ADVERTISEMENT

‘ಮೆಟ್ರೊ’ ಬಾಕಿ ನೀಡಲಿ: ಕೇಂದ್ರ ವಿ.ವಿ. ಪಟ್ಟು

‘ನಮ್ಮ ಮೆಟ್ರೊ’ಕ್ಕಾಗಿ ಜಮೀನು ಸ್ವಾಧೀನ, ₹ 15 ಕೋಟಿ ಬಾಕಿ ಉಳಿಸಿಕೊಂಡ ಬಿಎಂಆರ್‌ಸಿಎಲ್‌

ಎಂ.ಜಿ.ಬಾಲಕೃಷ್ಣ
Published 29 ಜೂನ್ 2019, 19:17 IST
Last Updated 29 ಜೂನ್ 2019, 19:17 IST
ಮೆಟ್ರೊ ರೈಲು ನಿಲ್ದಾಣದ ಹಿನ್ನೆಲೆಯಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ. --   –ಪ್ರಜಾವಾಣಿ ಚಿತ್ರ
ಮೆಟ್ರೊ ರೈಲು ನಿಲ್ದಾಣದ ಹಿನ್ನೆಲೆಯಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ. --   –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಮ್ಮ ಮೆಟ್ರೊ ರೈಲು ನಿಲ್ದಾಣ ನಿರ್ಮಾಣಕ್ಕೆ ಬಿಟ್ಟುಕೊಟ್ಟ ಜಾಗಕ್ಕೆ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ₹ 15 ಕೋಟಿ ಪರಿಹಾರವನ್ನು ಬಾಕಿ ಉಳಿಸಿಕೊಂಡಿದ್ದು, ಆ ಮೊತ್ತವನ್ನು ಬಿಡುಗಡೆ ಮಾಡಬೇಕು ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಪಟ್ಟು ಹಿಡಿದಿದೆ.

‘ನಗರದ ಹೃದಯ ಭಾಗದಲ್ಲಿರುವ ಬೃಹತ್‌ ಶಿಕ್ಷಣ ಸಂಸ್ಥೆ ಇದು. ಬಡ ವಿದ್ಯಾರ್ಥಿಗಳಿಗೆ ಅಗ್ಗದ ದರದಲ್ಲಿ ಶಿಕ್ಷಣ ನೀಡುವ ಈ ವ್ಯವಸ್ಥೆ ನೂರಾರು ವರ್ಷ ಉಳಿಯಬೇಕಾದರೆ ಇಲ್ಲಿನ ಆಸ್ತಿಯನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು. ಅದಕ್ಕಾಗಿ ವಿಶ್ವವಿದ್ಯಾಲಯಕ್ಕೆ ಬರಬೇಕಾದ ಹಣವನ್ನು ಹೇಗಾದರೂ ಮಾಡಿ ಪಡೆದುಕೊಳ್ಳಲು ಇರುವ ಯಾವ ಮಾರ್ಗವನ್ನೂ ಬಿಡುವುದಿಲ್ಲ’ ಎಂದು ಕುಲಪತಿ ಪ್ರೊ.ಎಸ್‌.ಜಾಫೆಟ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಶ್ವವಿದ್ಯಾಲಯಕ್ಕೆ ಈ ಮೊದಲು ಸುಮಾರು 90 ಎಕರೆಯಷ್ಟು ಜಮೀನು ಇತ್ತು. ಈ ಪೈಕಿ 45 ಎಕರೆಯಷ್ಟು ಜಾಗ ವಿಶ್ವವಿದ್ಯಾಲಯದಿಂದ ಕೈತಪ್ಪಿದೆ. ಉಳಿದ ಜಾಗವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕಾಗಿದೆ. ಅದರಲ್ಲಿ ಮೆಟ್ರೊ ನಿಗಮಕ್ಕೆ ನೀಡಿರುವ ಜಾಗವೂ ಸೇರಿದೆ. ಅದಕ್ಕೆ ಪರಿಹಾರ ರೂಪದಲ್ಲಿ ₹ 15 ಕೋಟಿ ಬರಬೇಕಿದೆ. ಈಗಾಗಲೇ ಹಲವು ಬಾರಿ ಬೇಡಿಕೆ ಸಲ್ಲಿಸಲಾಗಿದೆ. ಪರಿಹಾರವನ್ನು ಕೊಡದೆ ಹೋದರೆ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಬಹುದು’ ಎಂದರು.

