ADVERTISEMENT

₹ 7.18 ಕೋಟಿ ಮೌಲ್ಯದ 25 ನಕಲಿ ಡಿ.ಡಿ. ಜಪ್ತಿ

* ಬೇಗೂರು ಪೊಲೀಸರ ಕಾರ್ಯಾಚರಣೆ * ದಂಪತಿ ಸೇರಿ ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 18:50 IST
Last Updated 10 ಫೆಬ್ರುವರಿ 2021, 18:50 IST
ಜಪ್ತಿ ಮಾಡಲಾದ ನಕಲಿ ಡಿ.ಡಿ.ಗಳ ಜೊತೆ ಆರೋಪಿ ಇಂದ್ರಜಿತ್
ಜಪ್ತಿ ಮಾಡಲಾದ ನಕಲಿ ಡಿ.ಡಿ.ಗಳ ಜೊತೆ ಆರೋಪಿ ಇಂದ್ರಜಿತ್   

ಬೆಂಗಳೂರು: ನಕಲಿ ಡಿಮ್ಯಾಂಡ್ ಡ್ರಾಫ್ಟ್‌ಗಳನ್ನು (ಡಿ.ಡಿ.) ಸೃಷ್ಟಿಸಿ, ಅವುಗಳನ್ನೇ ಶ್ಯೂರಿಟಿಯಾಗಿಟ್ಟು ಲೇವಾದೇವಿದಾರರ ಬಳಿ ಲಕ್ಷಾಂತರ ರೂಪಾಯಿ ಸಾಲ ಪಡೆದು ವಂಚಿಸುತ್ತಿದ್ದ ಆರೋಪದಡಿ ದಂಪತಿ ಸೇರಿ ನಾಲ್ವರನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.

‘ಬನ್ನೇರುಘಟ್ಟ ರಸ್ತೆಯ ವಾಜರಹಳ್ಳಿ ನಿವಾಸಿ ಇಂದ್ರಜಿತ್ ನಾಯಕ್ ಅಲಿಯಾಸ್ ಅರ್ಜುನ್, ಅವರ ಪತ್ನಿ ಮಂಜುಳಾ, ಸ್ನೇಹಿತರಾದ ಮುನಿರಾಜು ಹಾಗೂ ಜೆ.ಪಿ.ನಗರದ ಆನಂದ್ ಬಂಧಿತರು. ಅವರಿಂದ ₹ 7.18 ಕೋಟಿ ಮೌಲ್ಯದ 25 ನಕಲಿ ಡಿ.ಡಿ.ಗಳು, ಪ್ರಿಂಟರ್, ಮುದ್ರೆಗಳು ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ರಾಷ್ಟ್ರೀಯ ಬ್ಯಾಂಕ್‌ಗಳ ಡಿ.ಡಿ.ಗಳಿಗೆ ಹೋಲಿಕೆಯಾಗುವ ರೀತಿಯಲ್ಲೇ ಆರೋಪಿಗಳು, ನಕಲಿ ಡಿ.ಡಿ.ಗಳನ್ನು ಸೃಷ್ಟಿಸುತ್ತಿದ್ದರು. ಅವುಗಳನ್ನೇ ಮುಂದಿಟ್ಟುಕೊಂಡು ಮಧ್ಯವರ್ತಿಗಳ ಮೂಲಕ ಸಾಲ ಪಡೆದು ವಂಚಿಸುತ್ತಿದ್ದರು. ಆರೋಪಿಗಳಿಂದ ಡಿ.ಡಿ. ಪಡೆದು ವಂಚನೆಗೀಡಾಗಿದ್ದ ವ್ಯಾಪಾರಿ ಜಯರಾಮ್ ಎಂಬುವರು ಇತ್ತೀಚೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡಾಗ ಆರೋಪಿಗಳ ಕೃತ್ಯ ಬಯಲಾಗಿದೆ’ ಎಂದೂ ತಿಳಿಸಿದರು.

