ADVERTISEMENT

ಬೆಂಗಳೂರಿನಲ್ಲಿ ಧಾರಾಕಾರ ಮಳೆ: 1 ಸಾವಿರಕ್ಕೂ ಅಧಿಕ ಮನೆಗಳೊಳಗೆ ನೀರು

​ಪ್ರಜಾವಾಣಿ ವಾರ್ತೆ
Published 19 ಮೇ 2022, 1:57 IST
Last Updated 19 ಮೇ 2022, 1:57 IST
ಪ್ರಮೋದ ಲೇಔಟ್‌ನ ಮನೆಯೊಂದರ ಕೊಠಡಿಯಲ್ಲಿ ಸಂಗ್ರಹವಾಗಿದ್ದ ಕೆಸರನ್ನು ಮನೆಯವರು ಸ್ವಚ್ಛಗೊಳಿಸುತ್ತಿರುವುದು
ಪ್ರಮೋದ ಲೇಔಟ್‌ನ ಮನೆಯೊಂದರ ಕೊಠಡಿಯಲ್ಲಿ ಸಂಗ್ರಹವಾಗಿದ್ದ ಕೆಸರನ್ನು ಮನೆಯವರು ಸ್ವಚ್ಛಗೊಳಿಸುತ್ತಿರುವುದು    

ಬೆಂಗಳೂರು: ನಗರದಲ್ಲಿ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿರಾಜಕಾಲುವೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ವಿವಿಧ ವಲಯಗಳ ವ್ಯಾಪ್ತಿಯ ತಗ್ಗು ಪ್ರದೇಶಗಳಲ್ಲಿ ಸಾವಿರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ ಎಂದು ಬಿಬಿಎಂಪಿ ತಿಳಿಸಿದೆ.

ಮಳೆಯಿಂದ ಸಮಸ್ಯೆ ಉಂಟಾದ ಕುರಿತು ಪಾಲಿಕೆಯ ನಿಯಂತ್ರಣ ಕೊಠಡಿಗೆ 254 ದೂರುಗಳು ಬಂದಿವೆ. 170 ಪ್ರದೇಶಗಳು ಜಲಾವೃತವಾಗಿವೆ. 34 ಮರಗಳು ಧರೆಗುರುಳಿವೆ. 60 ಇತರೆ ದೂರುಗಳು ವರದಿಯಾಗಿವೆ. ಪಾಲಿಕೆಯ ವಿಪತ್ತು ನಿರ್ವಹಣಾ ತಂಡಗಳು ಪರಿಹಾರ ಕಾರ್ಯದಲ್ಲಿ ನಿರತವಾಗಿವೆ. 200ಕ್ಕೂ ಹೆಚ್ಚು ಅಧಿಕಾರಿ ಹಾಗೂ ಸಿಬ್ಬಂದಿಗಳು ಅಹೋರಾತ್ರಿ ಕಾರ್ಯನಿರ್ವಹಿಸಿದ್ದಾರೆ.

‘ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು ಮನೆಗಳಿಗೆ ನೀರು ನುಗ್ಗಿರುವ ಕುರಿತು ಸಮೀಕ್ಷೆ ನಡೆಸಿ ಸಂತ್ರಸ್ತರ ನಿಖರ ಮಾಹಿತಿಯನ್ನು ಎರಡು ದಿನಗಳೊಳಗಾಗಿ ಸಂಗ್ರಹಿಸಬೇಕು ಎಂದು ಆದೇಶ ನೀಡಲಾಗಿದೆ. ಅರ್ಹ ಸಂತ್ರಸ್ತರ ಬ್ಯಾಂಕ್ ಖಾತೆಗೆ ₹ 25,000 ಮೊತ್ತವನ್ನು ನೇರವಾಗಿ ಜಮೆ ಮಾಡಲಾಗುತ್ತದೆ’ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಪೂರ್ವ ವಲಯದ ಡಾಲರ್ಸ್ ಕಾಲೊನಿ ಹಾಗೂ ಬೊಮ್ಮನಗಳ್ಳಿ ವಲಯದ ಎಚ್.ಎಸ್.ಆರ್ ಲೇಔಟ್‌ನ 6ನೇ ಸೆಕ್ಟರ್‌ನಲ್ಲಿ ಮಳೆನೀರು ನುಗ್ಗಿದ ತಗ್ಗು ಪ್ರದೇಶಗಳಿಗೆ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಮಂಗಳವಾರ ರಾತ್ರಿಯೇ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ಸ್ಥಳೀಯರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸಂತ್ರಸ್ತರ ಅಹವಾಲುಗಳಿಗೆ ಕೂಡಲೇ ಸ್ಪಂದಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಂಕರ ಮಠ ವಾರ್ಡ್‌ನ ಜೆ.ಸಿ ನಗರ 19ನೇ ಮುಖ್ಯ ರಸ್ತೆಯ ಬಳಿ ರಾಜಕಾಲುವೆ ತುಂಬಿ ಹರಿದು ಹಲವು ಮನೆಗಳಿಗೆ ನೀರು ನುಗ್ಗಿದ ಪ್ರದೇಶಗಳಿಗೆ ಅಬಕಾರಿ ಸಚಿವ ಕೆ.ಗೋಪಾಲಯ್ಯ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

‘ರಾಜಕಾಲುವೆಯನ್ನು ಹೂಳನ್ನು ನಿರಂತರವಾಗಿ ತೆರವುಗೊಳಿಸಬೇಕು. ರಾಜಕಾಲುವೆಗೆ ಸಂಪರ್ಕವಿರುವ ಚರಂಡಿಗಳಲ್ಲಿ ಹೂಳೆತ್ತಿ ಮಳೆ ನೀರು ಸರಾಗವಾಗಿ ಹರಿದು ಹೂಗುವಂತೆ ಮಾಡಬೇಕು’ ಎಂದು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು. ರಸ್ತೆ ಬದಿ ಚರಂಡಿಗಳಲ್ಲಿ ಹೂಳೆತ್ತಿ ಹಾಗೆಯೇ ಬಿಟ್ಟಿರುವುದನ್ನು ಗಮನಿಸಿದ ಅವರು, ಹೂಳನ್ನು ತೆರವು ಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ವಲಯವಾರು ಸರಾಸರಿ ಮಳೆ ವಿವರ

ವಲಯ; ಮಳೆ (ಮಿ.ಮೀ)

ಯಲಹಂಕ; 96.67

ಪಶ್ಚಿಮ; 95.50

ದಾಸರಹಳ್ಳಿ; 82.70

ಪೂರ್ವ; 81.91

ದಕ್ಷಿಣ; 79.44

ಮಹದೇವಪುರ; 67.81

ಆರ್‌.ಆರ್‌.ನಗರ; 61.89

ಬೊಮ್ಮನಹಳ್ಳಿ; 55.38

74.83 ಮಿ.ಮೀ

ನಗರದಲ್ಲಿ ಸುರಿದ ಸರಾಸರಿ ಮಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.