ADVERTISEMENT

ಬಂಗಾಳಿ ಅಸೋಸಿಯೇಷನ್ ಉಳಿಸುವಂತೆ ಪ್ರತಿಭಟನೆ

ಬಾಡಿಗೆ ದರ ಕಡಿಮೆ ಮಾಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 3:20 IST
Last Updated 27 ಸೆಪ್ಟೆಂಬರ್ 2020, 3:20 IST
ಹಲಸೂರು ಕೆರೆ ಬಳಿಯ ಬಂಗಾಳಿ ಅಸೋಸಿಯೇಷನ್ ಎದುರು ಸಂಘದ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು.
ಹಲಸೂರು ಕೆರೆ ಬಳಿಯ ಬಂಗಾಳಿ ಅಸೋಸಿಯೇಷನ್ ಎದುರು ಸಂಘದ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು.   

ಬೆಂಗಳೂರು: ಬಂಗಾಳಿ ಅಸೋಸಿಯೇಷನ್ ಕಟ್ಟಡಕ್ಕೆ ಬಿಬಿಎಂಪಿ ವಿಧಿಸಿರುವ ದುಬಾರಿ ಬಾಡಿಗೆ ದರವನ್ನು ಕಡಿಮೆ ಮಾಡಬೇಕು. ಇತರ ಸಾಂಸ್ಕೃತಿಕ ಸಂಘ ಸಂಸ್ಥೆಗಳಿಗೆ ವಿಧಿಸುವ ದರದ ಪ್ರಕಾರವೇ ಬಾಡಿಗೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿ 'ಬಂಗಾಳಿ ಅಸೋಸಿಯೇಷನ್ ಉಳಿವಿಗಾಗಿ ವೇದಿಕೆ'ಯ ಸದಸ್ಯರು ಸಂಘದ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ವೇದಿಕೆಯ ಸಂಚಾಲಕ ಅಚಿಂತ್ಯಾ ಲಾಲ್ ರಾಯ್,'ಸಂಘವು ಹಲಸೂರು ಕೆರೆ ಸಮೀಪದ ಸರ್ಕಾರಿ ಜಾಗವನ್ನು 1977ರಲ್ಲಿ 30 ವರ್ಷದ ಅವಧಿಗೆ ಗುತ್ತಿಗೆಗೆ ಪಡೆದಿತ್ತು. ಠ್ಯಾಗೋರ್ ಸಾಂಸ್ಕೃತಿಕ ಕೇಂದ್ರದ ಹೆಸರಿನಲ್ಲಿ ಎರಡು ಕಟ್ಟಡಗಳನ್ನು ಹೊಂದಿದ್ದು, ಒಂದನೇ ನಿವೇಶನದ ಗುತ್ತಿಗೆ ಅವಧಿ 2007ಕ್ಕೆ ಹಾಗೂ 2ನೇ ನಿವೇಶನದ ಅವಧಿ 2012ಕ್ಕೆ ಪೂರ್ಣಗೊಂಡಿತು' ಎಂದು ವಿವರಿಸಿದರು.

'ಎರಡೂ ನಿವೇಶನಗಳಿಗೆ ಸಂಘವು ವಾರ್ಷಿಕ ₹5,690 ಬಾಡಿಗೆ ಪಾವತಿಸುತ್ತಿತ್ತು. ಅವಧಿ ಪೂರ್ಣಗೊಂಡ ಬಳಿಕ ಪಾಲಿಕೆ ಏಕಾಏಕಿ ವಾಣಿಜ್ಯ ಬಾಡಿಗೆ ದರ ವಿಧಿಸಿದೆ. ಎರಡೂ ನಿವೇಶನಗಳಿಗೆ ವಾರ್ಷಿಕ ₹35 ಲಕ್ಷ ಪಾವತಿಸುವಂತೆ ತಿಳಿಸಿದೆ. ಇಷ್ಟು ದೊಡ್ಡ ಮೊತ್ತ ಪಾವತಿಸುವುದು ಸಂಘಕ್ಕೆ ಹೊರೆಯಾಗಲಿದೆ' ಎಂದು ಅಳಲು ತೋಡಿಕೊಂಡರು.

ADVERTISEMENT

'ಗುತ್ತಿಗೆ ಅವಧಿ ನವೀಕರಣಕ್ಕಾಗಿ ಹಲವು ಮನವಿ ಸಲ್ಲಿಸಿದರೂ ಉತ್ತರ ಬರಲಿಲ್ಲ. ಆದರೂ ಸಂಘ ಪ್ರತಿ ವರ್ಷವೂ ಆಸ್ತಿ ತೆರಿಗೆ ಪಾವತಿಸುತ್ತಿದ್ದು, ಬಾಡಿಗೆ ಬಾಕಿ ಉಳಿಸಿಕೊಂಡಿದೆ. ಇದರಿಂದ ಕಟ್ಟಡಕ್ಕೆ ಬೀಗ ಹಾಕಿ ವಶಕ್ಕೆ ಪಡೆದಿರುವ ಪಾಲಿಕೆ, ಸಂಘದ ಕಚೇರಿಯನ್ನು ಖಾಲಿ ಮಾಡುವಂತೆ ಸೂಚಿಸಿದೆ' ಎಂದು ಬೇಸರ ವ್ಯಕ್ತಪಡಿಸಿದರು.

'ಇದು, ಬಂಗಾಳಿ ಸಮುದಾಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗೆ ಇರುವ ಕಟ್ಟಡ. ಇಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆ ನಡೆಯುತ್ತಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.