ADVERTISEMENT

ಉಸಿರಾಡಲು ಉಳಿಸುವುದೆಂತು ಶುದ್ಧ ಗಾಳಿ

ಪ್ರವೀಣ ಕುಮಾರ್ ಪಿ.ವಿ.
Published 15 ನವೆಂಬರ್ 2020, 22:00 IST
Last Updated 15 ನವೆಂಬರ್ 2020, 22:00 IST
ನಾಯಂಡಹಳ್ಳಿಯಲ್ಲಿ ರಸ್ತೆ ಕಾಮಗಾರಿ ವೇಳೆ ಕಂಡುಬಂದ ದೂಳು ಪ್ರಜಾವಾಣಿ ಚಿತ್ರ. ಅನೂಪ್ ರಾಘ್. ಟಿ.
ನಾಯಂಡಹಳ್ಳಿಯಲ್ಲಿ ರಸ್ತೆ ಕಾಮಗಾರಿ ವೇಳೆ ಕಂಡುಬಂದ ದೂಳು ಪ್ರಜಾವಾಣಿ ಚಿತ್ರ. ಅನೂಪ್ ರಾಘ್. ಟಿ.   

ಬೆಂಗಳೂರು: ದೇಶದ ರಾಜಧಾನಿ ದೆಹಲಿ ಯಲ್ಲಿ ಹೊಂಚು ಹಾಕಿ ಕುಳಿತಿದ್ದ ಹೊಂಜು (ಹೊಗೆ ಜೊತೆ ಸೇರಿಕೊಂಡ ಮಂಜು) ಕಳೆದ ವರ್ಷ ಚಳಿಗಾಲ ಆವರಿಸುತ್ತಿದ್ದಂತೆಯೇ ಸೃಷ್ಟಿಸಿದ ಅವಾಂತರಗಳನ್ನು ನೋಡಿದ್ದೇವೆ. ರಾಜ್ಯದ ರಾಜಧಾನಿಯಲ್ಲಿ ವಾಯುಮಾಲಿನ್ಯ ಮಟ್ಟವು ಅಪಾಯಕಾರಿ ಹಂತ ತಲುಪಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸುವ ಹಂತವನ್ನು ಸದ್ಯಕ್ಕಂತೂ ತಲುಪಿಲ್ಲ. ಆದರೆ, ಉದ್ಯಾನನಗರಿಯೆಂದು ಕರೆಸಿಕೊಂಡಿದ್ದ ಬೆಂಗಳೂರಿನ ವಾಯು ಗುಣಮಟ್ಟ ಒಂದೇ ದಶಕದಲ್ಲಿ ಭಾರಿ ಕುಸಿತ ಕಂಡಿರುವುದಂತೂ ನಿಜ.

