ಪ್ರಾತಿನಿಧಿಕ ಚಿತ್ರ
ಬೆಂಗಳೂರು: ನಿರ್ಜನ ರಸ್ತೆಯೊಂದರಲ್ಲಿ ದ್ವಿಚಕ್ರ ವಾಹನ ಸವಾರನನ್ನು ಅಡ್ಡಗಟ್ಟಿ ಸುಲಿಗೆಗೆ ಯತ್ನಿಸಿರುವ ಘಟನೆ ಶಾಂತಿನಗರ ಸಮೀಪದ ಚರ್ಚ್ ರಸ್ತೆಯಲ್ಲಿ ನಡೆದಿದೆ.
ನವೆಂಬರ್ 15ರ ಬೆಳಗಿನ ಜಾವ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಸವಾರನನ್ನು ಮತ್ತೊಂದು ಬೈಕ್‌ನಲ್ಲಿ ಬಂದ ಮೂವರು ಅಡ್ಡಗಟ್ಟಿದ್ದಾರೆ. ಈ ಪೈಕಿ ಇಬ್ಬರು ಇಳಿದು, ಸವಾರನ ಬಳಿಯಿದ್ದ ಹಣ, ಮೊಬೈಲ್ ಫೋನ್ ದೋಚಲು ಯತ್ನಿಸಿದ್ದಾರೆ. ಆದರೆ, ಸವಾರ ಪ್ರತಿರೋಧವೊಡ್ಡಿದ್ದಾರೆ. ಆಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಶೋಕನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಮಾರಕಾಸ್ತ್ರ ಪ್ರದರ್ಶಿಸಿ ಸುಲಿಗೆ ಯತ್ನ: ಸಾರ್ವಜನಿಕರನ್ನು ಅಡ್ಡಗಟ್ಟಿ ಸುಲಿಗೆ ಮಾಡಲು ಯತ್ನಿಸಿರುವ ಘಟನೆ ಯಶವಂತಪುರ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಕಿಡಿಗೇಡಿಗಳು ನಸುಕಿನ ಜಾವ ಫುಟ್‌ಪಾತ್ ಮೇಲೆ ಹೋಗುತ್ತಿದ್ದ ವ್ಯಕ್ತಿಗೆ ಮಚ್ಚು ತೋರಿಸಿ, ಹಣ ಕೇಳಿದ್ದಾರೆ. ಕೊಡದಿದ್ದರೆ ಮಚ್ಚಿನಿಂದ ಹಲ್ಲೆ ಮಾಡುವುದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಈ ವೇಳೆ ಪಕ್ಕದಲ್ಲೇ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಣ ಮಾಡುತ್ತಿರುವುದನ್ನು ಗಮನಿಸಿ, ಮಚ್ಚಿನಿಂದ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಕೂಡಲೇ 'ಪೊಲೀಸ್ ಪೊಲೀಸ್' ಎಂದು ಕೂಗಿಕೊಂಡಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ಹರಿದಾಡಿದ್ದು, ಪರಿಶೀಲನೆ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.