ಬಿಡಿಎ
ಬೆಂಗಳೂರು: ವಿಜಯನಗರ ಟೆಲಿಕಾಂ ಬಡಾವಣೆಯಲ್ಲಿ ಟೆಲಿಕಾಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಸಿ.ಎ ನಿವೇಶನ ಮಾರಾಟ ಮಾಡಿರುವ ಸಂಬಂಧ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಸ್ವಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡಿದೆ.
‘ಪ್ರಜಾವಾಣಿ’ಯಲ್ಲಿ ಆಗಸ್ಟ್ 12ರಂದು ‘ಟೆಲಿಕಾಂ ಬಡಾವಣೆ: ಸಿ.ಎ ನಿವೇಶನ ಮಾರಾಟ’ ಶೀರ್ಷಿಕೆಯಲ್ಲಿ ಪ್ರಕಟವಾದ ವರದಿ ಆಧಾರದಲ್ಲಿ ನ್ಯಾಯಾಲಯ ಪ್ರಕರಣ ದಾಖಲಿಸಿಕೊಂಡು, ಬೆಂಗಳೂರು ಉತ್ತರ ತಹಶೀಲ್ದಾರ್, ಬಿಡಿಎ ಆಯುಕ್ತರು ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದೆ.
ಹೊಸಹಳ್ಳಿ ವಾರ್ಡ್‌ನಲ್ಲಿರುವ ವಿಜಯನಗರ ಟೆಲಿಕಾಂ ಬಡಾವಣೆಯಲ್ಲಿ ಸುಮಾರು ಏಳು ಸಾವಿರ ಚದರ ಅಡಿ ವಿಸ್ತೀರ್ಣದ 5 ಹಾಗೂ 6ನೇ ನಿವೇಶನಗಳನ್ನು ಕಾನೂನುಬಾಹಿರವಾಗಿ ಅನಿಲ ತಿಲಕ್ ಅವರಿಗೆ ₹2.32 ಕೋಟಿಗೆ ಮಾರಾಟ ಮಾಡಲಾಗಿದೆ. ಈ ಸಿ.ಎ. ನಿವೇಶನ 20 ವರ್ಷಗಳಿಂದ ಟೆಲಿಕಾಂ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಬಳಕೆಯಲ್ಲಿತ್ತು. ಈ ವಿಷಯವು ಭೂ ಕಬಳಿಕೆಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ ವಿಶೇಷ ನ್ಯಾಯಾಲಯವು ಸ್ವಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡಿದೆ.
ಜಮೀನಿನ ಅತಿಕ್ರಮಣಕ್ಕೆ ಸಂಬಂಧಿಸಿದಂತೆ, ವಿಸ್ತೀರ್ಣ, ಅತಿಕ್ರಮಿಸಿದ ವ್ಯಕ್ತಿಗಳ ಹೆಸರು, ವಿವರವಾದ ಸ್ಕೆಚ್, ಅನುಮೋದಿತ ನಕ್ಷೆ ಸೇರಿದಂತೆ ಎಲ್ಲ ಮಾಹಿತಿಯ ವಿವರವಾದ ವರದಿಯನ್ನು ಅ.12ರೊಳಗೆ ಸಲ್ಲಿಸಲು ಮೂವರು ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.