ADVERTISEMENT

ಬದಲಿ ನಿವೇಶನ ಹಂಚಿಕೆಯಲ್ಲಿ ಭಾರಿ ಅಕ್ರಮ: ಬಿಡಿಎ ತಪ್ಪು ಗುರುತಿಸಿದ ಸಮಿತಿ

ಬಿಡಿಎ ತಪ್ಪು ಗುರುತಿಸಿದ ನ್ಯಾ.ಎ.ವಿ. ಚಂದ್ರಶೇಖರ್‌ ಸಮಿತಿ l ಪ್ರಭಾವಿಗಳಿಗೆ ನೆರವಾಗಲು ನಿಯಮ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 20:30 IST
Last Updated 1 ಅಕ್ಟೋಬರ್ 2022, 20:30 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಸುಪ್ರೀಂ ಕೋರ್ಟ್‌ ಆದೇಶ ಮತ್ತು ತನ್ನದೇ ನಿಯಮಗಳನ್ನು ಉಲ್ಲಂಘಿಸಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿರುವುದನ್ನು ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡಿರುವ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್‌ ನೇತೃತ್ವದ ಸಮಿತಿ ಪತ್ತೆಹಚ್ಚಿದೆ.

ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಈ ಕುರಿತು ವಿಚಾರಣೆ ನಡೆಸಿದ ಸಮಿತಿಯು, ಸೆ.19ರಂದು ತನ್ನ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದೆ. ಬದಲಿ ನಿವೇಶನಗಳ ಹಂಚಿಕೆಯಲ್ಲಿ ವ್ಯಾಪಕವಾಗಿ ಅಕ್ರಮಗಳನ್ನು ಎಸಗಿರುವುದು, ಅಧಿಕಾರ ದುರ್ಬಳಕೆ ಮಾಡಿರುವುದನ್ನು ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ. ಈ ಪ್ರಕ್ರಿಯೆಯಲ್ಲಿ ಪ್ರಭಾವಿ ರಾಜಕಾರಣಿಗಳಿಗೆ ಅನುಕೂಲ ಮಾಡಿಕೊಟ್ಟಿರುವುದನ್ನೂ ಸಮಿತಿ ಹೊರಗೆಡವಿದೆ.

ಬಿಡಿಎ ಅಧಿಕಾರಯುತ ಸಮಿತಿಯನ್ನು ಕಣ್ತಪ್ಪಿಸಲು ಊರ್ಜಿತದಲ್ಲೇ ಇಲ್ಲದ ನ್ಯಾಯಾಲಯದ ಆದೇಶವೊಂದನ್ನು ಉಲ್ಲೇಖಿಸಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ನಿಯಮಗಳನ್ನು ಉಲ್ಲಂಘಿಸಿ ಶ್ರೀಮಂತರು ಮತ್ತು ಪ್ರಭಾವಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ವಿಚಾರಣಾ ವರದಿ ಹೇಳಿದೆ.

ADVERTISEMENT

ಬದಲಿ ನಿವೇಶನ ಕೋರಿ ಅರ್ಜಿ ಸಲ್ಲಿಸುವವರಿಗೆ ದುಬಾರಿ ಬೆಲೆಯ ನಿವೇಶನಗಳನ್ನು ಹಂಚಿಕೆ ಮಾಡುತ್ತಿದ್ದು, ಇದರಿಂದ ಪ್ರಾಧಿಕಾರಕ್ಕೆ ದೊಡ್ಡ ಪ್ರಮಾಣದ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂಬುದು ಸುಪ್ರೀಂ ಕೋರ್ಟ್‌ ಗಮನಕ್ಕೆ ಬಂದಿತ್ತು.

ಈ ಕುರಿತು ವಿಚಾರಣೆ ನಡೆಸುವಂತೆ ನ್ಯಾಯಾಲಯ ಆದೇಶಿಸಿತ್ತು. ಬದಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ 2021ರ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದ ಬಳಿಕ ಅಂತಹ ಬಡಾವಣೆಗಳಲ್ಲಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿರುವ ಪ್ರಕರಣಗಳಿಗೆ ಸೀಮಿತಗೊಳಿಸಿ ವಿಚಾರಣೆಗೆ ಆದೇಶಿಸಲಾಗಿತ್ತು.

