ADVERTISEMENT

BBMP ವಾರ್ಡ್‌ ವಿಂಗಡಣೆ: ಸ್ಥಳೀಯರ ತಕರಾರು

ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ಅವೈಜ್ಞಾನಿಕ ವಿಂಗಡಣೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 21:43 IST
Last Updated 2 ಜುಲೈ 2022, 21:43 IST
ಎಚ್‌ಎಸ್‌ಆರ್ ವಾರ್ಡ್
ಎಚ್‌ಎಸ್‌ಆರ್ ವಾರ್ಡ್   

ಬೆಂಗಳೂರು: ವಾರ್ಡ್‌ ಮರು ವಿಂಗಡಣೆಗೆ ಆಕ್ಷೇಪಣೆಗಳ ಮಹಾ‍ಪೂರವೇ ಹರಿದುಬರುತ್ತಿದ್ದು, ಬೊಮ್ಮನಹಳ್ಳಿ ಮತ್ತು ಬೆಂಗಳೂರು ‌ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಅವೈಜ್ಞಾನಿಕ ವಿಂಗಡಣೆ ಬಗ್ಗೆ ಸ್ಥಳೀಯರಿಂದ ಅಸಮಾಧಾನ ವ್ಯಕ್ತವಾಗಿದೆ.

ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಎಎಸ್‌ಆರ್ ಮತ್ತು ರೂಪೇನ ಅಗ್ರಹಾರ ವಾರ್ಡ್‌ಗಳ ಚಿತ್ರಣವನ್ನು ಗಮನಿಸಿದರೆ ಈ ಅವೈಜ್ಞಾನಿಕ ವಿಂಗಡಣೆ ಗೊತ್ತಾಗುತ್ತದೆ. ಎಚ್ಎಸ್‌ಆರ್‌ ಲೇಔಟ್‌, ಮಂಗಮ್ಮನಪಾಳ್ಯ, ಸಿಂಗಸಂದ್ರ ವಾರ್ಡ್‌ಗಳ ಕೆಲ ಭಾಗಗಳನ್ನು ಸೇರಿಸಿ ಎಚ್‌ಎಸ್‌ಆರ್‌ ವಾರ್ಡ್‌ ಎಂದು ವಿಂಗಡಿಸಲಾಗಿದೆ.

ಸಿಲ್ಕ್‌ ಬೋರ್ಡ್‌ ಕಡೆಯಿಂದ ಹೊಸೂರು ರಸ್ತೆಯ ಎಡಭಾಗಕ್ಕೆ ಎಚ್‌ಎಸ್‌ಆರ್ ಲೇಔಟ್‌ನಿಂದ ಆರಂಭವಾಗುವ ವಾರ್ಡ್‌, ಸುಮಾರು ಐದು ಕಿಲೋ ಮೀಟರ್ ದೂರದ ತನಕ ಇದೆ. ಬಿರಟೇನೆ ಅಗ್ರಹಾರ ಮತ್ತು ಎಲೆಕ್ಟ್ರಾನಿಕ್ ಸಿಟಿ ಹತ್ತಿರದ ತನಕ ಇದೆ.

ADVERTISEMENT

ಹೊಸೂರು ರಸ್ತೆಯ ಇನ್ನೊಂದು ಬದಿಗೆ ರೂಪೇನ ಅಗ್ರಹಾರ ವಾರ್ಡ್‌ ವಿಂಗಡಿಸಲಾಗಿದೆ. ಅದು ಕೂಡ ಸಿಲ್ಕ್‌ ಬೋರ್ಡ್‌ನಿಂದ ಬಸವನಪುರ ರಸ್ತೆ ತನಕ ರಸ್ತೆ ಬದಿಯಲ್ಲೇ ನಾಲ್ಕು ಕಿಲೋ ಮೀಟರ್‌ನಷ್ಟು ಉದ್ದಕ್ಕೆ ವಿಸ್ತರಿಸಲಾಗಿದೆ. ಬೊಮ್ಮನಹಳ್ಳಿ, ಹೊಂಗಸಂದ್ರ, ಮಂಗಮ್ಮನಪಾಳ್ಯ, ಸಿಂಗಸಂದ್ರ ವಾರ್ಡ್‌ಗಳಲ್ಲಿನ ಕೆಲ ಭಾಗಗಳನ್ನು ಸೇರಿಸಿಕೊಂಡು ರೂಪೇನ ಅಗ್ರಹಾರ ವಾರ್ಡ್ ಮಾಡಲಾಗಿದೆ.

‘ಎಚ್‌ಎಸ್‌ಆರ್ ವಾರ್ಡ್ ಮತ್ತು ರೂಪೇನ ಅಗ್ರಹಾರ ವಾರ್ಡ್‌ಗಳನ್ನು ಹೊಸೂರು ರಸ್ತೆಯ ಎರಡು ಬದಿಯಲ್ಲಿ ಐದು ಕಿಲೋ ಮೀಟರ್‌ನಷ್ಟು ಉದ್ದಕ್ಕೆ ವಿಂಗಡಿಸಿರುವುದು ಸರಿಯಲ್ಲ. ವಾರ್ಡ್‌ ಕಚೇರಿಗೆ ನಾಗರಿಕರು ಬಂದು ಹೋಗುವುದು ಕಷ್ಟವಾಗಲಿದೆ’ ಎಂದು ಸ್ಥಳೀಯರು ಹೇಳುತ್ತಾರೆ. ಈ ರೀತಿ ಅವೈಜ್ಞಾನಿಕ ವಿಂಗಡಣೆ ಬಗ್ಗೆ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲಾಗುತ್ತಿದೆ ಎಂದು ಅವರು ಹೇಳಿದರು.

ಬೇಗೂರು ಗ್ರಾಮವೇ ಎತ್ತಂಗಡಿ

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿರುವ ಬೇಗೂರು ವಾರ್ಡ್‌ ಕೂಡ ವಿಚಿತ್ರವಾಗಿ ವಿಂಗಡಣೆಯಾಗಿದೆ. ಬೇಗೂರಿನ ದೇವಸ್ಥಾನ ಮತ್ತು ಚರ್ಚ್‌ ಬೇಗೂರು ವಾರ್ಡ್‌ನಲ್ಲಿ ಉಳಿದುಕೊಂಡಿವೆ. ಆದರೆ, ಊರಿನ ಬಹುತೇಕ ಮನೆಗಳನ್ನು ಕಾಳೇನ ಅಗ್ರಹಾರ ವಾರ್ಡ್‌ಗೆ ಸೇರಿಸಲಾಗಿದೆ.

‘ಹೋಬಳಿ ಕೇಂದ್ರವಾಗಿದ್ದ ಬೇಗೂರಿಗೆ 1,200 ವರ್ಷಗಳ ಇತಿಹಾಸ ಇದೆ. ರಾಜಕೀಯ ಹಿತಾಸಕ್ತಿಗಾಗಿ ವಿಭಾಗ ಮಾಡಿರುವುದು ಸರಿಯಲ್ಲ. ಹಳೇ ಊರನ್ನು ಬೇಗೂರು ವಾರ್ಡ್‌ನಲ್ಲೇ ಉಳಿಸಬೇಕು. ಇಲ್ಲದಿದ್ದರೆ ಗ್ರಾಮದ ಅಭಿವೃದ್ಧಿಗೆ ತೊಂದರೆಯಾಗಲಿದೆ’ ಎಂದು ಬೇಗೂರು ವಾರ್ಡ್‌ನ ಈ ಹಿಂದಿನ ಪಾಲಿಕೆ ಸದಸ್ಯ ಎಂ. ಆಂಜನಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.