ADVERTISEMENT

ಭರವಸೆಯಾಗಿಯೇ ಉಳಿದ ರಾಜಕಾಲುವೆ ಅಭಿವೃದ್ಧಿಪಡಿಸುವ ಮುಖ್ಯಮಂತ್ರಿ ಘೋಷಣೆ

ಹೊರ ವಲಯ, ಒಳ ಬೇಗುದಿ

ವಿಜಯಕುಮಾರ್ ಎಸ್.ಕೆ.
Published 21 ಏಪ್ರಿಲ್ 2022, 21:03 IST
Last Updated 21 ಏಪ್ರಿಲ್ 2022, 21:03 IST
ಕೇಂದ್ರೀಯ ವಿಹಾರದ ಬಳಿ ರಾಜಕಾಲುವೆ ವಿಸ್ತರಣೆ ಕಾಮಗಾರಿ ನಡೆಯುತ್ತಿರುವುದು  –ಪ್ರಜಾವಾಣಿ ಚಿತ್ರಗಳು/ಪ್ರಶಾಂತ್ ಎಚ್.ಜಿ.
ಕೇಂದ್ರೀಯ ವಿಹಾರದ ಬಳಿ ರಾಜಕಾಲುವೆ ವಿಸ್ತರಣೆ ಕಾಮಗಾರಿ ನಡೆಯುತ್ತಿರುವುದು  –ಪ್ರಜಾವಾಣಿ ಚಿತ್ರಗಳು/ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಆಕಾಶದಲ್ಲಿ ಮೋಡ ಕಟ್ಟಿದರೆ ಅಥವಾ ಗುಡುಗಿನ ಶಬ್ದ ಕೇಳಿದರೆ ನಗರದ ಹಲವು ಬಡಾವಣೆಗಳ ಜನ ಭಯದಲ್ಲಿ ರಾತ್ರಿ ಕಳೆಯುವ ಪರಿಸ್ಥಿತಿ ಸೃಷ್ಟಿಯಾಗಿದೆ. ಮನೆಗಳು ಮುಳುಗುವ ಆತಂಕದಲ್ಲಿ ಅರೆನಿದ್ರೆಯಲ್ಲೇ ಜೀವನ ಸಾಗಿಸಬೇಕಾಗಿದೆ.

ಜೋರು ಮಳೆ ಬಂತೆಂದರೆ ನಗರದ ಹೊರ ವಲಯದ ಒಂದಿಲ್ಲೊಂದು ಬಡಾವಣೆಗೆ ನೀರು ನುಗ್ಗುವುದು ಸಾಮಾನ್ಯ ಎನ್ನುವಂತಾಗಿದೆ. ಇದನ್ನು ತಪ್ಪಿಸಲು ₹1,560 ಕೋಟಿ ಮೊತ್ತದಲ್ಲಿ ರಾಜಕಾಲುವೆಗಳ ಅಭಿವೃದ್ಧಿಪಡಿಸುವ ಯೋಜನೆಯನ್ನು ಬಿಬಿಎಂಪಿ ರೂಪಿಸಿದೆ. ಕಳೆದ ವರ್ಷ ಮಳೆಯಿಂದ ಆಗಿದ್ದ ಹಾನಿ ವೀಕ್ಷಣೆ ಸಂದರ್ಭದಲ್ಲಿ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದರು. ಆದರೆ, ಅದು ಭರವಸೆಯಾಗಿಯೇ ಉಳಿದಿದೆ.

