ADVERTISEMENT

ರಸ್ತೆಗುಂಡಿ: ಕಳಪೆ ಕಾಮಗಾರಿ ಸಲ್ಲ- ಬಿಬಿಎಂಪಿಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 21:05 IST
Last Updated 7 ಅಕ್ಟೋಬರ್ 2021, 21:05 IST
ಹೈಕೋರ್ಟ್
ಹೈಕೋರ್ಟ್    

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು’ ಎಂದು ಹೈಕೋರ್ಟ್ ಬಿಬಿಎಂಪಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಬೆಂಗಳೂರಿನ ರಸ್ತೆಗಳ ನಿರ್ವಹಣೆಗೆ ಸಂಬಂಧಿಸಿದಂತೆ 2015ರಲ್ಲಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

‘ಕೇವಲ ಸಚಿವರ ಮನೆಗಳ ಮುಂದಿನ ರಸ್ತೆ ಉತ್ತಮವಾಗಿದ್ದರೆ ಸಾಲದು, ಸಾಮಾನ್ಯ ಜನರ ಮನೆಗಳ ಬಳಿಯೂ ರಸ್ತೆಗಳು ಉತ್ತಮ ಸ್ಥಿತಿಯಲ್ಲಿರಬೇಕು. ಪದೇಪದೇ ರಸ್ತೆಗಳಲ್ಲಿ ಗುಂಡಿ ಬೀಳದ ರೀತಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಸಬೇಕು’ ಎಂದು ನ್ಯಾಯಪೀಠ ಪಾಲಿಕೆಗೆ ತಾಕೀತು ಮಾಡಿದೆ.

ADVERTISEMENT

ಶ್ರೀ ಸಾಮಾನ್ಯರ ಮನೆ ರಸ್ತೆಗಳನ್ನೂ ನೋಡಿ: ಬಿಬಿಎಂಪಿ ಪರ ವಕೀಲರು ನ್ಯಾಯಪೀಠಕ್ಕೆ, ‘ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚಲು ಒಂದೇ ಏಜೆನ್ಸಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನಗರದಾದ್ಯಂತ ಪ್ರತಿದಿನ ಗುಂಡಿ ಮುಚ್ಚುವ ಕಾಮಗಾರಿ ನಡೆಯುತ್ತಿದೆ. ಆದರೆ, ಭಾರಿ ಮಳೆಯ ಕಾರಣದಿಂದ ಕೆಲಸ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ. ಎಲ್ಲೆಲ್ಲಿ ಹೆಚ್ಚು ಅಗತ್ಯವಿದೆಯೋ ಅಲ್ಲಿ ಗುಂಡಿ ಮುಚ್ಚುವ ಕೆಲಸವಾಗುತ್ತಿದೆ. ಈ ಬಗ್ಗೆ ಮುಂದಿನ ವಿಚಾರಣೆ ವೇಳೆ ಫೋಟೋ ಸಹಿತ ವಸ್ತುಸ್ಥಿತಿ ವರದಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಬಿಬಿಎಂಪಿ ಕಣ್ಣಿಗೆ ಕೇವಲ ಸಚಿವರ ಬಂಗಲೆಗಳ ಮುಂದಿನ ಕುಮಾರಕೃಪ ರಸ್ತೆ, ಹೈಕೋರ್ಟ್ ಹಾಗೂ ವಿಧಾನಸೌಧದ ರಸ್ತೆಗಳಲ್ಲಿರುವ ಗುಂಡಿಗಳು ಮಾತ್ರ ಕಾಣುತ್ತವೆ. ಆದರೆ, ಶ್ರೀಸಾಮಾನ್ಯರು ವಾಸಿಸುವ ಪ್ರದೇಶಗಳ ರಸ್ತೆ ಗುಂಡಿಗಳು ಕಾಣಿಸುವುದಿಲ್ಲ’ ಎಂದು ಕುಟುಕಿತು.

‘ಕಾಮಗಾರಿಗೆ ಸಂಬಂಧಿಸಿದ ವಸ್ತುಸ್ಥಿತಿ ವರದಿಯನ್ನು 2 ವಾರಗಳ ಒಳಗೆ ಸಲ್ಲಿಸಬೇಕು ಹಾಗೂ ಗುಂಡಿಗಳನ್ನು ಮುಚ್ಚಲು ಅಳವಡಿಸಿಕೊಂಡ ಕಾರ್ಯ ವಿಧಾನಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಒದಗಿಸಬೇಕು’ ಎಂದು ಪಾಲಿಕೆ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ನವೆಂಬರ್ 11ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.