ADVERTISEMENT

12 ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ: ಚುನಾವಣೆ ಬಹಿಷ್ಕರಿಸಿದ ಬಿಜೆಪಿ ಸದಸ್ಯರು

ಮೇಯರ್‌ ಕೊಠಡಿಯಲ್ಲಿ ಆಯ್ಕೆ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 19:57 IST
Last Updated 17 ಜನವರಿ 2019, 19:57 IST
   

ಬೆಂಗಳೂರು: ಬಿಜೆಪಿ ಸದಸ್ಯರ ಗೈರು ಹಾಜರಿಯ ನಡುವೆಯೇ ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಗುರುವಾರ ಅವಿರೋಧವಾಗಿ ನಡೆಯಿತು.

ಕಾಂಗ್ರೆಸ್‌ನ ಆರು ಜನ, ಜೆಡಿಎಸ್‌ನ ನಾಲ್ವರು, ಎಸ್‌ಡಿಪಿಐ ಮತ್ತು ಪಕ್ಷೇತರರಿಂದ ತಲಾ ಒಬ್ಬರು ಸ್ಥಾಯಿ ಸಮಿತಿಗಳ ಅಧ್ಯಕ್ಷರಾಗಿ ಆಯ್ಕೆಯಾದರು. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಜೆಡಿಎಸ್‌ನ ಮಂಜುಳಾ ನಾರಾಯಣಸ್ವಾಮಿ ಹಾಗೂ ವಾರ್ಡ್‌ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ದೇವದಾಸ್‌ ಚುನಾವಣೆ ವೇಳೆ ಹಾಜರಿರಲಿಲ್ಲ.

2018ರ ಡಿಸೆಂಬರ್‌ 5ರಂದು ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ನಡೆದಿತ್ತು. ಸಮಿತಿಗಳ ಅಧ್ಯಕ್ಷರ ಆಯ್ಕೆ ಸಲುವಾಗಿ ಡಿ.14ರಂದು ಸ್ಥಾಯಿಸ ಮಿತಿಗಳ ಸಭೆಯಲ್ಲಿ ಕೌನ್ಸಿಲ್‌ ಸಭಾಂಗಣದಲ್ಲಿ ಕರೆಯಲಾಗಿತ್ತು. ಮೇಯರ್ ಗಂಗಾಂಬಿಕೆ ಅವರು ಅಂದು ಚುನಾವಣಾ ಪ್ರಕ್ರಿಯೆಯನ್ನು ಮುಂದೂಡಿದ್ದರು.

ADVERTISEMENT

ಸಾಮಾನ್ಯವಾಗಿ ಕೆಂಪೇಗೌಡ ಪೌರಸಭಾಂಗಣದ ಕೌನ್ಸಿಲ್‌ ಹಾಲ್‌ನಲ್ಲೇ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗಳು ನಡೆಯುತ್ತಿದ್ದವು. ಆದರೆ ಈ ಬಾರಿ ಪೌರ ಸಭಾಂಗಣದಲ್ಲಿರುವ ಮೇಯರ್‌ ಅವರ ಕೊಠಡಿಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಮತದಾನದ ಹಕ್ಕು ಹೊಂದಿರುವ ಸ್ಥಾಯಿ ಸಮಿತಿ ಸದಸ್ಯರು ಮಾತ್ರ ಸಭೆಗೆ ಹಾಜರಾಗಬೇಕು ಎಂದು ಸಭೆಯ ತಿಳಿವಳಿಕೆ ಪತ್ರದಲ್ಲಿ ತಿಳಿಸಲಾಗಿತ್ತು. ಆದರೆ ಸ್ಥಾಯಿ ಸಮಿತಿ ಸದಸ್ಯರ ಬೆಂಬಲಿಗರು ಹಾಗೂ ಶಾಸಕ ಮುನಿರತ್ನ ಅವರೂ ಕೊಠಡಿಯೊಳಗೆ ಬಂದಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್‌, ‘ಚುನಾವಣೆ ಸಾಂಗವಾಗಿ ನಡೆಸಬೇಕು ಎಂಬ ಕಾರಣಕ್ಕೆ ಮತದಾನದ ಹಕ್ಕು ಹೊಂದಿದವರು ಮಾತ್ರ ಸಭೆಗೆ ಹಾಜರಾಗುವಂತೆ ಸೂಚಿಸಿದ್ದೆವು. ಶಾಸಕರು ಹಾಗೂ ಸದಸ್ಯರ ಬೆಂಬಲಿಗರು ಸಮಿತಿಗಳ ಅಧ್ಯಕ್ಷರಿಗೆ ಶುಭಕೋರಲು ಕೊಠಡಿಯೊಳಗೆ ಬಂದಿದ್ದರು. ಅವರನ್ನೂ ಹೊರಗೆ ಕಳುಹಿಸಿದ್ದೇವೆ’ ಎಂದರು.