2021ರ ಅಕ್ಟೋಬರ್‌ ನಂತರ 96 ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಈ ಪೈಕಿ ಇನ್ನೂ ಅಭಿವೃದ್ಧಿಯ ಹಂತದಲ್ಲಿರುವ ಅರ್ಕಾವತಿ ಬಡಾವಣೆಯಲ್ಲಿನ 28 ಮತ್ತು ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿನ 38 ಬದಲಿ ನಿವೇಶನಗಳ ಹಂಚಿಕೆಯನ್ನು ವಿಚಾರಣೆಯಿಂದ ಹೊರಗಿಡಲಾಗಿತ್ತು.

ಪತ್ತೆಯಾದ ಉಲ್ಲಂಘನೆಗಳು: ಬಿಡಿಎ (ನಿವೇಶನ ಹಂಚಿಕೆ) (ತಿದ್ದುಪಡಿ) ನಿಯಮಗಳು–2003ರ ಸೆಕ್ಷನ್‌ 11(ಎ) ಹಾಗೂ ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ಉಳಿದಿರುವ ನಿವೇಶನಗಳನ್ನು ಹರಾಜಿನ ಮೂಲಕವೇ ಮಾರಾಟ ಮಾಡುವಂತೆ ಸುಪ್ರೀಂ ಕೋರ್ಟ್‌ 2021ರ ಅಕ್ಟೋಬರ್‌ನಲ್ಲಿ ನೀಡಿದ್ದ ಆದೇಶಗಳನ್ನು ಹಲವು ಪ್ರಕರಣಗಳಲ್ಲಿ ಉಲ್ಲಂಘಿಸಿರುವುದು ಪತ್ತೆಯಾಗಿದೆ ಎಂಬ ಉಲ್ಲೇಖ ವರದಿಯಲ್ಲಿದೆ.

ಫಲಾನುಭವಿಗಳೊಂದಿಗೆ ಭೋಗ್ಯ ಮತ್ತು ಕ್ರಯದ ಕರಾರುಪತ್ರವನ್ನು ಮಾಡಿಕೊಂಡ ಬಳಿಕವೂ ಬದಲಿ ನಿವೇಶನ ಹಂಚಿಕೆಯ ಕೋರಿಕೆಗಳನ್ನು ಮಾನ್ಯ ಮಾಡಿರುವುದನ್ನು ವಿಚಾರಣಾ ಸಮಿತಿ ಗುರುತಿಸಿದೆ. ನಿವೇಶನಗಳ ಸ್ವಾಧೀನತಾ ಪತ್ರ ವಿತರಿಸಿದ ಬಳಿಕ ಬಿಡಿಎ ಮತ್ತು ಫಲಾನುಭವಿಯ ನಡುವಿನ ಸಂಬಂಧ ಕಡಿತವಾಗುತ್ತದೆ. ಆದರೆ, ಪ್ರಾಧಿಕಾರದ ನಿಯಮ ಉಲ್ಲಂಘಿಸಿ ಈ ರೀತಿಯ ಕೋರಿಕೆಗಳನ್ನು ಮಾನ್ಯ ಮಾಡಲಾಗಿದೆ ಎಂದು ಸಮಿತಿ ಹೇಳಿದೆ.

ಬಿಡಿಎ ಹಿಂದಿನ ಆಯುಕ್ತರಾಗಿದ್ದ ಐಎಎಸ್‌ ಅಧಿಕಾರಿ ಎಂ.ಬಿ. ರಾಜೇಶ್‌ ಗೌಡ, ಉಪ ಕಾರ್ಯದರ್ಶಿ ಡಾ.ಎನ್‌.ಎನ್‌. ಮಧು ಮತ್ತು ಕಾರ್ಯದರ್ಶಿ ಸಿ.ಎಲ್‌. ಆನಂದ್‌ ಈ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ಹೆಸರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.