ADVERTISEMENT

ಬೆಂಗಳೂರು | ನಗರ್ತಪೇಟೆಯಲ್ಲಿ ಬೆಂಕಿ ಅವಘಡ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ

ಪಕ್ಕದ ಕಟ್ಟಡಗಳಿಗೆ ಜಿಗಿದು ಪಾರಾದ 17 ಮಂದಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 10:31 IST
Last Updated 16 ಆಗಸ್ಟ್ 2025, 10:31 IST
   

ಬೆಂಗಳೂರು: ಅವರೆಲ್ಲರೂ ಮುಂಜಾನೆಯ ನಿದ್ರೆಯಲ್ಲಿ ಇದ್ದರು. ಒಬ್ಬರು ನೆಲ ಅಂತಸ್ತಿನಲ್ಲಿ ಮುಂಜಾನೆಯೇ ಪ್ಯಾಕಿಂಗ್‌ ಕೆಲಸದಲ್ಲಿ ಮಗ್ನರಾಗಿದ್ದರು. ನೆಲ ಅಂತಸ್ತಿನಲ್ಲಿ ಕಾಣಿಸಿಕೊಂಡ ಬೆಂಕಿ, ಕ್ಷಣಾರ್ಧದಲ್ಲಿ ವ್ಯಾಪಿಸಿ ಬೇರೆ ಬೇರೆ ಅಂತಸ್ತಿನಲ್ಲಿದ್ದವರು ದುರಂತವಾಗಿ ಸಾವು ಕಂಡರು..

ಶನಿವಾರ ನಸುಕಿನ ವೇಳೆ ನಗರ್ತಪೇಟೆಯಲ್ಲಿ ದೊಡ್ಡ ಅಗ್ನಿ ದುರಂತ ಸಂಭವಿಸಿದ್ದು, ಮೃತರ ಸಂಬಂಧಿಕರ ಆಕ್ರಂದನ ಅಲ್ಲಿ ಮಡುಗಟ್ಟಿತ್ತು.

ಆಡುಗೋಡಿಯ ಶ್ರೀರಾಮ ಕಾಲೊನಿಯಲ್ಲಿ ಶುಕ್ರವಾರವಷ್ಟೇ ಅಡುಗೆ ಅನಿಲ ಸೋರಿಕೆಯಿಂದ ಬಾಲಕ ಮೃತಪಟ್ಟು, 9 ಮಂದಿ ಮಂದಿ ಗಾಯಗೊಂಡಿದ್ದರು. ಮರುದಿನವೇ ಮತ್ತೊಂದು ದೊಡ್ಡ ದುರಂತಕ್ಕೆ ನಗರ ಸಾಕ್ಷಿ ಆಯಿತು.  ಬಾಲಕೃಷ್ಣ ಶೆಟ್ಟಿ ಹಾಗೂ ಸಂದೀಪ್‌ ಶೆಟ್ಟಿ ಅವರಿಗೆ ಸೇರಿದ ಕೃಷ್ಣ ಕಾಂಪ್ಲೆಕ್ಸ್‌ನಲ್ಲಿ ಅಗ್ನಿ ದುರಂತ ಸಂಭವಿಸಿದೆ.

ADVERTISEMENT

ನಾಲ್ಕು ಅಂತಸ್ತಿನ ಕಟ್ಟಡದ ನೆಲ ಅಂತಸ್ತಿನಲ್ಲಿ ಫ್ಲೋರ್ ಮ್ಯಾಟ್, ಬಟ್ಟೆ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ತುಂಬಿ ಇಡಲಾಗಿತ್ತು. ಆ ಮಳಿಗೆಯಲ್ಲಿ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಕಾಣಿಸಿಕೊಂಡಿತ್ತು. ನೆಲ ಅಂತಸ್ತಿನಲ್ಲಿ ಕೆಲಸ ಮಾಡುತ್ತಿದ್ದ ಮದನ್‌ ಕುಮಾರ್ ಅವರಿಗೆ ಹೊರಗೆ ಬರಲು ಸಾಧ್ಯವಾಗದೇ ಮೃತಪಟ್ಟರು. ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಎರಡನೇ ಮಹಡಿಯಲ್ಲಿ ಮಲಗಿದ್ದರು. ಸುರೇಶ್‌ಕುಮಾರ್ ಅವರು ಮೂರನೇ ಮಹಡಿಯಲ್ಲಿ ಇದ್ದರು. ಅವರಿಗೂ ಹೊರಗೆ ಬರಲು ಸಾಧ್ಯವಾಗದೆ ಮೃತಪಟ್ಟರು. ಎರಡನೇ ಮಹಡಿ ಹಾಗೂ ನಾಲ್ಕನೇ ಮಹಡಿಯಲ್ಲಿದ್ದ 17 ಮಂದಿ ಬೇರೊಂದು ಕಟ್ಟಡಕ್ಕೆ ಜಿಗಿದು ಪಾರಾಗಿದ್ದಾರೆ. 