ವಾಯುವಿನ ಗುಣಮಟ್ಟವನ್ನು ಸೂಚ್ಯಂಕಗಳ ಆಧಾರದಲ್ಲಿ ಉತ್ತಮ, ಸಮಾಧಾನಕರ, ಸಾಧಾರಣ, ಕಳಪೆ, ತೀರಾ ಕಳಪೆ, ಗಂಭೀರ ಎಂಬ ಆರು ಸ್ತರಗಳಲ್ಲಿ ಗುರುತಿಸಲಾಗುತ್ತದೆ. ವಾತಾವರಣದಲ್ಲಿರುವ ಗಂಧಕದ ಡಯಾಕ್ಸೈಡ್‌ (SO2), ನೈಟ್ರೈಟ್‌ಗಳು (NO2), ಮಾಲಿನ್ಯಕಾರಣ ಕಣಗಳು (ಪಿ.ಎಂ), ಅಮೋನಿಯಾ (NH3), ಸೀಸದ ಪ್ರಮಾ
ಣದ ಆಧಾರದಲ್ಲಿ ವಾಯು ಗುಣಮಟ್ಟ ಸೂಚ್ಯಂಕವನ್ನು (ಎಕ್ಯುಐ) ನಿರ್ಧರಿಸಲಾಗುತ್ತದೆ. ಬೆಂಗಳೂರಿನ ಅನೇಕ ‍ಪ್ರದೇಶ
ಗಳು ‘ಉತ್ತಮ’ ಗುಣಮಟ್ಟದ ಹಿರಿಮೆ ಕಳಚಿಕೊಂಡು ಈಗಾಗಲೇ ‘ಸಮಾಧಾನಕರ‘ ಹಂತಕ್ಕೆ ಜಾರಿವೆ. ಕೆಲವು ಪ್ರದೇಶಗಳು
ಈಗಾಗಲೇ ‘ಸಾಧಾರಣ’ ಸ್ತರದ ಹೊಸ್ತಿಲು ದಾಟಿವೆ. ನಗರವು ಕಳಪೆ ಹಂತ ತಲುಪುವುದಕ್ಕೆ ಇರುವುದು ಇನ್ನೊಂದೇ ಹೆಜ್ಜೆ. ಒಂದು ದಶಕದಿಂದ ಈಚೆಗೆ ಆಗಿರುವ ಬೆಳವಣಿಗೆಗಳು ನಮ್ಮ ನಗರದಲ್ಲೂ ವಾಯು ಗುಣಮಟ್ಟ ತೀರಾ ಕಳಪೆ ಹಾಗೂ ಗಂಭೀರ ಹಂತ ತಲುಪುವ ದಿನಗಳು ದೂರವಿಲ್ಲ ಎಂಬ ಎಚ್ಚರಿಕೆ ಸಂದೇಶ ರವಾನಿಸಿದೆ.

ವಾಯು ಗುಣಮಟ್ಟ ಸಮಾಧಾನಕರ ಹಂತದಲ್ಲಿದ್ದರೆ ಸೂಕ್ಷ್ಮ ದೇಹಸ್ಥಿತಿಯವರು ಉಸಿರಾಟದ ಸಮಸ್ಯೆ ಎದುರಿಸಬೇಕಾಗುತ್ತದೆ. ಇದು ಸಾಧಾರಣ ಹಂತ ತಲುಪಿತೆಂದರೆ ಆಸ್ತಮಾದಂತಹ ಶ್ವಾಸಕೋಶದ ಸಮಸ್ಯೆ ಇರುವವರು, ಹೃದ್ರೋಗಿಗಳು ಹಾಗೂ ಹಿರಿಯ ನಾಗರಿಕರು ಉಸಿರಾಡಲು ತ್ರಾಸಪಡಬೇಕಾಗುತ್ತದೆ. ನಗರದ ಕೆಲವು ಪ್ರದೇಶಗಳು ಈಗಾಗಲೇ ಈ ಹಂತ ತಲುಪಿವೆ.

ADVERTISEMENT

ನಗರದ ವಾತಾವರಣದಲ್ಲಿ ಗಂಧಕದ ಡಯಾಕ್ಸೈಡ್‌, ಅಮೋನಿಯಾ, ನೈಟ್ರೈಟ್‌ಗಳ ಪ್ರಮಾಣ ರಾಷ್ಟ್ರೀಯ ಮಿತಿಗಳಿಗಿಂತ ಕಡಿಮೆಯೇ ಇದೆ. ನಗರದ ಜನತೆ ಅತಿಯಾಗಿ ಖಾಸಗಿ ವಾಹನಗಳನ್ನು ನೆಚ್ಚಿಕೊಂಡಿದ್ದಾರೆ. ವಾಹನಗಳ ಸಂಖ್ಯೆ 80 ಲಕ್ಷ ದಾಟಿದೆ. ಕೈಗಾರಿಕೆಗಳಿಂದ ಹೊರಸೂಸುವ ಹೊಗೆಯ ಜೊತೆ, ವಾಹನಗಳ ಹೊಗೆ, ಅತಿಯಾದ ನಗರೀಕರಣ ಮುಂತಾದ ಕಾರಣಗಳಿಂದಾಗಿ ನಗರದ ವಾತಾವರಣದಲ್ಲಿ ಮಾಲಿನ್ಯಕಾರಕ ಕಣಗಳ (ಪಿ.ಎಂ. 2.5, ಪಿಎಂ.10) ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ನಗರದ ಅನೇಕ ಕಡೆಗಳಲ್ಲಿ ಇದರ ಪ್ರಮಾಣ ರಾಷ್ಟ್ರೀಯ ಮಿತಿಗಿಂತ (60) ತೀರಾ ಜಾಸ್ತಿ ಇದೆ. ನಗರದ ವಾಯುವಿನ ಗುಣಮಟ್ಟ ಕುಸಿಯುತ್ತಿರುವುದರಲ್ಲಿ ಈ ಕಣಗಳ ಪಾತ್ರವೇ ಹೆಚ್ಚು. ಇದು ಆತಂಕ ಪಡುವ ಸ್ಥಿತಿಯನ್ನು ನಿರ್ಮಿಸಿದೆ.

