ADVERTISEMENT

ನ್ಯಾಯಾಂಗ ನಿಂದನೆ ಪ್ರಕರಣ: ಕ್ಷಮೆ ಯಾಚಿಸಿದ ಬಿಡಿಎ ಕಮಿಷನರ್

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 9:00 IST
Last Updated 4 ಜುಲೈ 2018, 9:00 IST
   

ಬೆಂಗಳೂರು: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಮಿಷನರ್ ರಾಕೇಶ್ ಸಿಂಗ್ ಬುಧವಾರ ಬೆಳಗ್ಗೆ ಕೋರ್ಟ್ ಗೆ ಖುದ್ದು ಹಾಜರಾಗಿ ಕ್ಷಮೆ ಯಾಚಿಸಿದರು.

ಸ್ಥಿರಾಸ್ತಿ ಪ್ರಕರಣವೊಂದರಲ್ಲಿ ಕೋರ್ಟ್ ಗೆ ಸಲ್ಲಿಸಬೇಕಾದ ಪ್ರತಿ ಪ್ರಮಾಣ ಪತ್ರಕ್ಕೆ ಸಹಿ ಹಾಕಲು ಸಮಯವಿಲ್ಲ ಎಂದು ಬಿಡಿಎ ಪರ ವಕೀಲರು ಮಂಗಳವಾರವಷ್ಟೇ ಕೋರ್ಟ್ ಗೆ ತಿಳಿಸಿದ್ದರು.

ವಕೀಲರ ಈ ಹೇಳಿಕೆಯನ್ನು ದಾಖಲಿಸಿಕೊಂಡಿದ್ದ ನ್ಯಾಯಮೂರ್ತಿ ಆರ್.ಎಸ್.ಚೌಹಾಣ್ ಹಾಗೂ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಕಮಿಷನರ್ ಖುದ್ದು ಹಾಜರಿಗೆ ಅದೇಶಿಸಿತ್ತು.

ADVERTISEMENT

ಬೆಳಗ್ಗೆ ಕೋರ್ಟ್ಗೆ ಹಾಜರಾದ ರಾಕೇಶ್ ಸಿಂಗ್ ನ್ಯಾಯಪೀಠಕ್ಕೆ ಕ್ಷಮೆ ಯಾಚಿಸಿದರು. ಇದಕ್ಕೆ ನ್ಯಾಯಪೀಠ "ಕ್ಷಮೆ ಯಾಚನೆ ಅಗತ್ಯವಿಲ್ಲ" ಎಂದಿತು.

ನ್ಯಾಯಮೂರ್ತಿ ಚೌಹಾಣ್ "ನಿಮ್ಮ ವಕೀಲರಿಗೆ ಸರಿಯಾಗಿ ಕಾರಣ ತಿಳಿಸಲು ಹೇಳಿ. ಸುಮ್ಮನೆ ಬ್ಯುಸಿ ಇದ್ದಾರೆ ಎಂದು ತಿಳಿಸಿದರೆ ಹೇಗೆ" ಎಂದು ಪ್ರಶ್ನಿಸಿ, "ಮಧ್ಯಾಹ್ನ ಪ್ರತಿ ಪ್ರಮಾಣ ಪತ್ರಕ್ಕೆ ಸಹಿ ಮಾಡಿ ಸಲ್ಲಿಸಿ" ಎಂದು ವಿಚಾರಣೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.