ADVERTISEMENT

ನಮ್ಮ ಮೆಟ್ರೊ ನೀಲಿ ಮಾರ್ಗ: 2ಎ ಕಾಮಗಾರಿ ಅಂತಿಮ ಹಂತಕ್ಕೆ

ಬಾಲಕೃಷ್ಣ ಪಿ.ಎಚ್‌
Published 9 ಸೆಪ್ಟೆಂಬರ್ 2025, 0:00 IST
Last Updated 9 ಸೆಪ್ಟೆಂಬರ್ 2025, 0:00 IST
   

ಬೆಂಗಳೂರು: ಕೇಂದ್ರ ರೇಷ್ಮೆ ಮಂಡಳಿಯಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನೀಲಿ ಮಾರ್ಗದ ಮೊದಲ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ರೇಷ್ಮೆ ಮಂಡಳಿಯಿಂದ ಕೆ.ಆರ್‌. ಪುರದವರೆಗೆ 2026ರ ಸೆಪ್ಟೆಂಬರ್‌ ಒಳಗೆ ಸಂಚಾರ ಆರಂಭಿಸುವ ಗುರಿಯನ್ನು ಬಿಎಂಆರ್‌ಸಿಎಲ್‌ ಇಟ್ಟುಕೊಂಡಿದೆ.

ನಗರವನ್ನು ವಾಹನದಟ್ಟಣೆ ಸಮಸ್ಯೆಯು ಕಾಡುತ್ತಿದೆ. ದಟ್ಟಣೆ ಅವಧಿಯಲ್ಲಿ ತಾಸುಗಟ್ಟಲೆ ಸಮಯ ರಸ್ತೆಯಲ್ಲೇ ಕಳೆದು ಹೋಗುತ್ತದೆ. ಈ ರೀತಿ ವಿಪರೀತ ದಟ್ಟಣೆ ಇರುವ ರಸ್ತೆಗಳಲ್ಲಿ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ರಸ್ತೆಯು ಪ್ರಮುಖವಾಗಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಅತಿ ಹೆಚ್ಚು ಪ್ರಯಾಣಿಕರ ಒತ್ತಡ ಇರುವ ದೇಶದ ವಿಮಾನ ನಿಲ್ದಾಣಗಳಲ್ಲಿ ಮೂರನೇ ಸ್ಥಾನದಲ್ಲಿದೆ. 2021–22ರಲ್ಲಿ ಈ ವಿಮಾನ ನಿಲ್ದಾಣದ ಮೂಲಕ 1.63 ಕೋಟಿ ಜನರು ಪ್ರಯಾಣಿಸಿದ್ದರು. ಮೂರೇ ವರ್ಷದಲ್ಲಿ ವಿಮಾನದಲ್ಲಿ ಸಂಚರಿಸುವವರ ಸಂಖ್ಯೆ ಎರಡೂವರೆ ಪಟ್ಟು ಹೆಚ್ಚಾಗಿದೆ. 2024-25ರಲ್ಲಿ 4.2 ಕೋಟಿ ಜನರು ಪ್ರಯಾಣಿಸಿದ್ದಾರೆ. ನಮ್ಮ ಮೆಟ್ರೊ ನೀಲಿ ಮಾರ್ಗ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡರೆ ಶೇ 25ರಷ್ಟು ಜನರು ಮೆಟ್ರೊ ಮೂಲಕವೇ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಸಾಧ್ಯತೆ ಇದೆ.

ADVERTISEMENT

ಕೇಂದ್ರ ರೇಷ್ಮೆ ಸಂಸ್ಥೆಯಿಂದ (ಸೆಂಟ್ರಲ್‌ ಸಿಲ್ಕ್‌ ಬೋರ್ಡ್) ಕೆ.ಆರ್‌.ಪುರದವರೆಗೆ (ಹಂತ 2ಎ) ಮತ್ತು ಕೆ.ಆರ್‌. ಪುರದಿಂದ ವಿಮಾನ ನಿಲ್ದಾಣದವರೆಗೆ (ಹಂತ 2ಬಿ) ಎಂದು ನೀಲಿ ಮಾರ್ಗವನ್ನು ಎರಡು ಹಂತವಾಗಿ ವಿಂಗಡಿಸಲಾಗಿತ್ತು. 2021ರ ಆಗಸ್ಟ್‌ನಲ್ಲಿ ಹಂತ 2ಎ ಕಾಮಗಾರಿ ಆರಂಭವಾಗಿತ್ತು. 2022ರ ಫೆಬ್ರುವರಿಯಲ್ಲಿ ಹಂತ 2ಬಿ ಕಾಮಗಾರಿ ಶುರುವಾಗಿತ್ತು.