ADVERTISEMENT

ಪರಿಹಾರ ಎಷ್ಟು?: ವಿಶ್ವೇಶ್ವರಯ್ಯ ಕಾಲೇಜು ನಿಲ್ದಾಣ ನಿರ್ಮಾಣಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸೇರಿದ 1,898 ಚದರ ಮೀಟರ್ ಜಾಗವನ್ನು ನಿಗಮ ಪಡೆದುಕೊಂಡಿತ್ತು.

‘ಚದರ ಮೀಟರ್‌ಗೆ ₹ 2,500 ದರದಲ್ಲಿ ಲೆಕ್ಕಾಚಾರ ಮಾಡಿ ₹ 5.53 ಕೋಟಿ ಪರಿಹಾರವನ್ನು ವಿಶ್ವವಿದ್ಯಾಲಯಕ್ಕೆ ನೀಡಲಾಗಿದೆ. ಆದರೆ, ನಿಗಮವು ಖಾಸಗಿಯವರಿಗೆ ಚದರ ಮೀಟರ್‌ಗೆ ₹ 10 ಸಾವಿರದಂತೆ ಪರಿಹಾರ ನೀಡಿದೆ. ಈಗಾಗಲೇ ಹಲವು ಬಾರಿ ಬಾಕಿ ಪರಿಹಾರ ನೀಡುವಂತೆ ಕೇಳಿಕೊಳ್ಳಲಾಗಿದೆ. ಇದಕ್ಕೆ ಇದುವರೆಗೆ ಸ್ಪಂದನೆ ಸಿಕ್ಕಿಲ್ಲ’ ಎಂದರು.

ಹಿನ್ನೆಲೆ: ಬೆಂಗಳೂರು ವಿಶ್ವವಿದ್ಯಾಲಯ ಮೂರು ವಿಶ್ವವಿದ್ಯಾಲಯಗಳಾಗಿ ವಿಭಜನೆಗೊಳ್ಳುವುದಕ್ಕೆ ಮೊದಲು ಸೆಂಟ್ರಲ್‌ ಕಾಲೇಜಿನ ಜಮೀನನ್ನು ಮೆಟ್ರೊ ಕಾಮಗಾರಿಗೆ ಕೊಡಲು ಅಂದಿನ ಕುಲಪತಿ ಡಾ.ಎನ್‌.ಪ್ರಭುದೇವ್‌ ಹಿಂದೇಟು ಹಾಕಿದ್ದರು. ಕಾಮಗಾರಿಯಿಂದಾಗಿ ಇಲ್ಲಿನ ಪಾರಂಪರಿಕ ಕಟ್ಡಡಗಳಿಗೆ ಧಕ್ಕೆಯಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದರು. ಅಂದಿನ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಉನ್ನತಾಧಿಕಾರದ ಸಮಿತಿ ಕೈಗೊಂಡ ನಿರ್ಧಾರದಂತೆ ಜಮೀನನ್ನು ಮೆಟ್ರೊ ಕಾಮಗಾರಿಗೆ ನೀಡಲು ಒಪ್ಪಿದ್ದರು. 2009ರಲ್ಲಿ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಅಂದು ನಿಗಮ ಪರಿಹಾರ ನೀಡಿತ್ತು. ಅದಕ್ಕೆ ವಿಶ್ವವಿದ್ಯಾಲಯ ಪ್ರತಿಭಟನೆ
ವ್ಯಕ್ತಪಡಿಸಿ ನಂತರ ಮೊತ್ತವನ್ನು ಸ್ವೀಕರಿಸಿತ್ತು.