ದೀಪಾವಳಿ ಸಂದರ್ಭದಲ್ಲಿ ವಾಹನದ ಹೊಗೆ ಜೊತೆ ಪಟಾಕಿಗಳ ಹೊಗೆಯೂ ವಾತಾವರಣ ಸೇರುತ್ತದೆ. ವಾಯು ಗುಣಮಟ್ಟವು ಶೇ 25ರಿಂದ ಶೇ 35ರಷ್ಟು ಕುಸಿತ ಕಾಣುತ್ತದೆ. ವಾಯು ಗುಣಮಟ್ಟದ ದಿಢೀರ್‌ ಕುಸಿತವು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಈ ಬಾರಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಮಾರಾಟ ನಿಷೇಧಿಸಿದ ಸರ್ಕಾರ, ವಾತಾವರಣಕ್ಕೆ ಅಷ್ಟೇನೂ ಹಾನಿ ಮಾಡದ ಹಸಿರು ಪಟಾಕಿಗಳನ್ನು ಮಾತ್ರ ಬಳಸಬಹುದು ಎಂದು ಫರ್ಮಾನು ಹೊರಡಿಸಿತ್ತು. ಇದು ಎಷ್ಟರ ಮಟ್ಟಿಗೆ ಜಾರಿಯಾಗಿದೆ, ಗಾಳಿಯ ಗುಣಮಟ್ಟ ಈ ಬಾರಿಯ ದೀಪಾವಳಿಯಲ್ಲಿ ಕುಸಿತ ಕಂಡಿಲ್ಲವೇ ಎಂಬುದನ್ನು ಕಾದು ನೋಡಬೇಕಷ್ಟೇ.

ವಾಯು ಗುಣಮಟ್ಟ ಕಾಪಾಡಲು ಸಜ್ಜಾಗಿದೆ ನೀಲನಕ್ಷೆ

ವಾಯುಮಾಲಿನ್ಯ ಹೆಚ್ಚಳದಿಂದ ತೀವ್ರವಾಗಿ ತತ್ತರಿಸಿದ್ದ ನವದೆಹಲಿಯಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶಿತ ಪರಿಸರ ಮಾಲಿನ್ಯ (ತಡೆಗಟ್ಟುವಿಕೆ ಹಾಗೂ ನಿಯಂತ್ರಣ) ಪ್ರಾಧಿಕಾರವು ಚಿಕ್ಕಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ 2019ರ ಅಕ್ಟೋಬರ್‌– ನವೆಂಬರ್‌ ತಿಂಗಳಲ್ಲಿಆರೋಗ್ಯ ತುರ್ತು ಸ್ಥಿತಿಯನ್ನು ಘೋಷಿಸಿತ್ತು. ಈ ಬೆಳವಣಿಗೆ ಬಳಿಕ ದೇಶದ ಮಹಾನಗರಗಳ ವಾಯು ಗುಣಮಟ್ಟ ಕಾಪಾಡುವುದರ ಬಗ್ಗೆ ಕೇಂದ್ರ ಸರ್ಕಾರವೂ ಗಂಭೀರವಾಗಿ ಪರಿಗಣಿಸಿದೆ. 15ನೇ ಹಣಕಾಸು ಆಯೋಗವು ಮಹಾನಗರಗಳ ವಾಯು ಗುಣಮಟ್ಟ ಕಾಪಾಡಲು ವಿಶೇಷ ಅನುದಾನ ಒದಗಿಸುತ್ತಿದೆ.