ದಟ್ಟೈಸಿದ ಹೊಗೆ: ಮಾಹಿತಿ ತಿಳಿದ ತಕ್ಷಣವೇ ಶನಿವಾರ ನಸುಕಿನ ವೇಳೆ 6 ಅಗ್ನಿಶಾಮಕ ವಾಹನಗಳು, 50ಕ್ಕೂ ಅಧಿಕ ಸಿಬ್ಬಂದಿ, ಎಸ್‌ಡಿಆರ್‌ಎಫ್, ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದರು. ದಟ್ಟ ಹೊಗೆ ಹಾಗೂ ಪ್ರಖರವಾಗಿ ಬೆಂಕಿ ಉರಿಯುತ್ತಿದ್ದರಿಂದ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿತ್ತು. ಹರಸಾಹಸಪಟ್ಟು ಕಟ್ಟಡದ ಒಳಗೆ ಹೋಗಿ ಬೆಂಕಿಯನ್ನು ಹತೋಟಿಗೆ ತರಲಾಯಿತು. ಶನಿವಾರ ಮಧ್ಯಾಹ್ನ 3ರವರೆಗೂ ಕಾರ್ಯಾಚರಣೆ ನಡೆಸಲಾಯಿತು.

ಸತತ ಕಾರ್ಯಾಚರಣೆ: ನಿರಂತರವಾಗಿ ಕಾರ್ಯಾಚರಣೆಯಿಂದ ನೆಲಅಂತಸ್ತಿನಲ್ಲಿ ಒಂದು ಮೃತದೇಹ ಪತ್ತೆಯಾಯಿತು. ಮೊದಲ ಹಾಗೂ ಎರಡನೇ ಮಹಡಿಯಲ್ಲಿ ಸಂಪೂರ್ಣವಾಗಿ ಬೆಂಕಿ ಆವರಿಸಿತ್ತು. ಸತತ ಕಾರ್ಯಾಚರಣೆ ಬಳಿಕ ಎರಡನೇ ಮಹಡಿಯಲ್ಲಿ ಮತ್ತೊಂದು ಮೃತದೇಹ ಪತ್ತೆ ಆಯಿತು. ಭಾರಿ ಹೊಗೆಯ ನಡುವೆಯೂ ಕಾರ್ಯಾಚರಣೆ ಮುಂದುವರೆಸಿ ಮೂರನೇ ಮಹಡಿಯಲ್ಲಿದ್ದ ಮೂರು ಮೃತದೇಹಗಳನ್ನು ಹೊರಗೆ ತೆಗೆಯಲಾಯಿತು. ಘಟನೆಗೆ ನಿಖರ ಕಾರಣ ಏನು ಎಂದು ತಿಳಿಯಬೇಕಿದೆ. ಕಟ್ಟಡದಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿತ್ತೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ನಿರ್ದೇಶಕ ಶಿವಶಂಕರ್ ತಿಳಿಸಿದ್ದಾರೆ.

ವೈಯಕ್ತಿವಾಗಿ ಪರಿಹಾರ ನೀಡಿದ ಸಚಿವ ಜಮೀರ್  

ಚಿನ್ನಯ್ಯನಪಾಳ್ಯ ಹಾಗೂ ನಗರ್ತಪೇಟೆಯಲ್ಲಿ ಸಂಭವಿಸಿದ ಅವಘಡ ಸ್ಥಳಕ್ಕೆ ಭೇಟಿ ನೀಡಿ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿ ವೈಯಕ್ತಿಕ ಪರಿಹಾರ ನೀಡಿದರು. ಚಿನ್ನಯ್ಯನಪಾಳ್ಯದಲ್ಲಿ ಮೃತಪಟ್ಟ ಮುಬಾರಕ್‌ ಕುಟುಂಬಕ್ಕೆ ₹5 ಲಕ್ಷ ಪರಿಹಾರ ವಿತರಣೆ ಮಾಡಿದರು. ಗಾಯಾಳುಗಳಿಗೆ ಪರಿಹಾರ ವಿತರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.