ಪ್ರಜಾವಾಣಿ ವಾರ್ತೆ
ಬೆಂಗಳೂರು: ನಗರದ ವಿವಿಧೆಡೆ ಭಾನುವಾರ ಮಧ್ಯಾಹ್ನದಿಂದ ಸಂಜೆವರೆಗೆ ಜಿಟಿ ಜಿಟಿ ಮಳೆ ಸುರಿಯಿತು, ಕೆಲವು ಬಡಾವಣೆಗಳಲ್ಲಿ ಬಿಟ್ಟು ಬಿಟ್ಟು ಮಳೆಯಾಯಿತು.
ಮಧ್ಯಾಹ್ನ 2 ಗಂಟೆಗೆ ತುಂತುರು ಹನಿಗಳೊಂದಿಗೆ ಆರಂಭವಾದ ಮಳೆ ಬಳಿಕ ಬಿರುಸಾಯಿತು. ರಾಜರಾಜೇಶ್ವರಿ ನಗರ, ಕೋಣನಕುಂಟೆ, ವಿಜಯನಗರ, ಮಲ್ಲೇಶ್ವರ, ಶೇಷಾದ್ರಿಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಯಾಗಿದೆ.
ನಗರದ ದಕ್ಷಿಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದಿದೆ. ನಾಯಂಡಹಳ್ಳಿ, ಆರ್.ಆರ್. ನಗರ, ಜ್ಞಾನಭಾರತಿ, ವಿದ್ಯಾಪೀಠ ಭಾಗದಲ್ಲಿ ಮಧ್ಯಾಹ್ನದಿಂದ ಸಂಜೆಯವರೆಗೆ ತುಂತುರು ಮಳೆ ಆಗಿದೆ.
ಸಿಟಿ ಮಾರುಕಟ್ಟೆ, ಶಾಂತಿನಗರ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್, ರೆಸಿಡೆನ್ಸಿ ರಸ್ತೆ ಸುತ್ತಮುತ್ತ ಬಿರುಸಿನ ಮಳೆಯಾಯಿತು. ಭಾನುವಾರ ರಜಾ ದಿನವಾದ ಕಾರಣ ಈ ರಸ್ತೆಗಳಲ್ಲಿ ಜನಸಂಚಾರ ಹೆಚ್ಚಿತ್ತು. ಕೆಲವರು ಮಳೆಯಲ್ಲಿ ನೆನೆಯುತ್ತಾ ಸಾಗಿದರು. ಇನ್ನೂ ಕೆಲವರು ರೈನ್ ಕೋಟ್, ಕೊಡೆಗಳ ಮೊರೆ ಹೋದರು.
ಬನಶಂಕರಿ, ವರ್ತುಲ ರಸ್ತೆ, ಪುಟ್ಟೇನಹಳ್ಳಿಯಲ್ಲಿ ಸಂಜೆ ಬಿರುಸಾಗಿ ಮಳೆ ಸುರಿದಿದೆ. ಗೊಟ್ಟಿಗೆರೆಯ ರಸ್ತೆಗಳಲ್ಲಿ ಗುಂಡಿಗಳಾಗಿದ್ದು, ಮಳೆ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.
ಎಲ್ಲೆಲ್ಲಿ ಎಷ್ಟೆಷ್ಟು ಮಳೆ ಹೆಮ್ಮಿಗೆಪುರ ವ್ಯಾಪ್ತಿಯಲ್ಲಿ 2.4 ಸೆಂ.ಮೀ ಮಳೆಯಾಯಿತು. ಕೆಂಗೇರಿಯಲ್ಲಿ 2.2 ಸೆಂ.ಮೀ ಅಂಜನಾಪುರ ಕೋಣನಕುಂಟೆ ಭಾಗದಲ್ಲಿ 1.9 ಸೆಂ.ಮೀ ಎಚ್.ಗೊಲ್ಲಹಳ್ಳಿಯಲ್ಲಿ 1.6 ಸೆಂ.ಮೀ ಅಂಜನಾಪುರ ಆರ್.ಆರ್.ನಗರ ಗೊಟ್ಟಿಗೆರೆಯಲ್ಲಿ ತಲಾ 1.5 ಸೆಂ.ಮೀನಷ್ಟು ಮಳೆಯಾದ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.