ADVERTISEMENT

ಕರಗ ಶಕ್ತ್ಯೋತ್ಸವ: ದೀಪಾಲಂಕಾರದ ಮೆರುಗು‌

ದೇವಸ್ಥಾನದ ಸುತ್ತಮುತ್ತ 32 ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2023, 21:23 IST
Last Updated 4 ಏಪ್ರಿಲ್ 2023, 21:23 IST
ಕರಗ ಮಹೋತ್ಸವದ ಪ್ರಯುಕ್ತ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾದ ದೀಪೋತ್ಸವದಲ್ಲಿ ಮಹಿಳೆಯರು ಆರತಿ ಹೊತ್ತು ಸಾಗಿದರು – ಪ್ರಜಾವಾಣಿ ಚಿತ್ರ/ ಬಿ.ಕೆ. ಜನಾರ್ದನ್
ಕರಗ ಮಹೋತ್ಸವದ ಪ್ರಯುಕ್ತ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾದ ದೀಪೋತ್ಸವದಲ್ಲಿ ಮಹಿಳೆಯರು ಆರತಿ ಹೊತ್ತು ಸಾಗಿದರು – ಪ್ರಜಾವಾಣಿ ಚಿತ್ರ/ ಬಿ.ಕೆ. ಜನಾರ್ದನ್   

ಬೆಂಗಳೂರು: ಧರ್ಮರಾಯಸ್ವಾಮಿ ದೇವಸ್ಥಾನವು ಅದ್ದೂರಿಯಾಗಿ ಕರಗ ಶಕ್ತ್ಯೋತ್ಸವ ಆಚರಿಸಲು ದೀಪಾಲಂಕಾರಗಳೊಂದಿಗೆ ಸಿದ್ಧತೆ ಮಾಡಿಕೊಂಡಿದೆ. ಭದ್ರತೆಯ ದೃಷ್ಟಿಯಿಂದ ದೇವಸ್ಥಾನದ ಸುತ್ತಮುತ್ತ 32 ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತಿದೆ.

ಇದೇ ಗುರುವಾರ ರಾತ್ರಿ 12.30ರಿಂದ ಕರಗ ಶಕ್ತ್ಯೋತ್ಸವ ಹಾಗೂ ಧರ್ಮರಾಯಸ್ವಾಮಿ ಮಹಾರಥೋತ್ಸವ ನಡೆಯಲಿದೆ. ಈ ಬಾರಿಯೂ ಕರಗವನ್ನು ತಿಗಳ ಸಮುದಾಯದ ಅರ್ಚಕ ವಿ. ಜ್ಞಾನೇಂದ್ರ ಹೊರಲಿದ್ದಾರೆ. 11 ದಿನಗಳು ನಡೆಯುವ ಕರಗ ಮಹೋತ್ಸವವು ಮಾರ್ಚ್ 29ರಿಂದ ಪ್ರಾರಂಭವಾಗಿದ್ದು, ಇದೇ 8ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ವೀರಕುಮಾರರು, ತಿಗಳ ಸಮುದಾಯದ ಕೆಲವು ಭಕ್ತರು ಕರಗ ನಡೆಯುವ ಎಲ್ಲಾ ದಿನಗಳು ಉಪವಾಸ ಕೈಗೊಂಡಿದ್ದಾರೆ. ಅವರಿಗೆ ಕರಗ ಆಯೋಜಕರು ಉಚಿತವಾಗಿ ಹಣ್ಣುಗಳನ್ನು ವಿತರಿಸುತ್ತಿದ್ದಾರೆ.