ಬಿಜೆಪಿಯವರು ಚುನಾವಣಾ ಪ್ರಕ್ರಿಯೆ ಬಹಿಷ್ಕರಿಸಿದ ಕುರಿತು ಪ್ರತಿಕ್ರಿಯಿಸಿದ ಮೇಯರ್‌, ‘ನಾವು ಪಕ್ಷಭೇದ ಮಾಡದೆ ಸ್ಥಾಯಿ ಸಮಿತಿಗಳ ಎಲ್ಲ ಸದಸ್ಯರಿಗೂ ನೋಟಿಸ್‌ ಕಳುಹಿಸಿದ್ದೇವೆ. ಅವರು ಯಾವ ಕಾರಣದಿಂದಾಗಿ ಗೈರು ಹಾಜರಾಗಿದ್ದಾರೋ ಗೊತ್ತಿಲ್ಲ’ ಎಂದರು.

ಪಾಲಿಕೆಯಲ್ಲಿ ಜೆಡಿಎಸ್‌ ನಾಯಕಿ ನೇತ್ರಾ ನಾರಾಯಣ್‌, ‘ನಮ್ಮ ಪಕ್ಷದ ಮಂಜುಳಾ ನಾರಾಯಣಸ್ವಾಮಿ ಹಾಗೂ ದೇವದಾಸ್‌ ಅವರನ್ನು ಸಮಾಧಾನ ಪಡಿಸಿದ್ದೇವೆ. ಅವರು ಚುನಾವಣೆ ಸಂದರ್ಭದಲ್ಲಿ ಗೈರುಹಾಜರಾದ ಬಗ್ಗೆ ಪಕ್ಷದ ವರಿಷ್ಠರಿಗೆ ವರದಿ ನೀಡುತ್ತೇನೆ. ಅವರಿಬ್ಬರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ವರಿಷ್ಠರು ತೀರ್ಮಾನಿಸುತ್ತಾರೆ’ ಎಂದು ಹೇಳಿದರು.

ಚುನಾವಣೆ ಪಾರದರ್ಶಕವಾಗಿ ನಡೆದಿಲ್ಲ:ಪದ್ಮನಾಭ ರೆಡ್ಡಿ ಆರೋಪ

‘ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿಲ್ಲ. ಮೇಯರ್‌ ಅವರು ಕಳೆದ ಬಾರಿ ಸಭೆಯನ್ನು ಮುಂದೂಡಿದ್ದಾಗಲೇ ನಮಗೆ ಈ ಬಗ್ಗೆ ಸ್ಪಷ್ಟವಾಗಿತ್ತು’ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ತಿಳಿಸಿದರು.

‘ಮತದಾನದ ಹಕ್ಕು ಹೊಂದಿರುವ ಸದಸ್ಯರು ಮಾತ್ರ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ನೋಟಿಸ್‌ ನೀಡಿದರು. ಇದನ್ನು ಪ್ರಶ್ನಿಸಿ ಪಾಲಿಕೆ ಆಯುಕ್ತರಿಗೆ, ಕೌನ್ಸಿಲ್‌ ಕಾರ್ಯದರ್ಶಿಗೆ ಹಾಗೂ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದೆ. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗದ ಕಾರಣ ನಾವು ಚುನಾವಣೆ ಬಹಿಷ್ಕರಿಸಿದ್ದೇವೆ’ ಎಂದು ಹೇಳಿದರು.

ಸ್ಥಾಯಿ ಸಮಿತಿ ಸಭೆಗಳಲ್ಲೂ ಬಿಜೆಪಿ ಸದಸ್ಯರು ಇನ್ನು ಭಾಗವಹಿಸುವುದಿಲ್ಲವೇ ಎಂಬ ಪ್ರಶ್ನೆಗೆ, ‘ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ’ ಎಂದು ತಿಳಿಸಿದರು.

‘ಸ್ಥಾಯಿ ಸಮಿತಿ ಸಭೆಯ ನಿರ್ಣಯಗಳು ಅಂಗೀಕಾರ ಆಗಬೇಕಾದರೆ ಕನಿಷ್ಠ ಆರು ಸದಸ್ಯರು ಸಭೆಯಲ್ಲಿ ಹಾಜರಿರಬೇಕು. ಇಂದು ಸಾಮಾಜಿಕ ನ್ಯಾಯ ಹಾಗೂ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಆಯ್ಕೆ ನಡೆಯುವಾಗ ನಾಲ್ವರು ಸದಸ್ಯರು ಮಾತ್ರ ಹಾಜರಿದ್ದರು. ಈ ಪ್ರಕ್ರಿಯೆ ನಿಯಮ ಪ್ರಕಾರ ನಡೆದಿಲ್ಲ. ಈ ಬಗ್ಗೆ ಕೌನ್ಸಿಲ್‌ ಕಾರ್ಯದರ್ಶಿ ವಿರುದ್ಧ ಆಯುಕ್ತರಿಗೆ ದೂರು ನೀಡುತ್ತೇನೆ’ ಎಂದು ಹೇಳಿದರು.

‘ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ನಡೆದ ಬಳಿಕ ಮೊದಲ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ನಡೆಸಬೇಕು ಎಂಬ ಅಂಶ ಕೆಎಂಸಿ ಕಾಯ್ದೆಯಲ್ಲಿದೆ. ಆದರೆ, ಅಧ್ಯಕ್ಷರ ಆಯ್ಕೆ ನಡೆಯುವ ವೇಳೆ ಎಷ್ಟು ಸದಸ್ಯರು ಹಾಜರಿರಬೇಕು ಎಂಬ ಅಂಶ ಕಾಯ್ದೆಯಲ್ಲಿ ಎಲ್ಲೂ ಇಲ್ಲ’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.