ಹಂತ 2ಎ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಆದರೆ, ಹಂತ 2ಬಿಯ ಕಾಮಗಾರಿ ಕೆ.ಆರ್‌. ಪುರದಿಂದ ಹೆಬ್ಬಾಳದವರೆಗೆ ಬಹಳ ನಿಧಾನಗತಿಯಲ್ಲಿ ಸಾಗುತ್ತಿದೆ. ಹೆಬ್ಬಾಳದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಮತ್ತೆ ವೇಗವಾಗಿ ನಡೆಯುತ್ತಿದೆ. 

ಕೆ.ಆರ್‌. ಪುರದಿಂದ ಹೆಬ್ಬಾಳದವರೆಗೆ ಹೊರ ವರ್ತುಲ ರಸ್ತೆಯಲ್ಲಿ ಹೆಚ್ಚು ಮೇಲ್ಸೇತುವೆ ರಸ್ತೆಗಳಿರುವುದರಿಂದ ಕಾಮಗಾರಿ ನಿಧಾನವಾಗಿದೆ. ಮೇಲ್ಸೇತುವೆಗಳನ್ನು ತಪ್ಪಿಸಿಕೊಂಡು ಗರ್ಡರ್‌ ಅಳವಡಿಸಬೇಕು. ಕ್ರೇನ್‌ ಹೋಗದ ಜಾಗಗಳಲ್ಲಿ ಬೇರೆ ವ್ಯವಸ್ಥೆಗಳನ್ನು ಮಾಡಬೇಕು. ಪ್ರಮುಖ ಜಂಕ್ಷನ್‌ಗಳಲ್ಲಿ ಕಾಂಪೋಸ್ಡ್‌ ಗರ್ಡರ್‌, ವೆಬ್‌ ಗರ್ಡರ್‌ಗಳನ್ನು ಹಾಕಲಾಗುತ್ತಿದೆ. ಈ ಎಲ್ಲ ಕಾರಣದಿಂದ ನಿಧಾನವಾಗಿದೆ ಎಂದು ನಮ್ಮ ಮೆಟ್ರೊ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್‌. ಯಶವಂತ್‌ ಚವಾಣ್‌ ಮಾಹಿತಿ ನೀಡಿದರು.

‘ರೇಷ್ಮೆ ಮಂಡಳಿಯಿಂದ ಕೆ.ಆರ್. ಪುರದವರೆಗೆ ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ಸಂಚಾರ ಆರಂಭಿಸಲಾಗುವುದು. ವಿಮಾನ ನಿಲ್ದಾಣದಿಂದ ಹೆಬ್ಬಾಳದವರೆಗೆ 2027ರ ಜೂನ್‌ನಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಹೆಬ್ಬಾಳದಿಂದ ಕೆ.ಆರ್‌. ಪುರ ನಡುವೆ ಅದೇ ವರ್ಷ ಡಿಸೆಂಬರ್‌ ಒಳಗೆ ಮೆಟ್ರೊ ಸಂಚಾರ ಆರಂಭಿಸಬೇಕು ಎಂಬ ಗುರಿ ಇಟ್ಟುಕೊಂಡಿದ್ದೇವೆ’ ಎಂದು ಅವರು ವಿವರಿಸಿದರು.

