ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆ ವಿಸ್ತರಿಸಲು ಮುಂದಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ), ಅಂದಾಜು 9 ಸಾವಿರ ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದೆ.
ಬಡಾವಣೆಯ ವಿಸ್ತರಣೆಗಾಗಿ ಗುರುತಿಸಿರುವ ಜಮೀನು ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆಯ ನಡುವೆ ಹಾಗೂ ನೈಸ್ ರಸ್ತೆಯ ಹೊರಗಿನ 17 ಗ್ರಾಮಗಳ ವ್ಯಾಪ್ತಿಯಲ್ಲಿದೆ. ಈ ಪೈಕಿ ಮುದ್ದಿನಪಾಳ್ಯ ಗ್ರಾಮವು ಮಾಗಡಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿದೆ.
ಕೆಂಗೇರಿ ಹೋಬಳಿಯ ಮಾರಗೊಂಡನಹಳ್ಳಿ, ಮಾಲಿಗೊಂಡನಹಳ್ಳಿ, ರಾಮೋಹಳ್ಳಿ, ತಾವರೆಕೆರೆ ಹೋಬಳಿಯ ಚಿಕ್ಕಲ್ಲೂರು–ರಾಂಪುರ, ಚಿಕ್ಕಲ್ಲೂರ–ವೆಂಕಟಾಪುರ, ಚಿಕ್ಕಲ್ಲೂರ, ಕೊಲ್ಲೂರು–ನಂಜುಂಡಾಪುರ, ಕೊಲ್ಲೂರು–ಗುರುನಾಯಕಪುರ, ಕೊಲ್ಲೂರು, ಕೇತೋಹಳ್ಳಿ, ಕೇತೋಹಳ್ಳಿ–ರಾಮಪುರ, ಕೇತೋಹಳ್ಳಿ–ನರಸೀಪುರ, ಶೇಷಗಿರಿಪುರ, ಕಣಮಿಣಿಕೆ, ಕೊಡಿಗೆಹಳ್ಳಿ, ಶೀಗೆಹಳ್ಳಿ ಮತ್ತು ಮುದ್ದಿನಪಾಳ್ಯ ಗ್ರಾಮಗಳಲ್ಲಿ 5,755 ಎಕರೆ 32 ಗುಂಟೆ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಹೈಕೋರ್ಟ್ ಆದೇಶದಂತೆ, ಕೆಂಪೇಗೌಡ ಬಡಾವಣೆ ವಿಸ್ತರಣೆ ಸಂಬಂಧ ಅಧಿಸೂಚನೆ ಹೊರಡಿಸಿರುವ ಬಿಡಿಎ, ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಐವರು ಭೂಮಾಪಕರು ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳಿಗೆ(ಡಿಇಒ) ಕಾರ್ಯ ವಿಂಗಡಣೆ ಮಾಡಿ ಆದೇಶಿಸಿದೆ. ಇವರು ಸರ್ವೆ ನಡೆಸಿ ನಕ್ಷೆಯೊಂದಿಗೆ ವರದಿ ನೀಡಲಿದ್ದಾರೆ.
ಹಾಲಿ ನಿರ್ವಹಿಸುತ್ತಿರುವ ಕಾರ್ಯದ ಜತೆಗೆ, ಸರ್ವೆ ಕಾರ್ಯ ನಡೆಸಿ, ನಕ್ಷೆಯೊಂದಿಗೆ ವರದಿ ನೀಡಲು ಆದೇಶಿಸಿದೆ. ಅಲ್ಲದೆ, ಪ್ರಭಾರ ವಹಿಸಿಕೊಂಡು ಮುಂದಿನ ಆದೇಶದವರೆಗೂ ಕಾರ್ಯನಿರ್ವಹಿಸಲು ಬಿಡಿಎ ಉಪ ಆಯುಕ್ತರು (ಭೂಸ್ವಾಧೀನ) ಸೂಚಿಸಿದ್ದಾರೆ.