ADVERTISEMENT

ಗುರುವಾರ ಮಧ್ಯರಾತ್ರಿ 12.30ರ ವೇಳೆಗೆ ಧರ್ಮರಾಯಸ್ವಾಮಿದೇವಾಲಯದಿಂದ ಹೊರಡುವ ಕರಗ ಶಕ್ತ್ಯೋತ್ಸವ, ಹಲಸೂರು ಪೇಟೆಯ ಆಂಜನೇಯಸ್ವಾಮಿ, ರಾಮ ದೇವಾಲಯದಲ್ಲಿ ಪೂಜೆ ಸ್ವೀಕರಿಸಲಿದೆ. ಬಳಿಕ ನಗರ್ತಪೇಟೆ, ಸಿದ್ದಣ್ಣ ಗಲ್ಲಿ, ಕಬ್ಬನ್‌ಪೇಟೆ, ಗಾಣಿಗರ ಪೇಟೆ, ದೊಡ್ಡಪೇಟೆಯಿಂದ ಕೆ.ಆರ್. ಮಾರುಕಟ್ಟೆ ತಲುಪಲಿದೆ. ಈ ಮಾರ್ಗಗಳಲ್ಲಿನ ಎಲ್ಲಾ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿ, ನಂತರ ಮಸ್ತಾನ್ ಸಾಬ್‌ ದರ್ಗಾಕ್ಕೆ ಭೇಟಿ ನೀಡಿ, ಅಲ್ಲಿಂದ ಬಳೇಪೇಟೆ ಹಳೇಗರಡಿ, ಅಣ್ಣಮ್ಮನ ದೇವಾಲಯಕ್ಕೆ ತೆರಳಲಿದೆ. ಕಿಲಾರಿ ರಸ್ತೆ, ಯಲಹಂಕ ಗೇಟ್, ಅವೆನ್ಯೂ ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರ ಪೇಟೆಗಳಲ್ಲಿ ಭಕ್ತರಿಂದ ಪೂಜೆ ಸ್ವೀಕರಿಸಿ, ಹಾಲುಬೀದಿ, ಕಬ್ಬನ್‌ಪೇಟೆ, ಸುಣ್ಣಕಲ್ ಪೇಟೆ ಮಾರ್ಗವಾಗಿ ಕುಲಪುರೋಹಿತರ ಮನೆಗಳಲ್ಲಿ ಪೂಜೆ ಸ್ವೀಕರಿಸಿ, ನರಸಿಂಹ ಜೋಯಿಸ್‌ಗಲ್ಲಿ ಮಾರ್ಗವಾಗಿ ಸೂರ್ಯೋದಯದ ವೇಳೆಗೆ ದೇವಾಲಯವನ್ನು ತಲುಪಲಿದೆ.

‘ಕರಗ ಸಾಗುವ ವೇಳೆ ದಾರಿಯುದ್ದಕ್ಕೂ ಭಕ್ತರು ಬಿಡಿ ಮಲ್ಲಿಗೆ ಹೂ ಬಳಸಬೇಕು. ಗಂಧದ ಪುಡಿ, ಅರಿಶಿನ, ಕುಂಕುಮ, ಕಲ್ಯಾಣಸೇವೆ, ಬಾಳೆಹಣ್ಣು, ದವನ ಸೇರಿದಂತೆ ಯಾವುದೇ ಬಗೆಯ ಸಾಮಗ್ರಿಗಳನ್ನು ಕರಗದ ಮೇಲೆ ಎಸೆಯಬಾರದು. ಕರಗ ಶಕ್ತ್ಯೋತ್ಸವ ಸಾಗುವ ವೇಳೆ ದೂರದಿಂದಲೇ ನಮಿಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಕರಗ ಸಂಚರಿಸುವ ರಸ್ತೆಗಳನ್ನು ಸ್ವಚ್ಛವಾಗಿಡಬೇಕು. ಯಾವುದೇ ತೊಂದರೆಯಾಗದ ರೀತಿಯಲ್ಲಿ ವಿದ್ಯುತ್ ದೀಪ ಹಾಗೂ ತೋರಣಗಳನ್ನು ಕಟ್ಟಬೇಕು’ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಸತೀಶ್ ಮನವಿ ಮಾಡಿದ್ದಾರೆ.