ದಾಸರಹಳ್ಳಿ, ಬೊಮ್ಮನಹಳ್ಳಿ, ರಾಜರಾಜೇಶ್ವರಿನಗರ, ಯಲಹಂಕ, ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಬಡಾವಣೆಗಳಲ್ಲಿ ಪ್ರತಿವರ್ಷ ಮಳೆ ನೀರು ನುಗ್ಗುತ್ತಿದೆ. ದಾಸರಹಳ್ಳಿ ವ್ಯಾಪ್ತಿಯ ರುಕ್ಮಿಣಿನಗರ, ಗುಂಡಪ್ಪ ಬಡಾವಣೆ, ಆರ್.ಆರ್. ಕಾಲೇಜು, ರಾಯಲ್ ಎನ್‌ಕ್ಲೇವ್, ಬಿಟಿಎಸ್ ಬಡಾವಣೆ, ರಾಜಗೋಪಾಲನಗರ, ಚೊಕ್ಕಸಂದ್ರ ಸೇರಿದಂತೆ ಒಟ್ಟು 16ಕ್ಕೂ ಹೆಚ್ಚು ಪ್ರದೇಶಗಳ್ಲಿ ರಾಜಕಾಲುವೆ ನೀರು ಜನರ ನೆಮ್ಮದಿಯನ್ನು ಕಸಿದುಕೊಂಡಿದೆ.

ADVERTISEMENT

ರಾಯಲ್ ಎನ್‌ಕ್ಲೇವ್ ಬಡಾವಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಚಿನಲ್ಲಿದ್ದು, ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೆ ಸಮಸ್ಯೆ ಉದ್ಭವಿಸುತ್ತಿದೆ. ಇನ್ನೊಂದೆಡೆ ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಣ್ಣೂರು–ಬಾಗಲೂರು ರಸ್ತೆಯಲ್ಲಿರುವ ರಾಜಕಾಲುವೆ ನೀರು ಪ್ರತಿವರ್ಷ ಹೊರಮಾವು–ವಡ್ಡರಪಾಳ್ಯಕ್ಕೆ ನುಗ್ಗುತ್ತಿದೆ.

ಜಕ್ಕೂರಿನ ಜವಾಹರ ಲಾಲ್ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ (ಜೆಎನ್‌ಸಿಎಎಸ್‌ಆರ್‌) ‍ಪ್ರಯೋಗಾಲಯಗಳು ಜಲಾವೃತಗೊಂಡು ದಶಕಗಳ ವೈಜ್ಞಾನಿಕ ಸಂಶೋಧನೆ ನೀರುಪಾಲಾಗಿತ್ತು. ಯಲಹಂಕ ಬಳಿಯ ಕೇಂದ್ರೀಯ ವಿಹಾರಕ್ಕೆ ರಾಜಕಾಲುವೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಇಲ್ಲಿ ರಾಜಕಾಲುವೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ.

‘ಈಗ ಕಾಮಗಾರಿ ಅಂತಿಮ ಹಂತದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ತನಕ ಅಷ್ಟೇ ರಾಜಕಾಲುವೆ ನಿರ್ಮಾಣವಾಗಿದ್ದು, ಮುಂದಕ್ಕೆ ನೀರು ಹರಿದು ಹೋಗುವಂತೆ ಮಾಡಬೇಕಿದೆ. ಆ ಕಾಮಗಾರಿಯನ್ನು ನಿರ್ವಹಿಸಿದರೆ ಅನುಕೂಲ ಆಗಲಿದೆ’ ಎಂದು ಕೇಂದ್ರೀಯ ವಿಹಾರದ ಕಾರ್ಯದರ್ಶಿ ಕೃಷ್ಣ ಹೇಳಿದರು.

ಹೊಸಕೆರೆಹಳ್ಳಿ ಸಮೀಪದ ದತ್ತಾತ್ರೇಯ ಬಡಾವಣೆ, ಮಾನ್ಯತಾ ಟೆಕ್‌ ಪಾರ್ಕ್ ಹಿಂಭಾಗದ ಮರಿಯಣ್ಣನಪಾಳ್ಯ, ನಾಯಂಡಹಳ್ಳಿ ಬಳಿಯ ಪ್ರಮೋದ್ ಲೇಔಟ್, ಬೊಮ್ಮನಹಳ್ಳಿ ವ್ಯಾಪ್ತಿಯ ಎಚ್‌ಎಸ್‌ಆರ್‌ ಲೇಔಟ್‌, ಬಿಳೇಕಹಳ್ಳಿ, ಕೋಡಿಚಿಕ್ಕನಹಳ್ಳಿಯಲ್ಲೂ ಜನ ಆತಂಕದಲ್ಲಿ ದಿನ ದೂಡುತ್ತಿದ್ದಾರೆ.