ವಾಯುಮಾಲಿನ್ಯದ ಮೂಲ ಪತ್ತೆ ಹಚ್ಚಿ ನಗರದ ಗಾಳಿಯ ಗುಣಮಟ್ಟ ಸುಧಾರಣೆ ಮಾಡಲು ಹಾಗೂ ವಾತಾವರಣದ ಗಾಳಿಯ ಗುಣಮಟ್ಟದ ಮೇಲೆ ನಿಗಾ ಇಡಲು ಬಿಬಿಎಂಪಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿ ₹ 279 ಕೋಟಿ ವೆಚ್ಚದ ಕಾರ್ಯಯೋಜನೆ ಸಿದ್ಧಪಡಿಸಿದ್ದು, ಇದರ ಮೊದಲ ಕಂತಿನ ರೂಪದಲ್ಲಿ ಕೇಂದ್ರ ಹಣಕಾಸು ಸಚಿವಾಲಯವು ₹ 139 ಕೋಟಿ ಅನುದಾನ ಮಂಜೂರು ಮಾಡಿದೆ.

ವಾಯುಮಾಲಿನ್ಯದ ಮೇಲೆ ನಿಗಾ ಇಡುವ ವ್ಯವಸ್ಥೆ ಒದಗಿಸಲು ₹ 44 ಕೋಟಿ ವೆಚ್ಚದಲ್ಲಿ ಹಾಗೂ ಕಸದ ಸಮರ್ಪಕ ವಿಲೇವಾರಿಗಾಗಿ ₹ 22.22 ಕೋಟಿ ವೆಚ್ಚದಲ್ಲಿ ಕೇಂದ್ರೀಕೃತ ನಿಯಂತ್ರಣ ಮತ್ತು ಕಮಾಂಡ್‌ ಕೇಂದ್ರಗಳನ್ನು (ಸಿಸಿಸಿ) ನಗರದಲ್ಲಿ ಪ್ರತ್ಯೇಕವಾಗಿ ಸ್ಥಾಪಿಸಲಾಗುತ್ತದೆ. ವಾಹನಗಳಿಂದ ಹೊಗೆ ಹೊರಸೂಸುವಿಕೆ ಪ್ರಮಾಣ ಪತ್ತೆಗೆ ಕೃತಕ ಬುದ್ಧಿಮತ್ತೆ ಬಳಸಲು ಶಬ್ದ ಮಾಪಕಗಳು, ಹೊಗೆಯ ಪ್ರಮಾಣ ಪತ್ತೆ ಹಚ್ಚುವ ಪರಿಕರಗಳು, ಪ್ರಮುಖ ರಸ್ತೆಗಳ ಕಸ ಗುಡಿಸುವ ಯಂತ್ರಗಳು, ರಸ್ತೆಗೆ ನೀರು ಚಿಮುಕಿಸುವ ಯಂತ್ರಗಳನ್ನು ಖರೀದಿಸಲಾಗುತ್ತದೆ.

ನಗರದಟ್ರಾಫಿಕ್‌ ಜಂಕ್ಷನ್‌ಗಳಲ್ಲಿ ಕಾರಂಜಿಗಳನ್ನು ನಿರ್ಮಿಸುವುದು, ಜಾಗ ಲಭ್ಯ ಇರುವ ಕಡೆಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವುದು, ರಸ್ತೆಗಳನ್ನು ಗುಂಡಿಮುಕ್ತಗೊಳಿಸುವ ಮೂಲಕ ದೂಳಿನ ಕಣ ವಾತಾವರಣ ಸೇರದಂತೆ ತಡೆಯುವುದಕ್ಕೂ ಕೇಂದ್ರದ ಅನುದಾನ ಬಳಕೆ ಆಗಲಿದೆ.

