ADVERTISEMENT

ಮಳೆಹಾನಿ: ಸಂತ್ರಸ್ತ ಅಹವಾಲು ಆಲಿಸಿದ ಸಿ.ಎಂ

​ಪ್ರಜಾವಾಣಿ ವಾರ್ತೆ
Published 20 ಮೇ 2022, 7:20 IST
Last Updated 20 ಮೇ 2022, 7:20 IST
ಜೆ.ಸಿ.ನಗರದಲ್ಲಿ ಕೈಮುಗಿದು ಸಮಸ್ಯೆ ಹೇಳಿಕೊಂಡ ನಿವಾಸಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಂತ್ವನ ಹೇಳಿದರು. ಸಂಸದ ಪಿ.ಸಿ.ಮೋಹನ್, ಸಚಿವರಾದ ವಿ.ಸೋಮಣ್ಣ, ಕೆ.ಗೋಪಾಲಯ್ಯ, ಆರ್.ಅಶೋಕ ಇದ್ದರು–ಪ್ರಜಾವಾಣಿ ಚಿತ್ರಗಳು
ಜೆ.ಸಿ.ನಗರದಲ್ಲಿ ಕೈಮುಗಿದು ಸಮಸ್ಯೆ ಹೇಳಿಕೊಂಡ ನಿವಾಸಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಂತ್ವನ ಹೇಳಿದರು. ಸಂಸದ ಪಿ.ಸಿ.ಮೋಹನ್, ಸಚಿವರಾದ ವಿ.ಸೋಮಣ್ಣ, ಕೆ.ಗೋಪಾಲಯ್ಯ, ಆರ್.ಅಶೋಕ ಇದ್ದರು–ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ನಗರದ ಮಳೆಹಾನಿ ಪ್ರದೇಶಗಳ ವೀಕ್ಷಣೆ ನಡೆಸಲು‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ನಗರ ಸಂಚಾರ ನಡೆಸಿದರು. ಮಳೆಯಿಂದ ಸಂಕಷ್ಟ ಎದುರಿಸಿದವರಿಂದ ಅಹವಾಲು ಆಲಿಸಿದರು.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ಬಳಿಯಿಂದ ಬಿಎಂಟಿಸಿ ವಿಶೇಷ ಬಸ್‌ನಲ್ಲಿ ಹೊರಟ ಮುಖ್ಯಮಂತ್ರಿ, ಮೊದಲಿಗೆ ಕುರುಬರಹಳ್ಳಿ ಬಳಿಯ ಜೆ.ಸಿ.ನಗರಕ್ಕೆ ಭೇಟಿ ನೀಡಿದರು. ಮನೆಗಳಿಗೆ ನೀರು ನುಗ್ಗಿ ತೊಂದರೆಗೆ ಸಿಲುಕಿದ್ದ ಕುಟುಂಬಗಳ ಸದಸ್ಯರನ್ನು ಮಾತನಾಡಿಸಿದರು. ರಾಜಕಾಲುವೆ ನೀರು ನುಗ್ಗಿ ಮನೆಯಲ್ಲಿನ ದವಸ– ಧಾನ್ಯಗಳು ನೀರು ಪಾಲಾಗಿರುವುದನ್ನು ನಿವಾಸಿಗಳು ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದರು.

‘ಮಳೆ ನೀರು ನುಗ್ಗಿದೆ ಎಂಬ ವಿಷಯ ತಿಳಿದ ಕೂಡಲೇ ರಾತ್ರಿಯೇ ಸ್ಥಳಕ್ಕೆ ಧಾವಿಸಿದ ಸಚಿವ ಕೆ.ಗೋಪಾಲಯ್ಯ ನೆರವಿಗೆ ನಿಂತರು’ ಎಂದು ಮುಖ್ಯಮಂತ್ರಿ ಬಳಿ ಕೆಲ ಮಹಿಳೆಯರು ಹೇಳಿಕೊಂಡರು.

ADVERTISEMENT

‘ಮನೆಯೊಳಗೆ ರಾಜಕಾಲುವೆ ನೀರು ಆಳೆತ್ತರದಷ್ಟು ನುಗ್ಗಿತ್ತು. ಮನೆಯಲ್ಲಿದ್ದ 5 ಚೀಲ ಅಕ್ಕಿಯನ್ನು ನಿನ್ನೆ ಬಿಸಾಡಿದೆವು. ಐದಾರು ತಿಂಗಳು ಬರುತ್ತಿದ್ದ ಅಕ್ಕಿ ಒಂದೇ ದಿನ ನೀರು ಪಾಲಾಯಿತು. ರಾಜಕಾರಣಿಗಳು ಒಂದು ದಿನ ಬಂದು ನಮಗೆ ಸಾಂತ್ವನ ಹೇಳಬಹುದು. ವರ್ಷವಿಡೀ ಕಷ್ಟಪಡಬೇಕಾದವರು ನಾವು. ಮತ್ತೆ ಮಳೆ ಬಂದರೆ ನೀರಿನಲ್ಲಿ ಮುಳುಗುವವರು ನಾವೇ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸದೆ ನಮಗೆ ಸಾಂತ್ವಾನ ಹೇಳಿ ಏನೂ ಪ್ರಯೋಜನ ಇಲ್ಲ’ ಎಂದು ಸಂತ್ರಸ್ತ ನಿವಾಸಿಗಳು ಮಾಧ್ಯಮಗಳ ಬಳಿ ನೋವು ತೋಡಿಕೊಂಡರು.

