ADVERTISEMENT

ಬಿಬಿಎಂಪಿ: ವಲಯ ಆಯುಕ್ತರಿಗೆ ಹೆಚ್ಚಿನ ಅಧಿಕಾರ

​ಪ್ರಜಾವಾಣಿ ವಾರ್ತೆ
Published 25 ಮೇ 2022, 20:28 IST
Last Updated 25 ಮೇ 2022, 20:28 IST
   

ಬೆಂಗಳೂರು: ಬಿಬಿಎಂಪಿಯಲ್ಲಿ ಮೇಲ್ವಿಚಾರಣೆ, ಯೋಜನೆ ರೂಪಿಸುವುದು, ಮಾನವ ಸಂಪನ್ಮೂಲ ನಿಯಂತ್ರಣ ವಿಚಾರಗಳಿಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳಲು ವಲಯ ಆಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಈ ಕುರಿತು ‍ಪಾಲಿಕೆಯ ಮುಖ್ಯ ಆಯುಕ್ತರು ಬುಧವಾರ ಆದೇಶ ಮಾಡಿದ್ದಾರೆ.

ತಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಇಲಾಖೆಗಳ ಮುಖ್ಯಸ್ಥರ ಕಚೇರಿಗಳಿಗೆ ಸಂಬಂಧಿಸಿದಂತೆ ಆಡಳಿತ ಮತ್ತು ಶಿಸ್ತು ನಿಯಂತ್ರಣದ ಅಧಿಕಾರವನ್ನು ವಲಯ ಆಯುಕ್ತರಿಗೆ ನೀಡಲಾಗಿದೆ. ಕೆಲವೊಂದು ತಾಂತ್ರಿಕ ವಿಷಯಗಳ ಹೊರತಾಗಿ ಆಡಳಿತಾತ್ಮಕ ನಿಯಂತ್ರಣವನ್ನೂ ಅವರ ವ್ಯಾಪ್ತಿಗೆ ತರಲಾಗಿದೆ. ಕಂದಾಯ, ಆರೋಗ್ಯ, ನಗರಯೋಜನೆ, ಕಸ ನಿರ್ವಹಣೆ, ತೋಟಗಾರಿಕೆ, ಶಿಕ್ಷಣ, ಅರಣ್ಯ ಮತ್ತು ಪಶುಸಂಗೋಪನೆ ಇಲಾಖೆಗಳ ತಾಂತ್ರಿಕ ವಿಚಾರಗಳಿಗೆ ಸಂಬಂಧಿಸಿದಂತೆ ಸಿಬ್ಬಂದಿ ಆಯಾ ಇಲಾಖೆ ಮುಖ್ಯಸ್ಥರಿಗೆ ವರದಿ ಮಾಡಬೇಕಾಗುತ್ತದೆ.

‘ಕಾಮಗಾರಿ ವಿಭಾಗದ ಅಧಿಕಾರಿಗಳು ತಾಂತ್ರಿಕ ವಿಚಾರಗಳಿಗೆ ಸಂಬಂಧಿಸಿ ಆಯಾ ವಲಯದ ಮುಖ್ಯ ಎಂಜಿನಿಯರ್‌ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಯೋಜನೆ, ಕೆರೆ, ಮೂಲಸೌಕರ್ಯ, ಒಎಫ್‌ಸಿ ಮತ್ತು ರಾಜಕಾಲುವೆ ಎಂಜಿನಿಯರಿಂಗ್‌ ವಿಭಾಗಗಳು ತಾಂತ್ರಿಕ ವಿಚಾರಗಳಿಗೆ ಸಂಬಂಧಿಸಿ ಆಯಾ ಇಲಾಖೆ ಮುಖ್ಯಸ್ಥರ ಅಧೀನದಲ್ಲಿ ಕಾರ್ಯನಿರ್ವಹಿಸಲಿವೆ’ ಎಂದು ಆದೇಶದಲ್ಲಿ ಮುಖ್ಯ ಆಯುಕ್ತರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.