‘ವಾಯು ಗುಣಮಟ್ಟ ಕಾಪಾಡಲು ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ. ಇನ್ನು 10 ದಿನಗಳಲ್ಲಿ ಇದು ಸಿದ್ಧವಾಗಲಿದೆ. ಬಳಿಕ ಟೆಂಡರ್‌ ಕರೆದು ಒಂದೊಂದೇ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತೇವೆ’ ಎಂದು ಬಿಬಿಎಂಪಿಯ ವಿಶೇಷ ಆಯುಕ್ತ ಡಿ.ರಂದೀಪ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ನಾವು ಅನುಷ್ಠಾನಗೊಳಿಸುವ ಕಾರ್ಯಕ್ರಮಗಳಿಂದಾಗಿ ವಾಯುವಿನ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಆಗಿರುವುದನ್ನು ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಿಕೊಡಬೇಕು. ಆಗ ಮಾತ್ರ ಎರಡನೇ ಕಂತಿನ ಹಣ ಬಿಡುಗಡೆಯಾಗುತ್ತದೆ. ಹಾಗಾಗಿ ನಾವು ಫಲಿತಾಂಶ ತಂದುಕೊಡಬಲ್ಲ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವುದಕ್ಕೆ ಆದ್ಯತೆ ನೀಡಿದ್ದೇವೆ’ ಎಂದರು.

ಗಾಳಿಯ ಗುಣಮಟ್ಟದ ಸೂಚ್ಯಂಕ (ಎಕ್ಯುಐ)

00–50; ಉತ್ತಮ

51–100; ಸಮಾಧಾನಕರ

101–200; ಸಾಧಾರಣ

201–300; ಕಳಪೆ

301–400; ತೀರಾ ಕಳಪೆ

401 ಮೇಲ್ಪಟ್ಟು; ಗಂಭೀರ

ವಾಯುಮಾಲಿನ್ಯ ಹೆಚ್ಚು ಇದ್ದ ಪ್ರದೇಶಗಳು (2019ರಲ್ಲಿ)

ಸ್ಥಳ; ಎಕ್ಯುಐ

ಆ್ಯಮ್ಕೊ ಬ್ಯಾಟರಿ ಕಾರ್ಖಾನೆ; 103

ಪೀಣ್ಯ ಕೈಗಾರಿಕಾ ಪ್ರದೇಶ; 104

ದೊಮ್ಮಲೂರು; 104

ಬಾಣಸವಾಡಿ; 107

ಕೆ.ಆರ್‌.ವೃತ್ತ; 107


ವಾಯು ಮಾಲಿನ್ಯ ಹೆಚ್ಚು ಇದ್ದ ಪ್ರದೇಶಗಳು (2018ರಲ್ಲಿ)

ಸ್ಥಳ; ಎಕ್ಯುಐ

ಐಟಿಪಿಎಲ್‌; 103

ಯಲಹಂಕ; 119

ಸಿಲ್ಕ್‌ಬೋರ್ಡ್‌; 113

ನಗರ ರೈಲು ನಿಲ್ದಾಣ; 101

ದೊಮ್ಮಲೂರು; 112

‘ಕಾರಣಗಳು ಗೊತ್ತು ಪರಿಹಾರವಷ್ಟೇ ಬಾಕಿ’

