ಬೆಂಗಳೂರು: ಲಗ್ಗೆರೆ ಸೇತುವೆಯಲ್ಲಿ ದ್ವಿಚಕ್ರ ವಾಹನ ಹಾಗೂ ಲಾರಿ ನಡುವೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಪತ್ನಿ ಮೃತಪಟ್ಟು, ಪತಿ ಗಾಯಗೊಂಡಿದ್ದಾರೆ.
ಮಲ್ಲೇಶ್ವರದ ನಿವಾಸಿ ಗೀತಾ (23) ಮೃತಪಟ್ಟವರು. ಪತಿ ಸುನಿಲ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂರು ತಿಂಗಳ ಹಿಂದೆ ಸುನಿಲ್ ಹಾಗೂ ಗೀತಾ ಮದುವೆ ಆಗಿದ್ದರು. ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಶುಕ್ರವಾರ ಮಧ್ಯಾಹ್ನ ಲಗ್ಗೆರೆಯಲ್ಲಿರುವ ಅಕ್ಕನ ಮನೆಗೆ ಸುನಿಲ್ ಅವರು ಪತ್ನಿಯನ್ನು ದ್ವಿಚಕ್ರ ವಾಹನದಲ್ಲಿ ಕರೆಕೊಂಡು ಹೋಗುತ್ತಿದ್ದರು. ಲಗ್ಗೆರೆಯ ಸೇತುವೆಯ ಬಳಿ ಲಾರಿಯೊಂದು ವೇಗವಾಗಿ ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಗೀತಾ ಅವರು ರಸ್ತೆಯ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಚನ್ನಪಟ್ಟಣದಲ್ಲಿ ನೆಲಸಿದ್ದ ಗೀತಾ ಅವರ ಅಜ್ಜಿ ರಾಕಮ್ಮ (65), ಮೊಮ್ಮಗಳ ಸಾವಿನ ಸುದ್ದಿ ತಿಳಿದು ಶನಿವಾರ ಮಧ್ಯಾಹ್ನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪತಿಯ ಗೋಳಾಟ: ಸ್ಥಳದಲ್ಲೇ ಮೃತಪಟ್ಟ ಪತ್ನಿಯ ಮೃತದೇಹವನ್ನು ಹಿಡಿದು ಪತಿ ಗೋಳಾಟ ನಡೆಸಿದ ದೃಶ್ಯವು ಮನಕಲಕುವಂತೆ ಇತ್ತು. ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.