ADVERTISEMENT

ಬಿಡಿಎ: ನಕಲಿ ಎನ್ಒಸಿಗೆ ಕ್ರಿಮಿನಲ್ ಕೇಸ್

ಅಧಿಕಾರಿಗಳಿಂದ ವಿತರಣೆ; ಉನ್ನತಮಟ್ಟದ ತನಿಖೆಗೆ ಆದೇಶ: ಎಸ್‌.ಆರ್‌. ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 15:31 IST
Last Updated 22 ನವೆಂಬರ್ 2022, 15:31 IST
ಜೆ.ಪಿ. ನಗರ 9ನೇ ಹಂತದ 1ನೇ ಬ್ಲಾಕ್ ಆಲಹಳ್ಳಿಯಲ್ಲಿ 22 ಗುಂಟೆ ಜಾಗವನ್ನು ಬಿಡಿಎ ವಶಕ್ಕೆ ತೆಗೆದುಕೊಂಡಿತು.
ಜೆ.ಪಿ. ನಗರ 9ನೇ ಹಂತದ 1ನೇ ಬ್ಲಾಕ್ ಆಲಹಳ್ಳಿಯಲ್ಲಿ 22 ಗುಂಟೆ ಜಾಗವನ್ನು ಬಿಡಿಎ ವಶಕ್ಕೆ ತೆಗೆದುಕೊಂಡಿತು.   

ಬೆಂಗಳೂರು: ‘ಬಿಡಿಎ ಸ್ವಾಧೀನಪಡಿಸಿಕೊಂಡಿರುವ ಜಾಗಕ್ಕೆ ನಕಲಿ ಎನ್‌ಒಸಿ ನೀಡಿರುವ ಅಧಿಕಾರಿಗಳ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ. ಆ ಜಾಗ ಬಳಸಿಕೊಂಡಿರುವವರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌ ಎಚ್ಚರಿಸಿದ್ದಾರೆ.

‘ಈ ಹಿಂದೆ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಹಣದಾಸೆಗೆ ಬಿದ್ದು ಪ್ರಭಾವಿಗಳು ಮತ್ತು ಭೂಕಬಳಿಕೆದಾರರಿಗೆ ನಕಲಿ ಎನ್ಒಸಿಗಳನ್ನು ಕೊಟ್ಟು ಬಿಡಿಎ ಜಾಗವನ್ನು ಅತಿಕ್ರಮಣವಾಗುವಂತೆ ಮಾಡಿದ್ದರು. ಇದೀಗ ಇಂತಹ ನಕಲಿ ಎನ್ಒಸಿ ಪ್ರಕರಣಗಳ ತನಿಖೆ ನಡೆಸಲಾಗುತ್ತಿದೆ. ಯಾವುದೇ ಅಧಿಕಾರಿ ಮತ್ತು ಸಿಬ್ಬಂದಿ ತಪ್ಪೆಸಗಿದ್ದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ’ ಎಂದರು.

‘ಬೆಂಗಳೂರು ದಕ್ಷಿಣ ಭಾಗದಲ್ಲಿ ನಿರ್ಮಿಸಿರುವ ಬಡಾವಣೆಗಳಲ್ಲಿ ಈ ಹಿಂದೆ ಅಧಿಕಾರಿಗಳು, ಎಂಜಿನಿಯರ್‌ಗಳು ನಕಲಿ ಎನ್‌ಒಸಿಗಳನ್ನು ನೀಡಿದ್ದಾರೆ. ಅವುಗಳು ಬಿಡಿಎ ದಾಖಲೆ, ಕಡತದಲ್ಲಿ ಇಲ್ಲ. ಇಂತಹ ಪ್ರಕರಣಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕಾಗಿದೆ. ಇದರಿಂದ ಎಲ್ಲ ಪ್ರಕರಣಗಳು ಬೆಳಕಿಗೆ ಬರಲಿವೆ’ ಎಂದರು.

