈ ಸ್ಟ್ರೀಟ್‌’ ಆ್ಯಪ್‌ನಲ್ಲಿ ದೂರು ದಾಖಲು l 5,119 ಗುಂಡಿಗಳ ಗುರುತು

​ಪ್ರಜಾವಾಣಿ ವಾರ್ತೆ
Published 24 ಮೇ 2022, 20:15 IST
Last Updated 24 ಮೇ 2022, 20:15 IST

ಬೆಂಗಳೂರು: ‘ಫಿಕ್ಸ್‌ ಮೈ ಸ್ಟ್ರೀಟ್‌’ ಆ್ಯಪ್‌ನಲ್ಲಿ ದಾಖಲಾದ ದೂರುಗಳ ಆಧಾರದಲ್ಲಿ ನಗರದ ರಸ್ತೆಗಳಲ್ಲಿ 11,092 ಗುಂಡಿಗಳಿರುವುದನ್ನು ಗುರುತಿಸಲಾಗಿದ್ದು, 5,119 ಗುಂಡಿಗಳನ್ನು ಮುಚ್ಚುವ ಕೆಲಸ ಪ್ರಗತಿಯಲ್ಲಿದೆ’ ಎಂದು ಬಿಬಿಎಂಪಿಯ ವಿಶೇಷ ಆಯುಕ್ತ ರವೀಂದ್ರ(ಯೋಜನೆ) ಮಾಹಿತಿ ನೀಡಿದರು.

ಮಂಗಳವಾರ ಮಾತನಾಡಿದ ಅವರು, ‘ಫಿಕ್ಸ್‌ ಮೈ ಆ್ಯಪ್‌ನಲ್ಲಿ ದಾಖಲಾಗುವ ದೂರುಗಳನ್ನು ಆಯಾ ವಾರ್ಡ್‌ನ ಸಹಾಯಕ ಎಂಜಿನಿಯರ್‌ (ಎ.ಇ), ಸಹಾಯಕ ಕಾರ್ಯ ಪಾಲಕ ಎಂಜಿನಿಯರ್‌ (ಎಇಇ)
ಪರಿಶೀಲಿಸುತ್ತಾರೆ. ದೂರು ದಾಖಲಾದ ವಾರದೊಳಗೆ ಗುಂಡಿ ಮುಚ್ಚಬೇಕು ಎಂದು ಮುಖ್ಯ ಆಯುಕ್ತರು ಸೂಚಿಸಿದ್ದಾರೆ’ ಎಂದು ರವೀಂದ್ರ ತಿಳಿಸಿದರು.

ಮಳೆಗಾಲದಲ್ಲಿ ಅನಾಹುತ ಸಂಭವಿಸದಂತೆ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದ ಅವರು,‘ದಿಢೀರ್‌
ಪ್ರವಾಹ ಉಂಟಾದರೆ, ಸಂತ್ರಸ್ತರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಲು ಪ್ರತಿ ವಿಧಾನಸಭಾ ಕ್ಷೇತ್ರಲ್ಲಿ ತಲಾ ಒಂದು ಆಶ್ರಯತಾಣ ಗುರುತಿಸುತ್ತಿದ್ದೇವೆ’ ಎಂದರು.

ADVERTISEMENT

‘ರಾಜಕಾಲುವೆ ದುರಸ್ತಿಗೆ ಪ್ರತಿ ವಲಯಕ್ಕೆ ಅನುದಾನ ಬಿಡುಗಡೆ ಆಗಿದೆ. ರಾಜಕಾಲುವೆ ಹೂಳನ್ನು ತೆರವುಗೊಳಿಸಲು ವಿಧಾನಸಭಾ ಕ್ಷೇತ್ರವಾರು ಅಲ್ಪಾವಧಿ ಟೆಂಡರ್‌ ಕರೆದಿದ್ದೇವೆ. ಪ್ರತಿ ವಲಯಕ್ಕೂ 30 ಎಚ್‌ಪಿ ಸಾಮರ್ಥ್ಯದ ಪಂಪ್‌ ಖರೀದಿಸಲು ಆದೇಶ ಮಾಡಲಾಗಿದೆ. ಕಟ್ಟಡದ ತಳಮಹಡಿ ಕಟ್ಟಡ ಮಾಲೀಕರು ಪಂಪ್‌ ಇಟ್ಟುಕೊಳ್ಳುವ ಮೂಲಕ ಪ್ರವಾಹ ಎದುರಿಸಲು ಸನ್ನದ್ಧರಾಗಿ’ ಎಂದರು.

‘ಭೌಗೋಳಿಕ ಮಾಹಿತಿ ಆಧರಿಸಿ ತಳ ಮಹಡಿಯ ವಾಹನ ನಿಲುಗಡೆ ತಾಣಗಳು ಕನಿಷ್ಠ ಇಂತಿಷ್ಟು ಮಟ್ಟಕ್ಕಿಂತ ಮೇಲಿರಬೇಕು ಎಂಬ ಮಾನದಂಡ ನಿಗದಿಪಡಿಸುವ ಚಿಂತನೆ ಇದೆ’ ಎಂದರು.

‘ಸ್ಮಾರ್ಟ್‌ಸಿಟಿ ಯೋಜನೆ ಅಡಿ ಅಭಿವೃದ್ಧಿಪಡಿಸಲು ಕೈಗೆತ್ತಿಕೊಂಡ 32 ಕಾಮಗಾರಿಗಳಲ್ಲಿ 28 ಪೂರ್ಣಗೊಂಡಿವೆ. ಅವೆನ್ಯೂ ರಸ್ತೆ, ಎಚ್‌ಕೆಪಿ ರಸ್ತೆ, ಸೇಂಟ್‌ ಜಾನ್ಸ್‌ ಚರ್ಚ್ ರಸ್ತೆ ಹಾಗೂ ಮಿಲ್ಲರ್ಸ್‌ ರಸ್ತೆಯ ವಿಸ್ತರಿತ ಭಾಗದ ಡಾಂಬರೀಕರಣ ಶೀಘ್ರ ಪೂರ್ಣಗೊಳ್ಳಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.