5,755 ಎಕರೆ ಹೊರತುಪಡಿಸಿ ಬಿಡಿಎ, ಸುಮಾರು 3,200 ಎಕರೆ ಜಮೀನು ಸ್ವಾಧೀನ ಪ್ರಸ್ತಾಪಿಸಿದೆ. ಈ ಹಿಂದೆ ಅಧಿಸೂಚನೆ ಹೊರಡಿಸಲಾಗಿತ್ತು. ನಂತರ ಸ್ವಾಧೀನದಿಂದ ಕೈಬಿಡಲಾಗಿತ್ತು. ಪರಿಷ್ಕೃತ ಮಾಸ್ಟರ್ ಪ್ಲಾನ್ ಪ್ರಕಾರ ರಸ್ತೆಗಳನ್ನು ನಿರ್ಮಿಸಲು ಅಗತ್ಯವಿರುವ 38 ಎಕರೆ ಜಮೀನು ಮತ್ತು ಸ್ವಾಧೀನದಿಂದ ಹೊರಗುಳಿದ 1,317 ಎಕರೆ ಜಮೀನು ಸಹ ಇದರಲ್ಲಿ ಸೇರಿದೆ. ಅಲ್ಲದೇ ಬಡಾವಣೆಗೆ ಹೊಂದಿಕೊಂಡಿರುವ ನಾಲ್ಕು ಗ್ರಾಮಗಳಲ್ಲಿ ಸುಮಾರು 1,868 ಎಕರೆ ಜಮೀನು ಗುರುತಿಸಲಾಗಿದೆ.
ಬಿಡಿಎ 2010ರಲ್ಲೇ ನಾಡಪ್ರಭು ಕೆಂಪೇಗೌಡ ಬಡಾವಣೆ ಪ್ರಾರಂಭಿಸಿತ್ತು. ಆದರೆ, ಮೂಲಸೌಕರ್ಯಗಳ ಕೊರತೆಯಿಂದಾಗಿ ಸುಮಾರು 50 ಮನೆಗಳು ನಿರ್ಮಾಣಗೊಂಡಿವೆ. ಕೆಲವು ನಿರ್ಮಾಣ ಹಂತದಲ್ಲಿವೆ. ಬಿಡಿಎ ಆರಂಭದಲ್ಲಿ ಸುಮಾರು 4,040 ಎಕರೆ ಅಧಿಸೂಚನೆ ಹೊರಡಿಸಿದ್ದರೂ, ಈವರೆಗೆ 2,200 ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿದೆ.
ಶೇಕಡ 90ರಷ್ಟು ಕಾಮಗಾರಿ ಪೂರ್ಣ ಕೆಂಪೇಗೌಡ ಬಡಾವಣೆಯಲ್ಲಿ ಶೇಕಡ 80ರಷ್ಟು ಮೂಲಸೌಕರ್ಯ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಬಿಡಿಎ ತಿಳಿಸಿದೆ. 1234ನೇ ಬ್ಲಾಕ್‌ಗಳಲ್ಲಿ ಡಾಂಬರೀಕರಣ ಆಗಿಲ್ಲ. ವಿದ್ಯುತ್ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಬೇಕಿದೆ. ಆರು ಬ್ಲಾಕ್‌ಗಳ ಕಾಮಗಾರಿಯನ್ನು ಒಂದೇ ಏಜೆನ್ಸಿಗೆ ಅಥವಾ ಗುತ್ತಿಗೆದಾರರಿಗೆ ವಹಿಸಿರುವುದಕ್ಕೆ ನಿವಾಸಿಗಳು ಮತ್ತು ನಿವೇಶನದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಈಗಾಗಲೇ ಒಂದೊಂದು ಬ್ಲಾಕ್ ಕಾಮಗಾರಿಗಳನ್ನು ಬೇರೆ ಬೇರೆ ಏಜೆನ್ಸಿಗಳಿಗೆ ನೀಡಿದ್ದರೂ ಅವುಗಳನ್ನು ಕಾಲಮಿತಿಯಲ್ಲಿ ಮುಗಿಸಲು ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆರು ಬ್ಲಾಕ್‌ಗಳ ಬೃಹತ್ ಕಾಮಗಾರಿಯನ್ನು ಒಂದೇ ಟೆಂಡರ್ ಮೂಲಕ ಒಬ್ಬರೇ ಗುತ್ತಿಗೆದಾರರಿಗೆ ನೀಡಿದರೆ ಕಾಲಮಿತಿಯಲ್ಲಿ ಪೂರ್ಣಗೊಳ್ಳಲು ಹೇಗೆ ಸಾಧ್ಯ?’ ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.