ಕಮಲಾನಗರದಲ್ಲಿ ಸಂತ್ರಸ್ತರ ಸಮಸ್ಯೆ ಆಲಿಸಿದ ಮುಖ್ಯಮಂತ್ರಿ, ನೇರವಾಗಿ ನಾಗವಾರ ಕಡೆಗೆ ಪ್ರಯಾಣ ಬೆಳಸಿದರು. ಬಸ್‌ನಲ್ಲೇ ನಾಗವಾರ ಮೆಟ್ರೊ ನಿಲ್ದಾಣ ವೀಕ್ಷಿಸಿದ ಮುಖ್ಯಮಂತ್ರಿ, ಅರೇಬಿಕ್ ಕಾಲೇಜು ಬಳಿ ನಡೆಯುತ್ತಿರುವ ಗೊಟ್ಟಿಗೆರೆ– ನಾಗವಾರ ಮೆಟ್ರೊ ಮಾರ್ಗದ ಕಾಮಗಾರಿ
ಯನ್ನು ವೀಕ್ಷಿಸಿದರು. ಮಳೆ ನೀರು ತುಂಬಿಕೊಂಡು ಕಾಮಗಾರಿಗೆ ಅಡಚಣೆ ಆಗಿರುವುದನ್ನು ಪರಿಶೀಲಿಸಿದರು.

ಅಲ್ಲಿಂದ ಎಚ್‌ಬಿಆರ್ ಬಡಾವಣೆಯ ಐದನೇ ಬ್ಲಾಕ್‌ನಲ್ಲಿ ರಾಜಕಾಲುವೆ ನೀರು ಮನೆಗಳಿಗೆ ನುಗ್ಗಿರುವ ಪ್ರದೇಶಕ್ಕೂ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು. ಅಲ್ಲಿಂದ ಹೆಬ್ಬಾಳದಲ್ಲಿನ ತ್ಯಾಜ್ಯನೀರು ಸಂಸ್ಕರಣಾ ಘಟಕಕ್ಕೆ (ಎಸ್‌ಟಿಪಿ) ಭೇಟಿ ನೀಡಿ, ಅದರ ನಿರ್ವಹಣಾ ಸಾಮರ್ಥ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಕಂದಾಯ ಸಚಿವ ಆರ್.ಅಶೋಕ, ವಸತಿ ಸಚಿವ ವಿ.ಸೋಮಣ್ಣ, ಅಬಕಾರಿ ಸಚಿವ ಕೆ.ಗೋಪಾಲಯ್ಯ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಕಾಂಗ್ರೆಸ್ ಶಾಸಕ ಕೆ.ಜೆ.ಜಾರ್ಜ್ ಹಾಗೂಬೈರತಿ ಸುರೇಶ್ ಜೊತೆಯಲ್ಲಿದ್ದರು.‌‌

ರಾಜಕಾಲುವೆ ಹೂಳೆತ್ತಲು ₹400 ಕೋಟಿ

‘ರಾಜಕಾಲುವೆ ಹೂಳು ತೆಗೆಯುವುದು ಸೇರಿ ತುರ್ತು ಪರಿಹಾರ ಕಾಮಗಾರಿ ಕೈಗೊಳ್ಳಲು ₹400 ಕೋಟಿಗೆ ಅನುಮೋದನೆ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರ ವೀಕ್ಷಣೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯಲು ಇರುವ ಅಡ್ಡಿಗಳನ್ನು ಸರಿಪಡಿಸಲು, ಹೂಳೆತ್ತಲು, ಶಿಥಿಲಗೊಂಡಿರುವ ಹಳೇ ತಡೆಗೋಡೆ ಸರಿಪಡಿಸಲು ತಕ್ಷಣವೇ ಹಣ ಬಿಡುಗಡೆ ಮಾಡಲಾಗುವುದು. ರಾಜಕಾಲುವೆಗೆ ನೀರು ಹರಿದು ಬರುವ ದ್ವಿತೀಯ ಮತ್ತು ತೃತೀಯ ಹಂತದ ಕಾಲುವೆಗಳ ಹೂಳೆತ್ತಲು ಮತ್ತು ದುರಸ್ತಿ ಕೈಗೊಳ್ಳಲು ಬಿಬಿಎಂಪಿ ಅನುದಾನ ಬಳಕೆ ಮಾಡಿಕೊಳ್ಳಲು ಸೂಚನೆ ನೀಡಿದ್ದೇನೆ’ ಎಂದರು.