ವೇಗದ ಮೆಟ್ರೊ ಸಂಚಾರ

ನೀಲಿ ಮಾರ್ಗದಲ್ಲಿ ಸಂಚರಿಸಲಿರುವ ಮೆಟ್ರೊ ರೈಲುಗಳ ಸರಾಸರಿ ವಾಣಿಜ್ಯ ವೇಗ ಗಂಟೆಗೆ 50 ಕಿ.ಮೀ. ಇರಲಿದೆ.  ಪ್ರಸ್ತುತ ನಮ್ಮ ಮೆಟ್ರೊದ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ರೈಲುಗಳು ಗಂಟೆಗೆ 34 ಕಿ.ಮೀ. ವೇಗದಲ್ಲಿ ಚಲಿಸುತ್ತಿವೆ. ಇತ್ತೀಚೆಗೆ ಆರಂಭವಾಗಿರುವ ಹಳದಿ ಮಾರ್ಗ ನಿರ್ಮಾಣ ಹಂತದಲ್ಲಿ ಇರುವ ಗುಲಾಬಿ ಮಾರ್ಗದ ಸರಾಸರಿ ವೇಗ ಇಷ್ಟೇ ಇರಲಿದೆ.  ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಮೆಟ್ರೊ ರೈಲುಗಳ ‘ಸರಾಸರಿ ವಾಣಿಜ್ಯ ವೇಗ’(ಆವರೇಜ್‌ ಕರ್ಮಿಷಿಯಲ್ ಸ್ಪೀಡ್) ಹೆಚ್ಚು ಮಾಡಲಾಗಿದೆ. ಹೆಬ್ಬಾಳದಿಂದ ವಿಮಾನ ನಿಲ್ದಾಣದವರೆಗೆ ಮೆಟ್ರೊ ನಿಲ್ದಾಣಗಳ ಸಂಖ್ಯೆ ಕೂಡ ಅದೇ ಕಾರಣಕ್ಕೆ ಕಡಿಮೆ ಇರುವಂತೆ ಯೋಜನೆ ರೂಪಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮೂಲಸೌಕರ್ಯಗಳು ಬಹಳ ಬೇಗ  ದೊರಕುವುದಿಲ್ಲ. ವಿಮಾನ ನಿಲ್ದಾಣಕ್ಕೆ ಬಹಳ ಬೇಗನೇ ಮೆಟ್ರೊ ಸಂಪರ್ಕ ಆಗಬೇಕಿತ್ತು. 2027ರ ಒಳಗೆ ಆಗಲಿದೆ ಎಂದು ಹೊಸ ವ್ಯವಸ್ಥಾಪಕ ನಿರ್ದೇಶಕರು ಭರವಸೆ ನೀಡಿದ್ದಾರೆ. ಅವರ ಭರವಸೆ ಮತ್ತೆ ಮುಂದಕ್ಕೆ ಹೋಗದೇ ನೀಲಿ ಮಾರ್ಗದಲ್ಲಿ ಮೆಟ್ರೊ ಸಂಚಾರ ಆರಂಭವಾಗಬೇಕು.
ಕೆ.ಎನ್‌. ಕೃಷ್ಣಪ್ರಸಾದ್‌, ನಿವೃತ್ತ ಸರ್ಕಾರಿ ಅಧಿಕಾರಿ
ಮೆಟ್ರೊ ಬೇಗ ಆದಷ್ಟೂ ಒಳ್ಳೆಯದು. ನಾಲ್ಕೈದು ವರ್ಷಗಳಿಂದ ಕೆಲಸ ಆಗುತ್ತಿದೆ. ಆದರೆ ಪೂರ್ಣಗೊಂಡಿಲ್ಲ. ಸಂಚಾರ ದಟ್ಟಣೆ ಇರುವುದರಿಂದ ಓಡಾಡಲು ಸಮಸ್ಯೆಯಾಗಿದೆ. ಇನ್ನೊಂದು ಕಡೆಯಿಂದ ಮೆಟ್ರೊ ಕಾಮಗಾರಿ ನಡೆಸುವಾಗ ಉಂಟಾಗುವ ಸದ್ದು ಸ್ಥಳೀಯ ನಿವಾಸಿಗಳ ನಿದ್ದೆಯನ್ನು ಕೆಡಿಸುತ್ತಿದೆ. ದೂಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ಮೆಟ್ರೊ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಂಚಾರ ಆರಂಭಿಸಿದರೆ ಸಾರ್ವಜನಿಕರಿಗೆ ಉಪಯೋಗವಾಗಲಿದೆ.
ಅನಿಲ್‌, ಹೋಟೆಲ್ ಉದ್ಯಮಿ ಬಾಬುಸಾ ಪಾಳ್ಯ
ಸಂಪರ್ಕ ವ್ಯವಸ್ಥೆ ಸರಿಯಾಗಿ ಇಲ್ಲದ ಪ್ರದೇಶದಲ್ಲಿ ನೀಲಿ ಮಾರ್ಗ ಬರುತ್ತಿದೆ. ಈಗ ವಾಹನ ದಟ್ಟಣೆಯಲ್ಲಿ ಕಾಲ ಕಳೆದು ಹೋಗುತ್ತಿದೆ. ಇಲ್ಲಿ ಮೆಟ್ರೊ ಸಂಚಾರ ಆಂಭಗೊಂಡರೆ ನಮ್ಮ ಸಮಯ ಉಳಿಯಲಿದೆ. ವಾಹನಗಳಿಂದ ಉಂಟಾಗುವ ಮಾಲಿನ್ಯ ಕಡಿಮೆಯಾಗಲಿದೆ. 
ಅನುಮೋಲ್‌, ಖಾಸಗಿ ಕಂಪನಿ ಉದ್ಯೋಗಿ ನಾಗವಾರ ಕ್ರಾಸ್‌
ದೇವನಹಳ್ಳಿ ವಿಮಾನ ನಿಲ್ದಾಣ ನಗರದಲ್ಲಿ ಕೆಂಪೇಗೌಡ ಪ್ರತಿಮೆಯ ಬಳಿ ನಿರ್ಮಾಣಗೊಳ್ಳುತ್ತಿರುವ ನೀಲಿ ಮಾರ್ಗದ ಮೆಟ್ರೊ ನಿಲ್ದಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.