ಸರ್ಕಾರ ನಿಗದಿಪಡಿಸಿದಂತೆ ಪರಿಹಾರ: ‘ಸರ್ಕಾರಿ ಭೂಮಿ ಸ್ವಾಧೀನ ಪಡಿಸಿಕೊಂಡರೆ ಎಷ್ಟು ಪರಿಹಾರ ಕೊಡಬೇಕು ಎಂಬ ನಿಯಮ ಇತ್ತೋ ಅಷ್ಟು ಪರಿಹಾರವನ್ನು ನಾವು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ನೀಡಿದ್ದೇವೆ. ಖಾಸಗಿ ಜಮೀನು ಸ್ವಾಧೀನಕ್ಕೂ, ಸರ್ಕಾರಿ ಜಮೀನು ಸ್ವಾಧೀನಕ್ಕೂ ವ್ಯತ್ಯಾಸ ಇರುವುದು ಎಲ್ಲರಿಗೂ ತಿಳಿದ ಸಂಗತಿ. ಸರ್ಕಾರದಿಂದಲೇ ನಡೆಯುವ ವಿಶ್ವವಿದ್ಯಾಲಯ ಇನ್ನಷ್ಟು ಪರಿಹಾರಕ್ಕೆ ಬೇಡಿಕೆ ಸಲ್ಲಿಸುವುದು ಸರಿ ಕಾಣುವುದಿಲ್ಲ. ಆದರೂ ಸರ್ಕಾರ ಏನು ನಿರ್ಧಾರಕ್ಕೆ ಬರುತ್ತದೋ ಅದನ್ನು ನಿಗಮ ಪಾಲಿಸುತ್ತದೆ’ ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವಿಶ್ವವಿದ್ಯಾಲಯಕ್ಕೆ ಕೊನೆಗೂ ಅಧಿಕೃತ ದ್ವಾರ, ನಾಮಫಲಕ!

ಬೆಂಗಳೂರು ಸೆಂಟ್ರಲ್‌ ವಿಶ್ವವಿದ್ಯಾಲಯ ರಚನೆಗೊಂಡು ಎರಡು ವರ್ಷ ಕಳೆದರೂ ಒಂದು ಸಮರ್ಪಕ ದ್ವಾರವಾಗಲೀ, ನಾಮಫಲಕವಾಗಲೀ ಇರಲಿಲ್ಲ. ಹಲವು ವಿಭಾಗಗಳ ಕುರಿತ ಮಾಹಿತಿಯೂ ಸರಿಯಾಗಿ ಇರಲಿಲ್ಲ. ಹೊರಗಿನಿಂದ ಬಂದವರಿಗೆ ನಗರದ ಹೃದಯ ಭಾಗದಲ್ಲೇ ಇರುವ ವಿಶ್ವವಿದ್ಯಾಲಯವನ್ನು ಹುಡುಕುವುದು ಒಂದಿಷ್ಟು ಸಾಹಸದ ಕೆಲಸವೇ ಆಗಿತ್ತು. ಇದೀಗ ಕೊನೆಗೂ ದ್ವಾರ, ನಾಮಫಲಕ ಅಳವಡಿಸುವುದಕ್ಕೆ ವಿಶ್ವವಿದ್ಯಾಲಯ ಮುಂದಾಗಿದೆ.

‘ಇನ್ನು ಎರಡು ದಿನದೊಳಗೆ ನಾಲ್ಕೈದು ಕಡೆಗಳಲ್ಲಿ ನಾಮಫಲಕವನ್ನು ಅಳವಡಿಸಲಾಗುವುದು. ಅರಮನೆ ರಸ್ತೆ ಭಾಗದಲ್ಲಿ ಬೃಹತ್‌ ದ್ವಾರ ನಿರ್ಮಿಸುವ ವಿಚಾರ ಇದೆ’ ಎಂದು ಜಾಫೆಟ್‌ ತಿಳಿಸಿದರು.

***

ಬಡ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಅನ್ಯಾಯ ಆಗಬಾರದು ಎಂಬ ಕಾಳಜಿ ನನ್ನದು. ವಿ.ವಿ.ಯಲ್ಲಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸಲು ಶಕ್ತಿಮೀರಿ ಶ್ರಮಿಸುವೆ

- ಪ್ರೊ.ಎಸ್‌.ಜಾಫೆಟ್‌, ಕುಲಪತಿ, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.