‘ಮನೆಗಳಿಗೆ ನೀರು ನುಗ್ಗಿದಾಗ ಬರುವ ಅಧಿಕಾರಿಗಳು ಮತ್ತು ರಾಜಕಾರಣಿಗಳು ಭರವಸೆ ನೀಡಿ ಹೋಗುತ್ತಾರೆ. ಆದರೆ, ರಾಜಕಾಲುವೆಗಳ ಸ್ಥಿತಿ ಮಾತ್ರ ಹಾಗೇ ಉಳಿದಿದೆ. ಮುಖ್ಯಮಂತ್ರಿ ಕಳೆದ ವರ್ಷ ನೀಡಿದ ಭರವಸೆಯೂ ಇದೇ ರೀತಿ ಆಗಿದೆ. ಈಗಾಗಲೇ ಮುಂಗಾರು ಪೂರ್ವ ಮಳೆ ಶುರುವಾಗಿದೆ, ಮಳೆಗಾಲ ಇನ್ನೆರಡು ತಿಂಗಳಲ್ಲಿ ಆರಂಭವಾಗಲಿದೆ. ಅನುದಾನವನ್ನೇ ಬಿಡುಗಡೆ ಮಾಡದಿದ್ದರೆ ರಾಜಕಾಲುವೆಗಳು ಅಭಿವೃದ್ಧಿ ಆಗುವುದು ಹೇಗೆ, ನಾವು ನೆಮ್ಮದಿಯಿಂದ ನಿದ್ರೆ ಮಾಡುವುದು ಯಾವಾಗ’ ಎಂದು ರುಕ್ಮಿಣಿನಗರದ ದಿನೇಶ್ ಪ್ರಶ್ನಿಸುತ್ತಾರೆ.

ಕ್ರಿಯಾ ಯೋಜನೆ ಸಿದ್ಧಪಡಿಸಿರುವ ಬಿಬಿಎಂಪಿ

ನಗರದಲ್ಲಿ 842 ಕಿ.ಮೀ. ಉದ್ದದ ನಾಲ್ಕು ಪ್ರಮುಖ ರಾಜಕಾಲುವೆಗಳು ಮತ್ತು ದ್ವಿತೀಯ ಹಂತದ 97 ಕಿ.ಮೀ ಉದ್ದದ ರಾಜಕಾಲುವೆಗಳಿವೆ. 2021ರ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಸುರಿದ ಮಳೆಯಿಂದಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡು ಪ್ರವಾಹ ಉಂಟಾಗಿತ್ತು. ಹಲವೆಡೆ ರಾಜಕಾಲುವೆಗಳ ತಡೆಗೋಡೆಗಳು ಶಿಥಿಲಗೊಂಡಿದ್ದವು.

ಮುಖ್ಯಮಂತ್ರಿ ನೀಡಿದ್ದ ಭರವಸೆ ಆಧರಿಸಿ ಪ್ರಥಮ ಹಂತದ60.82 ಕಿ.ಮೀ ರಾಜಕಾಲುವೆಗಳು ಹಾಗೂ ದ್ವಿತೀಯ ಹಂತದ 97.10 ಕಿ.ಮೀ ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಲು ಒಟ್ಟು 292 ಕಾಮಗಾರಿಗಳನ್ನು ಕೈಗೊಳ್ಳಲು ಬಿಬಿಎಂಪಿ ಕ್ರಿಯಾ ಯೋಜನೆ ಸಿದ್ದಪಡಿದೆ.

ಅನುದಾನ ಪಡೆಯಲು ಸರ್ಕಾರದೊಂದಿಗೆ ನಡೆಸಿರುವ ಸಮನ್ವಯದ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಂದ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.