ADVERTISEMENT

ಮನೆಯಲ್ಲೇ ಡಿ.ಡಿ. ತಯಾರಿ: ‘ಗ್ರಾಫಿಕ್ಸ್ ಡಿಸೈನರ್ ಆಗಿದ್ದ ಇಂದ್ರಜಿತ್, ಫೋಟೊಶಾಪ್ ಹಾಗೂ ಕೋರಲ್‌ಡ್ರಾ ಸಾಫ್ಟ್‌ವೇರ್‌ ಬಳಕೆಯಲ್ಲಿ ಪರಿಣಿತಿ ಪಡೆದಿದ್ದರು. ಜೊತೆಗೆ, ಕಾರ್ಯಕ್ರಮ ಸಂಘಟನಾ ಸಂಸ್ಥೆಯೊಂದನ್ನು ನಡೆಸುತ್ತಿದ್ದರು. ಲಾಕ್‌ಡೌನ್‌ನಿಂದಾಗಿ ಯಾವುದೇ ಕಾರ್ಯಕ್ರಮ ಸಿಗದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇಬ್ಬರು ಹೆಣ್ಣು ಮಕ್ಕಳಿದ್ದ ಕುಟುಂಬವನ್ನು ನಡೆಸುವುದು ಅವರಿಗೆ ಕಷ್ಟವಾಗಿತ್ತು. ಅಕ್ರಮವಾಗಿ ಹಣ ಸಂಪಾದನೆ ಮಾಡಲೆಂದು ಅವರು ಈ ಕೃತ್ಯ ಎಸಗುತ್ತಿದ್ದರು’ ಎಂದೂ ಪೊಲೀಸರು ಹೇಳಿದರು.

‘ಮನೆಯಲ್ಲೇ ಕಂಪ್ಯೂಟರ್ ಹಾಗೂ ಪ್ರಿಂಟರ್‌ ಇಟ್ಟುಕೊಂಡಿದ್ದ ಇಂದ್ರಜಿತ್, ಆರೋಪಿ ಮುನಿರಾಜು ಕಡೆಯಿಂದ ಅಸಲಿ ಡಿ.ಡಿ.ಗಳನ್ನು ಹಾಗೂ ಆನಂದ್ ಕಡೆಯಿಂದ ಬ್ಯಾಂಕ್‌ ಮುದ್ರೆಗಳನ್ನು ತರಿಸಿಕೊಂಡಿದ್ದ. ಅದೇ ಡಿ.ಡಿ. ಹಾಗೂ ಮುದ್ರೆಗಳನ್ನು ಬಳಸಿಕೊಂಡು ನಕಲಿ ಡಿ.ಡಿ.ಗಳನ್ನು ಸೃಷ್ಟಿಸಿದ್ದ. ಪತ್ನಿಯೂ ಅದಕ್ಕೆ ಸಹಕಾರ ನೀಡಿದ್ದರು’ ಎಂದೂ ತಿಳಿಸಿದರು.

ಬ್ಯಾಂಕ್‌ಗೆ ಹೋದಾಗ ಕೃತ್ಯ ಬಯಲು

‘ವ್ಯಾಪಾರಿ ಜಯರಾಮ್ ಅವರನ್ನು ಸಂಪರ್ಕಿಸಿದ್ದ ಆರೋಪಿಗಳು, ಶ್ರೀ ಬಿಲ್ಡರ್ಸ್‌ ಆ್ಯಂಡ್ ಡೆವಲಪರ್ಸ್‌ ಹೆಸರಿನಲ್ಲಿ ₹ 4.95 ಲಕ್ಷ ಮೌಲ್ಯದ ಡಿ.ಡಿ. ತೋರಿಸಿದ್ದರು. ಅದನ್ನು ಶ್ಯೂರಿಟಿಯಾಗಿ ಇಟ್ಟುಕೊಂಡು ಸಾಲ ನೀಡುವಂತೆ ಕೋರಿದ್ದರು. ಡಿ.ಡಿ. ಪಡೆದಿದ್ದ ಜಯರಾಮ್, ₹ 1.50 ಲಕ್ಷ ಸಾಲ ನೀಡಿದ್ದರು’ ಎಂದು ಪೊಲೀಸರು ಹೇಳಿದರು.

‘ಅದೇ ಡಿ.ಡಿ. ತೆಗೆದುಕೊಂಡು ಜಯರಾಮ್, ಫೆಡರಲ್ ಬ್ಯಾಂಕ್‌ಗೆ ಹೋಗಿದ್ದರು. ಡಿ.ಡಿ. ಪರಿಶೀಲಿಸಿದ್ದ ಬ್ಯಾಂಕ್ ಸಿಬ್ಬಂದಿ, ಅದು ನಕಲಿ ಎಂಬುದಾಗಿ ಹೇಳಿದ್ದರು. ಅವಾಗಲೇ ಜಯರಾಮ್, ಠಾಣೆಗೆ ಬಂದು ದೂರು ನೀಡಿದ್ದರು’ ಎಂದೂ ಅವರು ತಿಳಿಸಿದರು.

‘ಆರೋಪಿಗಳ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಹಲವು ಬ್ಯಾಂಕ್‌ಗಳ ನಕಲಿ ಡಿ.ಡಿ.ಗಳು ಸಿಕ್ಕಿವೆ. ಆರೋಪಿಗಳು ಮತ್ತಷ್ಟು ಮಂದಿಗೆ ವಂಚನೆ ಮಾಡಿರುವ ಮಾಹಿತಿ ಇದ್ದು, ತನಿಖೆ ಮುಂದುವರಿದಿದೆ’ ಎಂದೂ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.