‘ಮೇ ತಿಂಗಳಲ್ಲಿ 15 ದಿನ ಬೀಳಬೇಕಾದ ಮಳೆ ನಾಲ್ಕೇ ಗಂಟೆಗಳಲ್ಲಿ ಸುರಿದಿದ್ದರಿಂದ ಸಮಸ್ಯೆಯಾಗಿದೆ. ಸಮಸ್ಯೆ ಇರುವ ಕಡೆಯಷ್ಟೇ ರಾಜಕಾಲುವೆ ದುರಸ್ತಿಗೊಳಿಸಿದರೆ ಮುಂದಿನ ಮಳೆಗೆ ಇನ್ನೊಂದು ಕಡೆ ಸಮಸ್ಯೆ ಉದ್ಭವಿಸುತ್ತದೆ. ಮಳೆನೀರು ಹರಿಸುವ ಪ್ರತಿಯೊಂದು ಕಣಿವೆಯ ವ್ಯಾಪ್ತಿಯಲ್ಲಿ ರಾಜಕಾಲುವೆಗಳ ಅಭಿವೃದ್ಧಿಗೆ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗುತ್ತಿದೆ’ ಎಂದರು.

‘ಡಿಪಿಆರ್ ಸಿದ್ಧವಾದ ಕೂಡಲೇ ₹1,600 ಕೋಟಿ ಅನುದಾನ ಒದಗಿಸಿ ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಲಾಗುವುದು. ವೃಷಭಾವತಿ ರಾಜಕಾಲುವೆಯಲ್ಲಿ 10ಕ್ಕೂ ಹೆಚ್ಚು ಹಳೆ ಸೇತುವೆಗಳಿದ್ದು, ಅವುಗಳ ಮರುನಿರ್ಮಾಣಕ್ಕೂ ಯೋಜನೆ ರೂಪಿಸಲು ಸೂಚನೆ ನೀಡಿದ್ದೇನೆ’ ಎಂದು ವಿವರಿಸಿದರು.

ಹೆಬ್ಬಾಳದಲ್ಲಿ ನಿತ್ಯ 10 ಕೋಟಿ ಲೀಟರ್‌ ನೀರು ಶುದ್ಧೀಕರಿಸುವ ಸಾಮರ್ಥ್ಯದ ಎಸ್‌ಟಿಪಿ ಇದ್ದು, ಅಲ್ಲಿ ಹೆಚ್ಚುವರಿಯಾಗಿ ನಿತ್ಯ 6 ಕೋಟಿ ಲೀಟರ್‌ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯದ ಮತ್ತೊಂದು ಘಟಕದ ಕಾಮಗಾರಿಯನ್ನು ಜಲಮಂಡಳಿಯಿಂದ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ಮಳೆಯಿಂದ ಅತೀ ಹೆಚ್ಚು ಸಮಸ್ಯೆ ಅನುಭವಿಸುತ್ತಿರುವ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊರಮಾವು ವಡ್ಡರಪಾಳ್ಯ ಸೇರಿ ಹಲವು ಬಡಾವಣೆಗಳಿಗೆ ಮುಖ್ಯಮಂತ್ರಿ ಭೇಟಿ ನೀಡಲಿಲ್ಲ.

ವಡ್ಡರಪಾಳ್ಯದಲ್ಲಿ ವಸತಿ ಪ್ರದೇಶಕ್ಕೆ ನುಗ್ಗಿದ್ದ ಮಳೆ ನೀರು ಗುರುವಾರವೂ ಕಡಿಮೆಯಾಗದೆ ಜನ ಸಮಸ್ಯೆ ಎದುರಿಸಿದರು. ಎಚ್‌ಬಿಆರ್ ಬಡಾವಣೆವರೆಗೆ ಹೋದ ಮುಖ್ಯಮಂತ್ರಿ ಸ್ವಲ್ಪ ಮುಂದಕ್ಕೆ ಸಾಗಿದ್ದರೆ
ವಡ್ಡರಪಾಳ್ಯದ ಸಮಸ್ಯೆ ಕಣ್ತುಂಬಿಕೊಳ್ಳಬಹುದಿತ್ತು. ಆದರೆ, ಅಲ್ಲಿಗೆ ಭೇಟಿ ನೀಡಲಿಲ್ಲ. ಬುಧವಾರ ವಡ್ಡರಪಾಳ್ಯಕ್ಕೆ ಭೇಟಿ ನೀಡಿದ್ದ ಸಚಿವ ಬೈರತಿ ಬಸವರಾಜ್ ಅವರನ್ನು ನಿವಾಸಿಗಳು ತರಾಟೆಗೆ ತೆಗೆದುಕೊಂಡಿದ್ದರು.

ದಾಸರಹಳ್ಳಿ ವ್ಯಾಪ್ತಿಯ ರುಕ್ಮಿಣಿನಗರ, ಗುಂಡಪ್ಪ ಲೇಔಟ್‌, ಬೆಲ್ಮಾರ್ ಲೇಔಟ್‌ನಲ್ಲೂ ಮನೆಗಳಿಗೆ ನೀರು ನುಗ್ಗಿತ್ತು. ಅಲ್ಲಿಗೂ ಸಿ.ಎಂ ಭೇಟಿ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.