ADVERTISEMENT

‘ವಿಶೇಷ ತನಿಖಾ ತಂಡದಿಂದ’ (ಎಸ್‌ಐಟಿ) ನಕಲಿ ಎನ್‌ಒಸಿ ಪ್ರಕರಣವನ್ನು ತನಿಖೆ ಮಾಡಿಸಬೇಕು ಎಂದು ಯೋಜಿಸಲಾಗಿದೆ. ಇದಲ್ಲದಿದ್ದರೂ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಯುಕ್ತರಿಗೆಪತ್ರ ಬರೆಯಲಾಗಿದೆ. ಜತೆಗೆ 10 ವರ್ಷಗಳ ಹಿಂದಿನಿಂದ ನ್ಯಾಯಾಲಯದಲ್ಲಿದ್ದ ಪ್ರಕರಣಗಳ ಬಗ್ಗೆಯೂ ಪುನರ್‌ ವಿಮರ್ಶೆ ಮಾಡಲು ಕಾನೂನು ಕೋಶಕ್ಕೆ ಸೂಚನೆ ನೀಡಲಾಗಿದೆ’ ಎಂದರು.

‘ನಕಲಿ ಎನ್ಒಸಿ ಅಥವಾ ನಕಲಿ ದಾಖಲೆಗಳನ್ನು ಇಟ್ಟುಕೊಂಡು ಬಿಡಿಎ ಜಾಗದ ಮೇಲೆ ಹಿಡಿತ ಸಾಧಿಸುತ್ತಿರುವವರು ಕೂಡಲೇ ಅಂತಹ ದಾಖಲೆಗಳನ್ನು ನೀಡಿ ಬಿಡಿಎ ಜಾಗವನ್ನು ಬಿಟ್ಟುಕೊಡಬೇಕು. ಇಲ್ಲವಾದರೆ ಕಾನೂನು ರೀತಿಯಲ್ಲಿ ಶಿಸ್ತುಕ್ರಮ ಜರುಗಿಸಲಾಗುತ್ತದೆ’ ಎಂದರು.

‘ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಿಡಿಎ ಜಾಗದಲ್ಲಿ ಹಿಡಿತ ಸಾಧಿಸುತ್ತಿರುವವರ ಭೂಕಬಳಿಕೆದಾರರ ಬಗ್ಗೆ ಮಾಹಿತಿ ಮತ್ತು ದಾಖಲೆಗಳಿದ್ದರೆ ಬಿಡಿಎ ಅಧ್ಯಕ್ಷರು, ಆಯುಕ್ತರು ಮತ್ತು ಜಾಗೃತ ದಳದ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತರಬೇಕು’ ಎಂದರು.

₹30 ಕೋಟಿ ಮೌಲ್ಯದ ಆಸ್ತಿ ವಶ

ಜೆಪಿ ನಗರ 9 ನೇ ಹಂತದ 1 ನೇ ಬ್ಲಾಕ್ ನಲ್ಲಿನ ಆಲಹಳ್ಳಿ ಸರ್ವೆ ಸಂಖ್ಯೆ 4/1 ರಲ್ಲಿ 22 ಗುಂಟೆ ಜಮೀನನ್ನು ಬಿಡಿಎ ಮಂಗಳವಾರ ವಶಕ್ಕೆ ಪಡೆಯಿತು. ಇದರ ಮೌಲ್ಯ ₹30 ಕೋಟಿ.

’ಈ ಜಾಗದಲ್ಲಿ ಹತ್ತು ವರ್ಷಗಳಿಂದ ತಾತ್ಕಾಲಿಕ್ ಶೆಡ್ ಗಳನ್ನು ನಿರ್ಮಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ಬಿಡಿಎ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಪ್ರದೇಶಗಳಿಗೆ ಭೇಟಿ ನೀಡಿ, ಇಂತಹ ಜಾಗಗಳನ್ನು ಮರುವಶಕ್ಕೆ ಪಡೆದುಕೊಳ್ಳಬೇಕೆಂದು ಸೂಚಿಸಿದ್ದರು. ಅದರಂತೆ ಕಾರ್ಯಾಚರಣೆ ಮಾಡಲಾಗುತ್ತಿದೆ’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ಬಿಡಿಎ ಆಯುಕ್ತರ ಆದೇಶ ಪಡೆದ ಬಿಡಿಎ ಜಾಗೃತ ದಳದ ಪೊಲೀಸ್ ವರಿಷ್ಠಾಧಿಕಾರಿ ನಂಜುಂಡೇಗೌಡ ಮತ್ತು ಪೊಲೀಸ್ ಅಧಿಕಾರಿಗಳಾದ ರವಿಕುಮಾರ್, ಶ್ರೀನಿವಾಸ್ ಹಾಗೂ ಎಂಜಿನಿಯರ್ ಅಶೋಕ್ ನೇತೃತ್ವದಲ್ಲಿ 6 ತಾತ್ಕಾಲಿಕ ಶೆಡ್‌ಗಳನ್ನು ತೆರವುಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.