ಗಂಗೆ ಪೂಜೆ: ಉತ್ಸವದ ಆರನೇ ದಿನವಾದ ಸೋಮವಾರ ಮೆಜೆಸ್ಟಿಕ್‌ನ ಅಣ್ಣಮ್ಮ ದೇವಿ ದೇವಸ್ಥಾನದಲ್ಲಿ ಗಂಗೆ ಪೂಜೆ ನಡೆಯಿತು. ಅರ್ಚಕ ವಿ. ಜ್ಞಾನೇಂದ್ರ ಹಾಗೂ ವೀರಕುಮಾರರು ಸಂಪ್ರದಾಯದಂತೆ ಅಣ್ಣಮ್ಮ ದೇವಿ ದೇವಾಲಯಕ್ಕೆ ತೆರಳಿ, ವಿಶೇಷ ಪೂಜೆ ನಡೆಸಿದರು. ಮಹಿಳೆಯರು ಬಣ್ಣ ಬಣ್ಣದ ಹೂಗಳಿಂದ ಅಲಂಕೃತವಾಗಿರುವ ಹರಿವಾಣದಲ್ಲಿ ತಂಬಿಟ್ಟನ್ನು ಇರಿಸಿ, ಅದರ ನಡುವೆ ದೀಪಗಳನ್ನು ಹಚ್ಚಿ, ದ್ರೌಪದಿ ದೇವಿ ಹಾಗೂ ಧರ್ಮರಾಯಸ್ವಾಮಿ ಸಹಿತ ಪರಿವಾರ ದೇವರಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು.

8ನೇ ದಿನವಾದ ಬುಧವಾರ ರಾತ್ರಿ 12 ಗಂಟೆಗೆ ಆದಿಶಕ್ತಿ ದ್ರೌಪದಿದೇವಿಯ ಮಹಿಮೆಯ ವರ್ಣನೆಯನ್ನುಳ್ಳ ‘ಭಾರತ ಕಥಾ ವಾಚನ’ ನಡೆಯುತ್ತದೆ. 10ನೇ ದಿನವಾದ ಶುಕ್ರವಾರ ರಾತ್ರಿ 2 ಗಂಟೆಗೆ ಪುರಾಣ ಪ್ರವಚನ ಹಾಗೂ 4 ಗಂಟೆಗೆ ಗಾವು ಸೇವೆ, 11ನೇ ದಿನವಾದ ಶನಿವಾರ ಸಂಜೆ 4 ಗಂಟೆಗೆ ವಸಂತೋತ್ಸವ ಹಾಗೂ ರಾತ್ರಿ 12 ಗಂಟೆಗೆ ಧ್ವಜಾರೋಹಣ ನಡೆಯಲಿದೆ.

---

150 ಜನರಿಂದ ಹೂವಿನ ಅಲಂಕಾರ

‘ಇಷ್ಟು ವರ್ಷ ದೇವಸ್ಥಾನದ ಸುತ್ತಮುತ್ತ ತಾತ್ಕಾಲಿಕವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗುತ್ತಿತ್ತು. ಈಗ ದೇವಸ್ಥಾನದ ಸುತ್ತಮುತ್ತಲಿನ 500 ಮೀ. ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗುತ್ತಿದ್ದು, ಇದು ಕರಗ ಉತ್ಸವದ ನಂತರವೂ ಇರಲಿದೆ. ಕರಗ ಉತ್ಸವದ ಪ್ರಯುಕ್ತ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿದೆ’ ಎಂದು ಧರ್ಮರಾಯಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ಸತೀಶ್ ತಿಳಿಸಿದರು.

‘ಅದ್ದೂರಿಯಾಗಿ ಹೂವಿನ ಅಲಂಕಾರ ಮಾಡಲಾಗುತ್ತಿದೆ. ಇದಕ್ಕಾಗಿ ತಮಿಳುನಾಡಿನಿಂದ 150 ಜನರು ಬಂದಿದ್ದಾರೆ. ಈ ಉತ್ಸವಕ್ಕೆ ಬಿಬಿಎಂಪಿ ₹75 ಲಕ್ಷ ನೀಡುವುದಾಗಿ ತಿಳಿಸಿದೆ. ಬಾಕಿ ಇದ್ದ ₹40 ಲಕ್ಷ ಬಿಡುಗಡೆಯಾಗಿದೆ. ಕರಗ ಉತ್ಸವ ಸಂಚರಿಸುವ ಪ್ರದೇಶದಲ್ಲಿ ಇ– ಶೌಚಾಲಯಕ್ಕೂ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.