ಬೆಂಗಳೂರು: ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಶೇಷ ಪೌಷ್ಟಿಕ ಆಹಾರ ವಿತರಿಸುವ ಸಂಬಂಧ ಆರೋಗ್ಯ ಇಲಾಖೆಯು ಇಸ್ಕಾನ್ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಕೆ.ಸಿ. ಜನರಲ್ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ ಹಾಗೂ ಸರ್.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಪೌಷ್ಟಿಕ ಆಹಾರ ವಿತರಣೆಗೆ ಮಂಗಳವಾರ ಚಾಲನೆ ನೀಡಲಾಯಿತು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸರ್.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಹಾರ ವಿತರಿಸುವ ಮೂಲಕ, ‘ಸರ್ಕಾರಿ ಆಸ್ಪತ್ರೆಗಳಲ್ಲಿ ಪೌಷ್ಟಿಕ ಆಹಾರ’ ಯೋಜನೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ‘ಒಂದೇ ರೀತಿಯ ಸಾಮಾನ್ಯ ಆಹಾರದ ಬದಲು, ರೋಗಿಗಳಿಗೆ ಅಗತ್ಯ ಪೌಷ್ಟಿಕಾಂಶ ಒದಗಿಸುವ ಆಹಾರವನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ರೋಗಿಗಳ ಚೇತರಿಕೆಗೆ ಚಿಕಿತ್ಸೆಯ ಜತೆಗೆ ಪೌಷ್ಟಿಕ ಆಹಾರ ಸೇವನೆ ಕೂಡ ಮಹತ್ವದ ಪಾತ್ರ ವಹಿಸಲಿದೆ. ಈ ಯೋಜನೆಯ ಮೂಲಕ ರೋಗಿಗಳಿಗೆ ನಿರ್ದಿಷ್ಟ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವ ಆಹಾರ ಒದಗಿಸಲಾಗುವುದು’ ಎಂದು ಹೇಳಿದರು.
‘ರೋಗಿಗಳ ಆರೋಗ್ಯ ಸ್ಥಿತಿ ಮತ್ತು ವಯಸ್ಸಿಗೆ ಅನುಗುಣವಾಗಿ ಪೌಷ್ಟಿಕಾಂಶದ ಅಗತ್ಯಗಳು ಭಿನ್ನವಾಗಿರುವುದರಿಂದ, ಎಲ್ಲರಿಗೂ ಒಂದೇ ರೀತಿಯ ಆಹಾರ ಸೂಕ್ತವಲ್ಲ. ಆಹಾರ ಪದ್ಧತಿಯನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗಿದ್ದು, ರೋಗಿಗಳ ವೈದ್ಯಕೀಯ ಅಗತ್ಯಗಳ ಆಧಾರದ ಮೇಲೆ ಆಹಾರವನ್ನು ವಿಂಗಡಿಸಲಾಗಿದೆ’ ಎಂದರು.
ಜಿಲ್ಲಾಸ್ಪತ್ರೆಗಳಿಗೆ ವಿಸ್ತರಣೆ: ‘ಮೊದಲ ಹಂತದದಲ್ಲಿ ಕೆ.ಸಿ. ಜನರಲ್ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ ಹಾಗೂ ಸರ್.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ವಿಶೇಷ ಪೌಷ್ಟಿಕ ಆಹಾರವನ್ನು ಪ್ರತಿನಿತ್ಯ ಒದಗಿಸಲಾಗುವುದು. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಸರ್ಕಾರಿ ಜಿಲ್ಲಾಸ್ಪತ್ರೆಗಳಿಗೆ ಪೌಷ್ಟಿಕ ಆಹಾರ ವಿತರಿಸುವ ಯೋಜನೆಯನ್ನು ಜಾರಿಗೆ ತರಲಾಗುವುದು’ ಎಂದು ದಿನೇಶ್ ಗುಂಡೂರಾವ್ ಹೇಳಿದರು.
‘ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳು ರೋಗನಿರೋಧಕ ಶಕ್ತಿ ಹಾಗೂ ಸೂಕ್ತ ಬೆಳವಣಿಗೆಗೆ ವಿಶೇಷ ಪೌಷ್ಟಿಕಾಂಶಗಳನ್ನು ಪಡೆಯುವುದು ಬಹಳ ಮುಖ್ಯ. ಈ ಯೋಜನೆಯು ಇಂತಹವರ ಅಗತ್ಯಗಳಿಗೆ ಆದ್ಯತೆ ನೀಡಿದೆ’ ಎಂದರು.