‘ನಗರದಲ್ಲಿ ಯಾವ ಕಾರಣಕ್ಕೆ ವಾಯು ಗುಣಮಟ್ಟ ಕುಸಿತ ಕಾಣುತ್ತಿದೆ ಎಂಬುದಕ್ಕೆ ಕಾರಣಗಳು ನಮಗೆ ತಿಳಿದೇ ಇವೆ. ಅವುಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಅನುದಾನದ ಅಗತ್ಯ ಇತ್ತು. ಈ ಕೊರತೆಯನ್ನು ಕೇಂದ್ರದ 15ನೇ ಹಣಕಾಸು ಆಯೋಗ ನೀಗಿಸಿದೆ. ನಗರದಲ್ಲಿ ವಾಯು ಗುಣಮಟ್ಟವನ್ನು ಮರಳಿ ಸ್ಥಾಪಿಸಲು ಶೀಘ್ರವೇ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಹನಗಳ ಹೊಗೆ, ಕಟ್ಟಡ ತ್ಯಾಜ್ಯದ ದೂಳುಗಳು ಮಾಲಿನ್ಯಕಾರಣ ಕಣಗಳ ಹೆಚ್ಚಳಕ್ಕೆ ಪ್ರಮುಖ ಕೊಡುಗೆ ನೀಡುತ್ತಿವೆ. ಈ ಲೋಪಗಳನ್ನು ಸರಿಪಡಿಸಲು ಯೋಜನೆ ಸಿದ್ಧಪಡಿಸಿದ್ದೇವೆ. ಬೇರೆ ಬೇರೆ ಇಲಾಖೆಗಳಿಗೆ ಬೇರೆ ಬೇರೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ವಾಯು ಗುಣಮಟ್ಟದ ವಿಚಾರದಲ್ಲಿ ಕೆಲವೇ ವರ್ಷಗಳಲ್ಲಿ ನಿಶ್ಚಿತ ಬದಲಾವಣೆ ಕಾಣಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಎಲ್ಲೆಲ್ಲಿ ವಾಯುಮಾಲಿನ್ಯ ಹೆಚ್ಚಿದೆ ಎಂಬುದನ್ನು ತಿಳಿದರೆ ನಿಯಂತ್ರಣ ಇನ್ನೂ ಸುಲಭವಾಗಲಿದೆ. ಹಾಗಾಗಿ ನಾವು ಗುಣಮಟ್ಟದ ಗಾಳಿಯನ್ನು ಖಾತರಿಪಡಿಸಿಕೊಳ್ಳುವ ಸಲುವಾಗಿ ದತ್ತಾಂಶ ಸಂಗ್ರಹ ವ್ಯವಸ್ಥೆ ಬಲಪಡಿಸುತ್ತೇವೆ. ಈ ಮಾಹಿತಿಯನ್ನು ಮುಕ್ತವಾಗಿ ಜನರಿಗೆ ಒದಗಿಸುತ್ತೇವೆ. ಶುದ್ಧ ಗಾಳಿಯನ್ನು ಮರಳಿ ಪಡೆಯಲು ಜನರ ಸಹಕಾರವೂ ಮುಖ್ಯ’ ಎಂದು ಅವರು ತಿಳಿಸಿದರು.

*********

‘ಕೊರೊನಾ ಕಾಲದಲ್ಲಿ ಮೂಡಿದ ಭರವಸೆ’

ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಜಾರಿಗೊಳಿಸಿದಾಗ ನಗರದ ವಾಯು ಗುಣಮಟ್ಟದಲ್ಲಿ ಮಹತ್ತರ ಸುಧಾರಣೆಗಳು ಕಂಡು ಬಂದಿವೆ. ಲಾಕ್‌ಡೌನ್‌ಗೂ ಮುಂಚೆ ಹಾಗೂ ಲಾಕ್‌ಡೌನ್‌ ಬಳಿಕ ವಾಯು ಗುಣಮಟ್ಟದಲ್ಲಿ ಅಜಗಜಾಂತರವಿತ್ತು. ವಾಯು ಮಾಲಿನ್ಯ ಪ್ರಮಾಣ ಶೇ 34ರಷ್ಟು ಕಡಿಮೆಯಾಗಿತ್ತು. ಲಾಕ್‌ಡೌನ್‌ ಸಡಿಲಗೊಳಿಸಿದ ಬಳಿಕ ಮತ್ತೆ ವಾಯು ಗುಣಮಟ್ಟ ಕ್ರಮೇಣ ಕುಸಿತ ಕಂಡಿತ್ತು. ಕೆಲವೊಂದು ನಿಯಂತ್ರಣ ಕ್ರಮಗಳ ಜಾರಿಯಿಂದ ವಾಯು ಗುಣಮಟ್ಟ ಮರುಸ್ಥಾಪನೆ ಸಾಧ್ಯ ಎಂಬ ಭರವಸೆಯುಈ ಬೆಳವಣಿಗೆಯಿಂದಾಗಿ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.