ಆರೋಗ್ಯ ಇಲಾಖೆ ಆಯುಕ್ತ ಶಿವಕುಮಾರ್ ಕೆ.ಬಿ. ಹಾಗೂ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
‘ಐದು ವಿಭಾಗಗಳಾಗಿ ವಿಂಗಡಣೆ’
‘ಸಾಮಾನ್ಯ ಆಹಾರ ಕ್ರಮದ ಜತೆಗೆ ಚಿಕಿತ್ಸಾ ಆಹಾರ ಕ್ರಮವನ್ನು ಯೋಜನೆಯಡಿ ರೂಪಿಸಲಾಗಿದೆ. ಗರ್ಭಿಣಿಯರ ಹಾಗೂ ಬಾಣಂತಿಯರ ಆಹಾರ ಕ್ರಮ ಮಕ್ಕಳ ಆಹಾರ ಕ್ರಮ ಸಾಮಾನ್ಯ ಆಹಾರ ಕ್ರಮ ಮಧುಮೇಹಿಗಳ ಆಹಾರ ಕ್ರಮ ಚಿಕಿತ್ಸಾ ಆಹಾರ ಕ್ರಮವೆಂದು ಆಹಾರವನ್ನು ಐದು ಪ್ರಮುಖ ವಿಭಾಗಗಳಾಗಿ ವಿಂಗಡಿಸಿ ಯೋಜನೆಯಡಿ ಪೌಷ್ಟಿಕ ಆಹಾರ ನೀಡಲಾಗುತ್ತದೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ‘ಗರ್ಭಿಣಿಯರಿಗೆ ಗರ್ಭಾವಸ್ಥೆಯ ಆರೋಗ್ಯಕ್ಕೆ ಅಗತ್ಯವಾದ ಕಬ್ಬಿಣದ ಅಂಶ ಮತ್ತು ಫೋಲಿಕ್ ಆಮ್ಲ ಹೆಚ್ಚಿರುವ ಆಹಾರವನ್ನು ನೀಡಲಾಗುತ್ತದೆ. ಬಾಣಂತಿಯರಿಗೆ ಹಾಲು ಉತ್ಪಾದನೆ ಮತ್ತು ಆರೋಗ್ಯಕ್ಕೆ ಸಹಕಾರಿಯಾಗುವ ಆಹಾರವನ್ನು ಒದಗಿಸಲಾಗುತ್ತದೆ. ಇದೇ ರೀತಿ ಅಗತ್ಯತತೆಗೆ ಅನುಗುಣವಾಗಿ ಆಹಾರ ನೀಡಲಾಗುತ್ತದೆ. ಸಮರ್ಪಕ ಪೌಷ್ಟಿಕ ಆಹಾರವು ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ’ ಎಂದು ಹೇಳಿದರು.
‘ರೋಗಿಗಳಿಗೆ ಉಪಾಹಾರ ಊಟ’
‘ಇಸ್ಕಾನ್ ಜತೆಗಿನ ಒಪ್ಪಂದದ ಪ್ರಕಾರ ಪ್ರತಿ ಆಸ್ಪತ್ರೆಗೆ ಸುಮಾರು 250 ರೋಗಿಗಳಿಗೆ ಪ್ರತಿ ದಿನ ಆಹಾರ ಸರಬರಾಜು ಮಾಡಲಾಗುತ್ತದೆ. ಇದಕ್ಕಾಗಿ 9 ತಿಂಗಳ ಅವಧಿಗೆ ₹ 1.37 ಕೋಟಿಯನ್ನು ಆರೋಗ್ಯ ಇಲಾಖೆಯಿಂದ ಭರಿಸಲಾಗುತ್ತದೆ. ಯೋಜನೆಯಡಿ ರೋಗಿಗಳಿಗೆ ಪ್ರತಿದಿನ ಬೆಳಿಗ್ಗೆ ಉಪಾಹಾರ ಸಂಜೆ ಲಘು ಉಪಾಹಾರ ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ವಿತರಿಸಲಾಗುತ್ತದೆ’ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು. ಆಹಾರ ಮೆನು ರವೆ ಉಪ್ಪಿಟ್ಟು ಪೊಂಗಲ್ ಗೋಧಿ ಗಂಜಿ ರಾಗಿ ಮುದ್ದೆ ಚಪಾತಿ ಅನ್ನ–ಸಾಂಬಾರ್ ಪಲ್ಯ ಸೋಯಾ ಹಾಲು ಹಣ್ಣುಗಳು ಮೊಸರು ಬಿಸ್ಕತ್ತು ಮತ್ತು ಚಿಕ್ಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.